Karataka Damanaka OTT: ಸದ್ದಿಲ್ಲದೇ ಓಟಿಟಿಗೆ ಬಂದ 'ಕರಟಕ ದಮನಕ'; ಈಗ್ಲೇ ನೋಡಿ
ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ 'ಕರಟಕ ದಮನಕ' ಚಿತ್ರಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದರು. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಬರೋಬ್ಬರಿ 4 ತಿಂಗಳ ಬಳಿಕ ಇದೀಗ ಸಿನಿಮಾ ಓಟಿಟಿಗೆ ಬಂದಿದೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಜೊತೆ ಈ ಬಾರಿ ಹುಟ್ಟುಹಬ್ಬ ಆಚರಣೆಗೆ ಶಿವಣ್ಣ ಬ್ರೇಕ್ ಹಾಕಿದ್ದಾರೆ. ರಾತ್ರಿಯೇ ಆಪ್ತರ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. 'ಭೈರತಿ ರಣಗಲ್' ಟೀಸರ್, 'ಭೈರವನ ಕೊನೆ ಪಾಠ' ಹಾಗೂ 'ಉತ್ತರಕಾಂಡ'ದ ಮಲೀಕನ ಫಸ್ಟ್ ಲುಕ್ ಪೋಸ್ಟರ್ ಸೇರಿದಂತೆ ಸಾಕಷ್ಟು ಸರ್‌ಪ್ರೈಸ್‌ಗಳು ಹೊರಬಿದ್ದಿದೆ. ಇದೇ ಸಾಲಿಗೆ 'ಕರಟಕ ದಮನಕ' ಸಿನಿಮಾ ಸೇರಿದೆ.

ರಾಕ್‌ಲೈನ್ ವೆಂಕಟೇಶ್ 'ಕರಟಕ ದಮನಕ' ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಚಿತ್ರದಲ್ಲಿ ಶಿವಣ್ಣ-ಪ್ರಭುದೇವಾಗೆ ನಾಯಕಿಯರಾಗಿ ನಟಿಸಿದ್ದರು. ವಿ. ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಒಂದ್ಕಡೆ ಕಳ್ಳತನ, ವಂಚನೆಯನ್ನೇ ಕಸುಬಾಗಿಸಿಕೊಂಡ ವಿರೂಪಾಕ್ಷಿ (ಶಿವರಾಜ್‌ಕುಮಾರ್) ಹಾಗೂ ಬಾಲರಾಜು (ಪ್ರಭುದೇವ). ಮತ್ತೊಂದು ಕಡೆ ನಂದಿಕೋಲೂರಿನಲ್ಲಿ ನೀರಿಗಾಗಿ ಹಾಹಾಕಾರ. ನೀರಿಲ್ಲದೇ ಊರು ಬಿಟ್ಟು ಗುಳೆ ಹೊರಟ ಜನ. ಜೈಲರ್ ಸಲಹೆಯಂತೆ ವಿರೂ ಹಾಗೂ ಬಾಲು ನಂದಿ ಕೋಲೂರಿಗೆ ಬರ್ತಾರೆ. ದುಷ್ಟರಿಗೆ ಸಿಂಹಸ್ವಪ್ನರಾಗಿ ಇವರಿಬ್ಬರು ಹೇಗೆ ಊರಿನಲ್ಲಿ ಮತ್ತೆ ಜಾತ್ರೆಯ ಸಂಭ್ರಮ ತರ್ತಾರೆ? ಎನ್ನುವುದು 'ಕರಟಕ ದಮನಕ' ಚಿತ್ರದ ಒನ್‌ಲೈನ್ ಸ್ಟೋರಿ.
ಮೇಲ್ನೋಟಕ್ಕೆ ಚಿತ್ರದ ಆಶಯ, ಅದನ್ನು ತೆರೆಗೆ ತರುವಲ್ಲಿ ತಂಡ ಮಾಡಿದ್ದ ಪ್ರಯತ್ನ ಚೆನ್ನಾಗಿತ್ತು. ಆದರೆ ಒಟ್ಟಾರೆ ಸಿನಿಮಾ ಆಗಿ 'ಕರಟಕ ದಮನಕ' ಸೋತಿತ್ತು ಎನ್ನಬಹುದು. ಆದರೂ ಒಂದಷ್ಟು ಒಳ್ಳೆ ಅಂಶಗಳು ಚಿತ್ರದಲ್ಲಿವೆ. ಸೆಟ್ಟೇರಿದ್ದ ದಿನದಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ 'ಕರಟಕ ದಮನಕ' ಸಿನಿಮಾ ಸಖತ್ ಸದ್ದು ಮಾಡಿದ್ದು ಸುಳ್ಳಲ್ಲ. ಆದರೆ ತೆರೆಮೇಲೆ ಆ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು. ಇದೀಗ ಸಿನಿಮಾ ಓಟಿಟಿಗೆ ಬಂದಿದೆ.

ಅಮೇಜಾನ್ ಪ್ರೈಂನಲ್ಲಿ 'ಕರಟಕ ದಮನಕ' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಸಾಮಾನ್ಯವಾಗಿ ತೆರೆಕಂಡ 45 ದಿನಕ್ಕೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಾವೆ. 25 ದಿನಕ್ಕೆ ದೊಡ್ಡ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿವೆ. ಆದರೆ ಯಾಕೋ 'ಕರಟಕ ದಮನಕ' 4 ತಿಂಗಳ ಬಳಿಕ ಬಂದಿದೆ. ಓಟಿಟಿ ಸಂಸ್ಥೆಗಳು ಸಿನಿಮಾ ಕೊಂಡುಕೊಳ್ಳಲು ಮುಂದಿನ ಬರುತ್ತಿಲ್ಲ ಎನ್ನುವ ಗುಸುಗುಸು ಕೂಡ ಶುರುವಾಗಿತ್ತು. ಆದರೆ ಅಂತಿಮವಾಗಿ ಪ್ರೈಂ ವೀಡಿಯೋಗೆ ಸಿನಿಮಾ ಎಂಟ್ರಿ ಕೊಟ್ಟಿದೆ.
'ಕರಟಕ ದಮನಕ' ಜೊತೆ ಮಾರ್ಚ್ 8ಕ್ಕೆ ಜಗ್ಗೇಶ್ ನಟನೆಯ 'ರಂಗನಾಯಕ' ಸಿನಿಮಾ ಕೂಡ ತೆರೆಕಂಡಿತ್ತು. ಆ ಸಿನಿಮಾ ಕೂಡ ಹೀನಾಯವಾಗಿ ಸೋತಿತ್ತು. ಎಷ್ಟರಮಟ್ಟಿಗೆ ಅಂದ್ರೆ ಖುದ್ದು ಜಗ್ಗೇಶ್ ಆ ಬಗ್ಗೆ ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದರು.


Click it and Unblock the Notifications











