Brat OTT: ಬಿಗ್ ಸರ್‌ಪ್ರೈಸ್; ದಿಢೀರ್ ಓಟಿಟಿಗೆ ಬಂದ ಸೂಪರ್ ಹಿಟ್ 'ಬ್ರ್ಯಾಟ್'; ಈಗ್ಲೇ ನೋಡಿ
ಡಾರ್ಲಿಂಗ್ ಕೃಷ್ಣ ನಟನೆಯ ಲೇಟೆಸ್ಟ್ ಹಿಟ್ ಸಿನಿಮಾ 'ಬ್ರ್ಯಾಟ್' ಓಟಿಟಿಗೆ ಬಂದಿದೆ. ಇತ್ತೀಚೆಗೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿತ್ತು. 'ಕಾಂತಾರ- 1' ಬಳಿಕ ಕನ್ನಡದಲ್ಲಿ ಹಿಟ್ ಲಿಸ್ಟ್ ಸೇರಿದ ಏಕೈಕ ಸಿನಿಮಾ ಇದು. ಶಶಾಂಕ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಯದುನಂದನ್ ಮತ್ತು ರವಿ ಚಕ್ರವರ್ತಿ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದು ಮಂಜುನಾಥ್ ಕಂದಕೂರ್ ಬಂಡವಾಳ ಹೂಡಿದ್ದರು. ಅರ್ಜುನ್ ಜನ್ಯಾ ಸಂಗೀತದಲ್ಲಿ 'ನಾನೇ ನೀನಂತೆ ನೀನಂತೆ' ಹಾಗೂ 'ಗಂಗಿ ಗಂಗಿ' ಸಾಂಗ್‌ಗಳು ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿದ್ದವು. ಅಕ್ಟೋಬರ್ 31ರಂದು 'ಬ್ರ್ಯಾಟ್' ಸಿನಿಮಾ ಬಿಡುಗಡೆ ಆಗಿತ್ತು. ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮೌತ್ ಟಾಕ್ ದೊಡ್ಡದಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತಂದಿತ್ತು.

'ಕೌಸಲ್ಯ ಸುಪ್ರಜಾ ರಾಮ' ಚಿತ್ರದಲ್ಲಿ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ 2ನೇ ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಓಟಿಟಿ ಮೂಲಕ ಈಗ ಮತ್ತಷ್ಟು ಜನರನ್ನು ಸಿನಿಮಾ ರಂಜಿಸುತ್ತಿದೆ. ದಿಢೀರನೆ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ. ಸ್ವತಃ ನಿರ್ದೇಶಕ ಶಶಾಂಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
'ಬ್ರ್ಯಾಟ್' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದರು. ಓಟಿಟಿ ರೈಟ್ಸ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಅಂತಿಮವಾಗಿ ಪ್ರೈಂ ವೀಡಿಯೋ ಒಳ್ಳೆ ಬೆಲೆಗೆ ರೈಟ್ಸ್ ಕೊಂಡುಕೊಂಡಿತ್ತು. ದೊಡ್ಡ ದೊಡ್ಡ ಸಿನಿಮಾಗಳೇ 4 ವಾರಕ್ಕೆ ಓಟಿಟಿಗೆ ಬರ್ತಿದೆ. 'ಕಾಂತಾರ- 1' ಸಿನಿಮಾ ಕೂಡ ತಿಂಗಳು ಮುಗಿಯುವ ಮುನ್ನ ದಕ್ಷಿಣದ 4 ಭಾಷೆಗಳಲ್ಲಿ ಓಟಿಟಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅದೇ ರೀತಿ 'ಬ್ರ್ಯಾಟ್' ಸಿನಿಮಾ ಕೂಡ ಬಂದಿದೆ.
ತಂದೆ ಮಹದೇವಯ್ಯ(ಅಚ್ಯುತ್ ಕುಮಾರ್)ಪ್ರಾಮಾಣಿಕ ಪೊಲೀಸ್ ಕಾನ್‌ಸ್ಟೇಬಲ್.. ಆದರೆ ಮಗ ಕೃಷ್ಣ ಪಕ್ಕಾ 'ಬ್ರ್ಯಾಟ್'. ಅಂದರೆ ದಾರಿ ತಪ್ಪಿದ ಮಗ. ಚಿಕ್ಕ ವಯಸ್ಸಿನಲ್ಲೇ ಇಸ್ಪೀಟ್ ಆಡೋಕೆ ಶುರು ಮಾಡುವ ಆತ ಅನಿವಾರ್ಯ ಕಾರಣದಿಂದ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿರುತ್ತಾನೆ. ಆದರೆ ಜೀವನದಲ್ಲಿ ನಡೆಯುವ ಒಂದು ಘಟನೆ ತಿರುವು ನೀಡುತ್ತದೆ. ಕೃಷ್ಣ ಬೆಟ್ಟಿಂಗ್ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಾನೆ. ಮುಂದೆ ಅವನ ಜೀವನದ ಏರಿಳಿತಗಳ ಕಥೆಯೇನು? ನಡುವೆ ಬರುವ ನಾಯಕಿ ಮನೀಷಾ(ಮನೀಷಾ ಕುಂದಕೂರ್) ಯಾರು? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ ಈ ಚಿತ್ರದಲ್ಲಿದೆ.
ಹಣದ ಆಸೆಗೆ ಬಿದ್ದ ಯುವಕ ಏನೆಲ್ಲಾ ಮಾಡುತ್ತಾನೆ ಎನ್ನುವ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟನೆ ಇಷ್ಟವಾಗುತ್ತದೆ. ಡ್ರ್ಯಾಗನ್ ಮಂಜು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಇಂಗ್ಲೀಷ್ ಮಾತನಾಡುವ ಸಾಹಸ ಮಾಡಿ ನಗಿಸುತ್ತಾರೆ. ಜೊತೆಗೆ ರಮೇಶ್ ಇಂದಿರಾ ಇಷ್ಟವಾಗುತ್ತಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದ್ದ 'ಬ್ರ್ಯಾಟ್' ಈಗ ಓಟಿಟಿಯಲ್ಲೇ ವೀಕ್ಷಣೆಗೆ ಲಭ್ಯವಿದೆ.
ಸಾಮನ್ಯರ ಜೀವನಕ್ಕೆ ಹತ್ತಿರವಾದ ಸಿನಿಮಾಗಳನ್ನು ಮಾಡುತ್ತಾ ಬಂದವರು ಶಶಾಂಕ್. 'ಮೊಗ್ಗಿನ ಮನಸು', 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣಲೀಲಾ', 'ತಾಯಿಗೆ ತಕ್ಕ ಮಗ' ಹೀಗೆ ಸದಭಿರುಚಿಯ ಸಿನಿಮಾಗಳಿಂದ ಗಮನ ಸೆಳೆದವರು. 'ಬ್ರ್ಯಾಟ್' ಚಿತ್ರದಲ್ಲೂ ಅಂಥದ್ದೇ ಮ್ಯಾಜಿಕ್ ಮಾಡಿದ್ದರು. ಸಣ್ಣಪುಟ್ಟ ತಪ್ಪುಗಳ ಹೊರತಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಈಗ ನೀವೇ ಓಟಿಟಿಯಲ್ಲಿ ಈ ಸಿನಿಮಾ ನೋಡಿ ಎಂಜಾಯ್ ಮಾಡಿ.


Click it and Unblock the Notifications











