ತಿಂಗಳಿಗೂ ಮುನ್ನ ಶಿವಣ್ಣನ ಹೊಸ ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ
ಈ ವಾರ ಯಾವುದೇ ಕನ್ನಡ ಸಿನಿಮಾ ಓಟಿಟಿಗೆ ಬರಲ್ಲ ಎಂದು ಕೆಲವರು ಅಂದುಕೊಂಡಿದ್ದರು. ಆದರೆ 2 ಹೊಸ ಸಿನಿಮಾಗಳು ಇದೀಗ ಓಟಿಟಿ ವೀಕ್ಷಕರ ಮುಂದಿದೆ. ಅದರಲ್ಲಿ ಶಿವಣ್ಣನ ಹೊಚ್ಚ ಹೊಸ ಕನ್ನಡ ಸಿನಿಮಾ ಕೂಡ ಇರೋದು ವಿಶೇಷ.
ಕಳೆದ 5 ತಿಂಗಳಲ್ಲಿ ಯಾವುದೇ ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಕೆಲ ಸಿನಿಮಾಗಳು ಮಾತ್ರ ಪ್ರೇಕ್ಷಕರ ಗಮನ ಸೆಳೆದಿದ್ದವು. ಆ ಸಿನಿಮಾಗಳು ಈಗಾಗಲೇ ಒಂದೊಂದಾಗಿ ಓಟಿಟಿಗೆ ಬರ್ತಿದೆ. ಇತ್ತೀಚೆಗೆ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಕೂಡ ಸ್ಟ್ರೀಮಿಂಗ್ ಆರಂಭಿಸಿದೆ. ಮುಂದಿನ ವಾರ 'ಅಜ್ಞಾತವಾಸಿ' ಸಿನಿಮಾ ಜೀ-5ನಲ್ಲಿ ರಿಲೀಸ್ ಆಗಲಿದೆ.

ಸದ್ಯ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ 'ಫೈರ್ ಫ್ಲೈ' ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ವಂಶಿ ಕೃಷ್ಣ ಶ್ರೀನಿವಾಸ್ ನಿರ್ದೇಶಿಸಿ ನಟಿಸಿದ್ದ ಸಿನಿಮಾ ಇದು. ರಚನಾ ಇಂದರ್ ನಾಯಕಿಯಾಗಿ ಮಿಂಚಿದ್ದರು. ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ. ನಟ ಶಿವಣ್ಣ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಗೆ ವಿಮರ್ಶಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ದೊಡ್ಡದಾಗಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿರಲಿಲ್ಲ.
ಓಟಿಟಿಯಲ್ಲಿ 'ಫೈರ್ ಫ್ಲೈ' ಸಿನಿಮಾ ವೀಕ್ಷಿಸಲು ಕೆಲವರು ಕಾಯುತ್ತಿದ್ದರು. ಪ್ರೈಂ ವೀಡಿಯೋದಲ್ಲಿ ಈಗ ಆ ಅವಕಾಶ ಲಭ್ಯವಾಗಿದೆ. ಈಗ್ಲೇ ನೀವು ಸಿನಿಮಾ ವೀಕ್ಷಿಸಬಹುದಾಗಿದೆ. ಶ್ರೀಮುತ್ತು ಸಿನಿ ಸರ್ವೀಸ್ ಸಂಸ್ಥೆಯನ್ನು ನಿವೇದಿತಾ ಹುಟ್ಟುಹಾಕಿರುವುದು ಗೊತ್ತೇಯಿದೆ. ಈ ಹಿಂದೆ ಹನಿಮೂನ್ ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದರು. ಹಾಸ್ಯ ನಟ ನಾಗಭೂಷಣ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಶ್ರೀಮುತ್ತು ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಸಿನಿಮಾ 'ಫೈರ್ ಫ್ಲೈ'. ಅಂದಹಾಗೆ ಸಿಂಪಲ್ ಕಥೆಯನ್ನು ವಂಶಿ ಕೃಷ್ಣ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿದೇಶದಲ್ಲಿ ಓದಿಕೊಂಡಿದ್ದ ವಿವೇಕಾನಂದ ಮೂರ್ತಿ (ವಂಶಿ ಕೃಷ್ಣ ಶ್ರೀನಿವಾಸ್) ಮೈಸೂರಿಗೆ ವಾಪಸ್ ಆಗುತ್ತಾನೆ. ಈ ಹಾದಿಯಲ್ಲೇ ಆತನಿಗೆ ದೊಡ್ಡ ಆಘಾತ ಕಾದಿರುತ್ತದೆ. ಕೋಮಾಗೆ ಜಾರುವ ಆತ ಬಳಿಕ ಖಿನ್ನನಾಗಿ ನಿದ್ರಾಹೀನತೆಯಿಂದ ಬಳಲುತ್ತಾನೆ. ಮುಂದೆ ಏನಾಗುತ್ತದೆ? ಎನ್ನುವುದು ಇನ್ನುಳಿದ ಕಥೆ. ತನ್ನ ಕಥೆಯನ್ನು ವಿಕ್ಕಿ ತಾನೇ ಹೇಳಿಕೊಳ್ಳುವಂತೆ ರಿವರ್ಸ್ ಸ್ಕ್ರೀನ್ ಪ್ಲೇ ಚಿತ್ರದಲ್ಲಿದೆ.
ಅಭಿಲಾಷ್ ಕಲಥಿ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ 'ಫೈರ್ ಫ್ಲೈ' ಚಿತ್ರಕ್ಕಿದೆ. ಚಿತ್ರದಲ್ಲಿ ವಿಕ್ಕಿಯ ತಂದೆ ತಾಯಿ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ನಟಿಸಿದ್ದಾರೆ. ತಮಾಷೆಯಾಗಿ ಈ ಎಮೋಷನಲ್ ಡ್ರಾಮಾ ಆವರಿಸಿಕೊಳ್ಳುವಂತಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಇದು ಬಹಳ ವಿಭಿನ್ನವಾದ ಪ್ರಯತ್ನ. ಓಟಿಟಿಯಲ್ಲಿ ನೋಡಿ ಟೈಂ ಪಾಸ್ ಮಾಡಬಹುದು.
ಈಗಾಗಲೇ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 'ವೇದ' ಸಂಸ್ಥೆಯ ಮೊದಲ ಸಿನಿಮಾ ಆಗಿತ್ತು. ಬಳಿಕ 'ಭೈರತಿ ರಣಗಲ್' ಸಿನಿಮಾ ಮಾಡಿ ಗೆದ್ದಿದ್ದರು. ಇದೀಗ ಧೀರೇನ್ ನಟನೆಯ 'ಪಬ್ಬಾರ್' ಎಂಬ ಸಿನಿಮಾ ಘೋಷಣೆ ಆಗಿದೆ. ಸುನಿ ನಿರ್ದೇಶನದಲ್ಲಿ 'A' ಫಾರ್ ಆನಂದ್ ಎಂಬ ಸಿನಿಮಾ ಕೂಡ ಶುರುವಾಗಿದೆ. ನಿವೇದಿತಾ ತಮ್ಮ ಶ್ರೀಮುತ್ತು ಸಂಸ್ಥೆಯಲ್ಲಿ ಕೊಂಚ ಸಣ್ಣ ಬಜೆಟ್ ಸಿನಿಮಾ ಹಾಗೂ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳನ್ನು ಈ ಸಂಸ್ಥೆಯಲ್ಲಿ ನಿರೀಕ್ಷಿಸಬಹುದು. ಸದ್ಯ ಓಟಿಟಿಯಲ್ಲಿ 'ಫೈರ್ ಪ್ಲೇ' ಸಿನಿಮಾ ನೋಡಿ ಎಂಜಾಯ್ ಮಾಡಿ. ಅಂದಹಾಗೆ ಸಿಂಪ್ಲಿ ಸೌತ್ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 'ಮೇಘ' ಎಂಬ ಮತ್ತೊಂದು ಕನ್ನಡ ಸಿನಿಮಾ ಕೂಡ ರಿಲೀಸ್ ಆಗಿದೆ. ಕಿರಣ್ ರಾಜ್ ಹೀರೊ ಆಗಿ ಈ ಚಿತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications











