ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾ ಕೊಂಡುಕೊಳ್ಳಲು ಹಿಂದೇಟು ಹಾಕುವುದ್ಯಾಕೆ?- ಶಶಾಂಕ್ ಪ್ರತಿಕ್ರಿಯೆ
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಆರೋಪ ಇದೆ. ಕನ್ನಡದಲ್ಲಿ ವೆಬ್ ಸೀರಿಸ್ ಕಮ್ಮಿ. ಸ್ಟಾರ್ ನಟರ ಸಿನಿಮಾಗಳು ಮಾತ್ರ ಓಟಿಟಿಗೆ ಬರ್ತಿವೆ. ಸಣ್ಣ ಬಜೆಟ್, ಮೀಡಿಯಂ ಬಜೆಟ್ ಸಿನಿಮಾಗಳನ್ನು ಕೇಳುವವರು ಇಲ್ಲ. ಸಿನಿಮಾ ಸೋತುಬಿಟ್ಟರೆ ಓಟಿಟಿ ಸಂಸ್ಥೆಗಳು ಬೇಡವೇ ಬೇಡ ಎನ್ನುತ್ತವೆ. ಅದೇ ಕಾರಣಕ್ಕೆ 'ಎಕ್ಕ' ರೀತಿಯ ಸಿನಿಮಾ ನಾಲ್ಕೈದು ತಿಂಗಳ ಬಳಿಕ ಡಿಜಿಟಲ್ ವೇದಿಕೆಗೆ ಬಂದಿತ್ತು.
ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಾರೆ ಎನ್ನುವ ಅಪವಾದ ಕೂಡ ಇದೆ. ಓಟಿಟಿ ಸಂಸ್ಥೆಗಳು ಹೇಳಿದಂತೆ ಕೇಳಬೇಕು, ಸಿನಿಮಾ ಯಾವಾಗ ಓಟಿಟಿ ಬರಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಬೇಗ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲು ಇದೇ ಕಾರಣ ಎನ್ನುವವರು ಇದ್ದಾರೆ.

ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ಬ್ಯುಸಿನೆಸ್. ಅವರಿಗೆ ಬೇಕಾದ ಸಿನಿಮಾ ಕೊಂಡುಕೊಳ್ಳುತ್ತಾರೆ. ಕನ್ನಡ ಕಂಟೆಂಟ್ ಅನ್ನು ಹೆಚ್ಚು ನೋಡಿದರೆ ಸಹಜವಾಗಿಯೇ ಓಟಿಟಿ ಸಂಸ್ಥೆಗಳು ರೈಟ್ಸ್ ಕೇಳುತ್ತಾರೆ ಎಂದು ನಿರ್ದೇಶಕ ಶಶಾಂಕ್ ಫಿಲ್ಮಿಬೀಟ್ ಕನ್ನಡಕ್ಕೆ ಹೇಳಿದ್ದಾರೆ. ಶಶಾಂಕ್ ನಿರ್ದೇಶನದ 'ಬ್ರ್ಯಾಟ್' ಸಿನಿಮಾ ಇತ್ತೀಚೆಗೆ ಹಿಟ್ ಆಗಿತ್ತು. ಒಂದೇ ತಿಂಗಳಿಗೂ ಓಟಿಟಿಗೂ ಬಂದಿದೆ.
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ನೋಡುವವರು ಕಮ್ಮಿ. ಹಾಗಾಗಿ ರೈಟ್ಸ್ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ. "ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ವ್ಯಾಪಾರ. ನಾನು 10 ರೂಪಾಯಿ ಕೊಟ್ರೆ ವಾಪಸ್ ಎಷ್ಟು ಬರುತ್ತೆ ಅಂತ್ಲೇ ಎಲ್ಲರೂ ಲೆಕ್ಕ ಹಾಕುತ್ತಾರೆ. ವ್ಯಾಪಾರಲ್ಲಿ ಎಮೋಷನ್ ಲೆಕ್ಕಕ್ಕೆ ಬರಲ್ಲ. ಅಷ್ಟಕ್ಕೂ ಕನ್ನಡ ಸಿನಿಮಾಗಳನ್ನು ಯಾಕೆ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲ್ಲ ಅಂದ್ರೆ ಅದಕ್ಕೆ ಕಾರಣ ಅದನ್ನು ನೋಡುವವರ ಸಂಖ್ಯೆ ಕಮ್ಮಿ ಇದೆ. ಅದನ್ನು ಮುಖದ ಮೇಲೆ ಹೊಡೆದಂತೆ ಹೇಳ್ತಾರೆ" ಎಂದಿದ್ದಾರೆ.

ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಯಾಕೆ ನೋಡ್ತಿಲ್ಲ ಎನ್ನುವುದಕ್ಕೆ ಪರಿಹಾರ ಇಲ್ಲ ಎಂದು ಶಶಾಂಕ್ ಅಭಿಪ್ರಾಯಪಟ್ಟಿದ್ದಾರೆ. "ಓಟಿಟಿಯಲ್ಲಿ ಕನ್ನಡ ಸಿನಿಮಾ ನೋಡುವವರು ಇಷ್ಟೇ ಜನ ಅಂತಾರೆ. ಕಾರಣ ಅವರ ಬಳಿಕ ಡಾಟಾ ಇರುತ್ತೆ. ಕರ್ನಾಟಕದಲ್ಲಿ ಓಟಿಟಿ ಚಂದಾದಾರರ ಸಂಖ್ಯೆ ಇಷ್ಟು. ಅದರಲ್ಲಿ ಮೂಲ ಕನ್ನಡ ಸಿನಿಮಾಗಳನ್ನು ನೋಡುತ್ತಿರುವವರ ಸಂಖ್ಯೆ ಕಮ್ಮಿಯಿದೆ. ಹಾಗಾಗಿ ನಾನು ಕೊಟ್ಟ ಹಣಕ್ಕೆ ಲಾಭ ಬರಲ್ಲ. ಹಾಗಾಗಿ ನಿಮ್ಮ ಚಿತ್ರಕ್ಕೆ ಇಷ್ಟು ಹಣ ಕೊಡೋಕೆ ಆಗಲ್ಲ ಅಂತಾರೆ. ಅದಕ್ಕೆ ನಮ್ಮ ಬಳಿ ಉತ್ತರ ಇಲ್ಲ. ಓಟಿಟಿಗೆ ಬಂದಾಗಲೂ ಜನ ಯಾಕೆ ಕನ್ನಡ ಸಿನಿಮಾಗಳನ್ನು ನೋಡ್ತಿಲ್ಲ. ಅದಕ್ಕೆ ಪರಿಹಾರ ಇಲ್ಲ" ಎಂದಿದ್ದಾರೆ.
ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಓಟಿಟಿಗೆ ಬಿಟ್ಟರೆ ನಮ್ಮವರು ನೋಡ್ತಾರೆ. ಆದರೆ ಮೂಲಕ ಕನ್ನಡ ಸಿನಿಮಾ, ವೆಬ್ ಸೀರಿಸ್ ಯಾಕೆ ನೋಡಲ್ಲ ಎನ್ನುವುದು ಓಟಿಟಿ ಸಂಸ್ಥೆಗಳ ವಾದ ಎನ್ನುತ್ತಾರೆ ಶಶಾಂಕ್. "ಕನ್ನಡ ಸಿನಿಮಾ ಯಾಕೆ ತಗೋಬೇಕು, ಬೇರೆ ಭಾಷೆ ಸಿನಿಮಾಗಳನ್ನು ಡಬ್ ಮಾಡಿ ಬಿಟ್ರೆ ಸಾಕಲ್ಲ. ಈ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇರಲ್ಲ. ಒಳ್ಳೆ ಸಿನಿಮಾ ಮಾಡಿದ್ರೆ ನೋಡ್ತಾರೆ ಅಂತಾರೆ. ಹಾಗಂತ ಎಲ್ಲವೂ 'ಕಾಂತಾರ', 'ಕೆಜಿಎಫ್' ಆಗಲ್ಲ. ತಮಿಳು, ತೆಲುಗಿನಲ್ಲಿ ಎಷ್ಟು ದೊಡ್ಡ ಸಿನಿಮಾಗಳು ಬಂದಿವೆ ಹೇಳಿ. ಅದು ಬಿಟ್ಟು ಒಂದಷ್ಟು ಒಳ್ಳೆ ಸಿನಿಮಾಗಳು ಬರ್ತಾವೆ. ಅಂತಹ ಸಿನಿಮಾಗಳನ್ನು ಜನ ನೋಡಿ ಬೆಳೆಸಬೇಕು. ಓಟಿಟಿಯವರ ಬಳಿ ನಾವು ಜಗಳ ಮಾಡೋಕೆ ಆಗಲ್ಲ" ಎಂದಿದ್ದಾರೆ.
ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಓಟಿಟಿ ಸಮಸ್ಯೆ ಕೂಡ ಒಂದು. ಎಲ್ಲರೂ ಒಗ್ಗಟ್ಟಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾರಿಗೂ ಇಂಡಸ್ಟ್ರಿ ಬಗ್ಗೆ ಕಾಳಜಿ ಇಲ್ಲ. ಎಲ್ಲರೂ ಅವರವರ ಸಿನಿಮಾ ಬಗ್ಗೆ ಯೋಚಿಸುತ್ತಾರೆ ಏನು ಮಾಡಲು ಸಾಧ್ಯವಿಲ್ಲ ಎಂದು ನಿರ್ದೇಶಕ ಶಶಾಂಕ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications