Ghost OTT: 'ಘೋಸ್ಟ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಕನ್ನಡ, ತೆಲುಗಿನಲ್ಲಿ ಏಕಕಾಲಕ್ಕೆ ಸ್ಟ್ರೀಮಿಂಗ್
ದಸರಾ ಸಂಭ್ರಮದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರ ಮೆಚ್ಚುಗೆ ಪಡೆದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಚರ್ಚೆ ಶುರುವಾಗಿದೆ.
ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಘೋಸ್ಟ್' ಚಿತ್ರದಲ್ಲಿ ಶಿವಣ್ಣನ ದರ್ಬಾರ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಪರಭಾಷೆಯ 3 ದೊಡ್ಡ ಸಿನಿಮಾಗಳ ನಡುವೆ 'ಘೋಸ್ಟ್' ಸಿನಿಮಾ ತೆರೆಕಂಡಿತ್ತು. ತಮಿಳಿನ 'ಲಿಯೋ', ತೆಲುಗಿನ 'ಭಗವಂತ್ ಕೇಸರಿ' ಹಾಗೂ 'ಟೈಗರ್ ನಾಗೇಶ್ವರರಾವ್' ಸಿನಿಮಾಗಳ ಜೊತೆ ಬಂದಿದ್ದ 'ಘೋಸ್ಟ್' ಕರ್ನಾಟಕದಲ್ಲಿ ಗೆದ್ದಿತ್ತು. 3 ಚಿತ್ರಗಳ ಪೈಪೋಟಿ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಘೋಸ್ಟ್' ಚಿತ್ರದಲ್ಲಿ ಮಲಯಾಳಂನ ಜಯರಾಂ ಹಾಗೂ ಬಾಲಿವುಡ್ ಅನುಪಮ್ ಕೇರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದ್ವಿಪಾತ್ರದಲ್ಲಿ ಶಿವಣ್ಣನ ಆರ್ಭಟ ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು. ಎಸಿಪಿ ಚೆಂಗಪ್ಪ ಹಾಗೂ ದಳವಾಯಿ ಮುದ್ದಣ್ಣ ನಡುವಿನ ಹಾವು ಏಣಿ ಆಟವಂತೂ ಸಖತ್ ಕಿಕ್ ಕೊಟ್ಟಿತ್ತು. ಮೊದಲ ದಿನ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗದಿದ್ದರೂ ವೀಕೆಂಡ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಶೋಗಳ ಸಂಖ್ಯೆ ಹೆಚ್ಚಿಸಿಕೊಂಡು ಭರ್ಜರಿ ಪ್ರದರ್ಶನ ಕಂಡಿತ್ತು.
ಮಹೇಶ್ ಸಿಂಹ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಸೆಂಟ್ರಲ್ ಜೈಲ್ ಒಂದನ್ನು ಹೈಜಾಕ್ ಮಾಡುವುದರ ಸುತ್ತಾ ಸುತ್ತುವ 'ಘೋಸ್ಟ್' ಕತೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಶಿವಣ್ಣನ ಅಭಿಮಾನಿಯೂ ಆಗಿರುವ ಶ್ರೀನಿ ತನ್ನ ನೆಚ್ಚಿನ ನಟನನ್ನು ಬಿಗ್ ಡ್ಯಾಡಿಯಾಗಿ ತೋರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಿವಣ್ಣನ ಲುಕ್, ಪರ್ಫಾರ್ಮನ್ಸ್, ಆಕ್ಷನ್ ಧಮಾಕಾ ನೋಡಿದವರು ಫಿದಾ ಆಗೋಗಿದ್ದರು. ಆದಷ್ಟು ಬೇಗ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.
ಶ್ರೀನಿ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'ಘೋಸ್ಟ್' ಕತೆ ಹೇಳಿದ್ದರು. ಮುಂದಿನ ಸಿನಿಮಾಗಳಿಗೂ ಈ ಕತೆಯಲ್ಲಿ ಲಿಂಕ್ ಕೊಟ್ಟಿದ್ದಾರೆ. ಹಾಗಾಗಿ 'ಘೋಸ್ಟ್'- 2 ಅಥವಾ 'ಬೀರ್‌ಬಲ್'-2 ಸಿನಿಮಾಗಳ ಬಗ್ಗೆ ಕುತೂಹಲ ಮೂಡಿದೆ. ಇದೆಲ್ಲದರ ನಡುವೆ 'ಘೋಸ್ಟ್' ಓಟಿಟಿ ರಿಲೀಸ್ ಡೇಟ್ ಬಗ್ಗೆ ಗುಸುಗುಸು ಕೇಳಿ ಬರ್ತಿದೆ. ಬಲ್ಲ ಮೂಲಗಳ ಪ್ರಕಾರ ನವೆಂಬರ್ 17ಕ್ಕೆ ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
'ಘೋಸ್ಟ್' ಸಿನಿಮಾ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಕನ್ನಡ ಜೊತೆಗೆ ತೆಲುಗು ವರ್ಷನ್ ನವೆಂಬರ್ 17ಕ್ಕೆ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತಿಂಗಳಿಗೂ ಮೊದ್ಲೆ ಓಟಿಟಿಗೆ ಬರ್ತಿವೆ. ಅಕ್ಟೋಬರ್ 19ಕ್ಕೆ ರಿಲೀಸ್ ಆಗಿದ್ದ 'ಘೋಸ್ಟ್' ತಿಂಗಳಿಗೂ ಮೊದ್ಲೆ ಅಂದರೆ ನವೆಂಬರ್ 17ಕ್ಕೆ ಓಟಿಟಿಗೆ ಬಂದಂತಾಗುತ್ತಿದೆ.
ಇನ್ನು ಇತ್ತೀಚೆಗೆ ನಿರ್ದೇಶಕ ಶ್ರೀನಿ 'ಘೋಸ್ಟ್- 2' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸೀಕ್ವೆಲ್ ಮಾಡುವುದು ಪಕ್ಕ. ಆದರೆ ಸದ್ಯಕ್ಕಿಲ್ಲ. ಮುಂದಿನ ವರ್ಷ ಸಿನಿಮಾ ಶುರುವಾಗಬಹುದು. ಇನ್ನು ಸ್ಕ್ರಿಪ್ಟ್ ವರ್ಕ್ ಶುರು ಆಗಿಲ್ಲ ಎಂದಿದ್ದಾರೆ. ಅದಕ್ಕು ಮುನ್ನ 'ಬೀರ್‌ಬಲ್'-2 ಸಿನಿಮಾ ಮೂಡಿ ಬರಲಿದೆ. ಬಳಿಕ 'ಘೋಸ್ಟ್' ಚಿತ್ರದ ದಳವಾಯಿ ಪಾತ್ರದ ಸುತ್ತಾ ಒಂದು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿ ನಿರ್ದೇಶಕರು ಇದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ 'ಘೋಸ್ಟ್- 2' ಬರುವ ಸಾಧ್ಯತೆಯಿದೆ.


Click it and Unblock the Notifications










