ಶಾರುಖ್ ಖಾನ್ ಬರ್ತ್‌ಡೇ ದಿನ ಫ್ಯಾನ್ಸ್‌ಗೆ ಗಿಫ್ಟ್: ಒಟಿಟಿಗೆ ಕಾಲಿಡುತ್ತಿದೆ ಈ ವರ್ಷದ ಬ್ಲಾಕ್‌ಬಸ್ಟರ್ 'ಜವಾನ್'
ಈ ವರ್ಷ ಪಠಾಣ್ ಮತ್ತು ಜವಾನ್ ಸಿನಿಮಾಗಳ ಜೊತೆಗೆ ಎರಡು ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿರುವ ನಟ ಶಾರುಖ್ ಖಾನ್ ಮತ್ತೊಮ್ಮೆ ತಾವು ಬಾಲಿವುಡ್ ಬಾದ್‌ಷಾ ಎಂಬುದನ್ನು ನಿರೂಪಿಸಿದ್ದಾರೆ. ಜವಾನ್ ಬಿಡುಗಡೆಯಾಗಿ ಆರನೇ ವಾರಕ್ಕೆ ಕಾಲಿಟ್ಟಿದೆ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಅಟ್ಲಿ ನಿರ್ದೇಶನದ ಜವಾನ್ ಸಿನಿ ಪ್ರೇಕ್ಷಕರಲ್ಲಿ ಸಕತ್ ಕ್ರೇಜ್ ಹುಟ್ಟುಹಾಕಿತ್ತು. ಸಿನಿಮಾ ಥಿಯೇಟರ್‌ಗಳಲ್ಲಿ ಇರುವಾಗಲೇ ಜನರು ಅದರ ಒಟಿಟಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಅವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.

ಒಟಿಟಿಗೆ ಬರಲಿದೆ ಬ್ಲಾಕ್‌ಬಸ್ಟರ್ 'ಜವಾನ್'
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅಭಿನಯದ ಆಕ್ಷನ್ ಡ್ರಾಮಾ ಜವಾನ್ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಡಿಜಿಟಲ್, ಸ್ಯಾಟಲೈಟ್, ಸಂಗೀತದ ಹಕ್ಕು ಸೇರಿದಂತೆ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು 250 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್ ಖರೀದಿಸಿದೆ.
ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಪ್ರದರ್ಶನ ನೀಡುತ್ತಿದೆ. ನಟ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಟೈಗರ್ 3 ನವೆಂಬರ್ 12 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಆದಾದ ನಂತರ ಜವಾನ್ ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆಯಬಹುದು ಎಂದು ಅಂದಾಜಿಸಲಾಗಿದೆ.
ಶಾರುಖ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಜವಾನ್ ಗಿಫ್ಟ್
ಜವಾನ್ ಅಂತಿಮವಾಗಿ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುತ್ತಿದೆ. ಆದರೆ, ಜವಾನ್ ಬಿಡುಗಡೆಯ ದಿನಾಂಕವೇ ಒಂದು ವಿಶೇಷ. ಏಕೆಂದರೆ, ನವೆಂಬರ್ 2 ರಂದು ಬರುವ ಶಾರುಖ್ ಖಾನ್ ಅವರ ಜನ್ಮದಿನವಿದ್ದು, ಜವಾನ್ ಅಂದೇ ಚೊಚ್ಚಲ ಪ್ರದರ್ಶನ ನೀಡಲಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಜವಾನ್‌ನ ಒಟಿಟಿ ಹಕ್ಕುಗಳನ್ನು ಹೊಂದಿದ್ದು, ನವೆಂಬರ್ 2 ರಂದು ಎಸ್‌ಆರ್‌ಕೆ ಅವರ ಜನ್ಮದಿನದಂದು ಒಟಿಟಿ ದೈತ್ಯದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿತ್ತು. ನೆಟ್‌ಫ್ಲಿಕ್ಸ್ ಟ್ವಿಟರ್‌ನಲ್ಲಿ ಶಾರುಖ್ ಖಾನ್ ಅವರ ಹುಟ್ಟುಹಬ್ಬದ ದಿನಗಳನ್ನು ಎಣಿಸುವ ಟ್ವೀಟ್ ಶೇರ್ ಮಾಡುತ್ತಿದ್ದು ದೊಡ್ಡ ಸುಳಿವನ್ನು ನೀಡಿದೆ.
ಜವಾನ್ ಈ ಬಾರಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ದಾಖಲೆ ಮಾಡಿದೆ. ಈ ಚಿತ್ರವು ಶಾರುಖ್ ಖಾನ್ ಅವರ ವೃತ್ತಿಜೀವನದ ಅತಿದೊಡ್ಡ ಗಳಿಕೆಯ ಸಿನಿಮಾವಾಗಿ ಹೊರಹೊಮ್ಮಿದೆ. ಜೊತೆಗೆ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ. ಬಿಡುಗಡೆಯಾದ ಮೊದಲ ದಿನವೇ 75 ಕೋಟಿ ರೂಪಾಯಿ ಗಳಿಸಿತು. ಪ್ರಪಂಚದಾದ್ಯಂತ ಸುಮಾರು 1,146 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು ದಾಖಲೆ ನಿರ್ಮಿಸಿದೆ.
ಜವಾನ್ ಸಿನಿಮಾ
ಈ ವರ್ಷದ ಸೂಪರ್ ಹಿಟ್ ಸಿನಿಮಾ ಜವಾನ್ ಅನ್ನು ನಿರ್ದೇಶಿಸಿದ್ದು ತಮಿಳು ನಿರ್ದೇಶಕ ಅಟ್ಲಿ. ನಟಿ ನಯನತಾರಾ ಮೊದಲ ಬಾರಿಗೆ ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ಸೇತುಪತಿ ಖಡಲ್ ವಿಲನ್ ಆಗಿ ಶಾರುಖ್ ಖಾನ್ ಎದುರು ಘರ್ಜಿಸಿದ್ದರು. ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿದ್ಧಿ ಡೋಗ್ರಾ, ಸುನಿಲ್ ಗ್ರೋವರ್ ಸೇರಿದಂತೆ ದೊಡ್ಡ ತಾರಾ ಬಳಗವೆ ಸಿನಿಮಾದಲ್ಲಿತ್ತು.


Click it and Unblock the Notifications











