Vedha on OTT : ಗಿಲ್ಲಕ್ಕೋ ಶಿವ ಗಿಲ್ಲಕ್ಕೋ: 'ವೇದ' ಓಟಿಟಿ ರಿಲೀಸ್ ಡೇಟ್ ಕನ್ಫರ್ಮ್
'ವೇದ' ಆಗಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಆರ್ಭಟ ಥಿಯೇಟರ್‌ಗಳಲ್ಲಿ ಮುಂದುವರೆದಿದೆ. ಎ. ಹರ್ಷ - ಶಿವಣ್ಣ 4ನೇ ಬಾರಿ ಒಟ್ಟಿಗೆ ಸೇರಿ ಮಾಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸಿನಿಮಾ 50ನೇ ದಿನದತ್ತ ದಾಪುಗಾಲು ಇಟ್ಟಿದೆ. ಇದೇ ಸಮಯದಲ್ಲಿ ಚಿತ್ರದ ಓಟಿಟಿ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ.
ಗೀತಾ ಪಿಕ್ಚರ್ಸ್ ಹಾಗೂ ಜೀ ಸ್ಟುಡಿಯೋ ಸಂಸ್ಥೆ ಜಂಟಿಯಾಗಿ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಡಿಸೆಂಬರ್ 23ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿತ್ತು. ಶಿವಣ್ಣನ ಜೊತೆ ಅದಿತಿ ಅರುಣ್ ಸಾಗರ್ ಅಭಿನಯಕ್ಕೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಉಮಾಶ್ರೀ, ಶ್ವೇತಾ ಚೆಂಗಪ್ಪ, ಗಾನವಿ ಲಕ್ಷ್ಮಣ್ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ 2 ವಾರಕ್ಕೆ 25 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಇನ್ನು ಚೆನ್ನೈ, ಹೈದರಾಬಾದ್‌ನಲ್ಲೂ 'ವೇದ' ಚಿತ್ರದ ಕನ್ನಡ ವರ್ಷನ್ ರಿಲೀಸ್ ಆಗಿತ್ತು.
ಮಗಳ ಮೇಲೆ ನಡೆದ ದೌರ್ಜನ್ಯಕ್ಕೆ 'ವೇದ' ಸೇಡು ತೀರಿಸಿಕೊಳ್ಳುವ ಕಥೆ ಈ ಚಿತ್ರದಲ್ಲಿದೆ. ಆ ಹಾದಿಯಲ್ಲಿ ಮಗಳು ಕೂಡ ಜೊತೆ ಸೇರುತ್ತಾಳೆ. ಚಿತ್ರದಲ್ಲಿ ಶಿವಣ್ಣನ ಪಾತ್ರಕ್ಕೆ ಸಿಕ್ಕಿರುವ ಮಹತ್ವ ಉಳಿದ ಪಾತ್ರಗಳಿಗೂ ಸಿಕ್ಕಿರುವುದು ವಿಶೇಷ. ಸೆಂಚುರಿ ಸ್ಟಾರ್ 125ನೇ ಸಿನಿಮಾ 'ವೇದ' ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ.
ಫೆ. 10ಕ್ಕೆ ಓಟಿಟಿಗೆ 'ವೇದ'
ಥಿಯೇಟರ್‌ಗಳಲ್ಲಿ ಸದ್ದು ಮಾಡ್ತಿರುವ 'ವೇದ' ಸಿನಿಮಾ ಓಟಿಟಿಗೆ ಬರೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಫೆಬ್ರವರಿ 10ಕ್ಕೆ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ವತಃ ಜೀ5 ಇದನ್ನು ಖಚಿತಪಡಿಸಿದೆ. ಸಿನಿಮಾ 50 ಪೂರೈಸುತ್ತಿದ್ದಂತೆ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ನೋಡಲು ಸಿಗಲಿದೆ. ಸಿನಿರಸಿಕರಿಗೆ ಮತ್ತೊಮ್ಮೆ 'ವೇದ'ನ ಆರ್ಭಟವನ್ನು ಕಣ್ತುಂಬಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ 'ವೇದ' ಸಿನಿಮಾ ಪ್ರಸಾರವಾಗಲಿದೆ.

ಫೆ. 9ಕ್ಕೆ 'ಶಿವ ವೇದ' ರಿಲೀಸ್
ಇನ್ನು 'ಶಿವ ವೇದ' ಹೆಸರಿನಲ್ಲಿ 'ವೇದ' ಸಿನಿಮಾ ತೆಲುಗಿಗೆ ಡಬ್ ಆಗಿದೆ. ಚಿತ್ರದ ತೆಲುಗು ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಕನ್ನಡ ವರ್ಷನ್ ಓಟಿಟಿಗೆ ಬರೋಕೆ ಒಂದು ದಿನ ಮುನ್ನ ತೆಲುಗು ವರ್ಷನ್ ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಆಗಲಿದೆ. ಶಿವಣ್ಣ ಬಾಲಯ್ಯ ನಟನೆಯ 'ಗೌತಮ ಪುತ್ರ ಶಾತಕರ್ಣಿ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇನ್ನು ಅಣ್ಣಾವ್ರ ಮಗನಾಗಿ ತೆಲುಗು ಪ್ರೇಕ್ಷಕರಿಗೂ ಶಿವಣ್ಣನ ಮುಖ ಚಿರಪರಿಚಿತ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಭಾಷೆಗಿಂತ ಕಂಟೆಂಟ್ ಮುಖ್ಯವಾಗುತ್ತಿದೆ. ಕಂಟೆಂಟ್ ಚೆನ್ನಾಗಿದ್ದರೆ ಯಾವ ಭಾಷೆ ಸಿನಿಮಾ ಆದರೂ ಜನ ನೋಡಲು ಸಿದ್ಧರಿದ್ದಾರೆ. ಇನ್ನು 'ವೇದ' ಕಥೆ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗುವ ಸುಳಿವು ಸಿಗುತ್ತಿದೆ. ನಿರ್ಮಾಪಕ ವಿ. ಆರ್ ಕೃಷ್ಣ ಮಂಡಪಟ್ಟಿ ಚಿತ್ರದ ತೆಲುಗು ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ.

ಮತ್ತೆರಡು ಭಾಷೆಗಳಲ್ಲಿ 'ವೇದ'
ತೆಲುಗು ನಂತರ 'ವೇದ' ತಮಿಳು ಹಾಗೂ ಮಲಯಾಳಂ ವರ್ಷನ್ ಕೂಡ ತಮಿಳುನಾಡು, ಕೇರಳದ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. 4 ಭಾಷೆಗಳಲ್ಲಿ ಸಿನಿಮಾ ಬರುತ್ತೆ ಎನ್ನುವುದನ್ನು ಚಿತ್ರತಂಡ ಹೇಳಿಕೊಂಡು ಬರ್ತಿದೆ. 'ವೇದ' ನಂತರ ಶಿವಣ್ಣ ಹಾಗೂ ಎ. ಹರ್ಷ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ. ಇನ್ನು ಚಿತ್ರತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಜಯಯಾತ್ರೆ ಹೋಗಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಬಂದಿತ್ತು. ಗೀತಾ ಪಿಕ್ಚರ್ಸ್ ಸಂಸ್ಥೆ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದು ಮುಂದೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲಿದೆ.


Click it and Unblock the Notifications











