ರುಕ್ಮಿಣಿ ವಸಂತ್ ಫ್ಯಾನ್ಸ್‌ಗೆ ಡಬಲ್ ಧಮಾಕ; ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ
ಕನ್ನಡದ 'ಕಾಂತಾರ- 1' ಸಿನಿಮಾ ಬಿಡುಗಡೆಗೆ 5 ದಿನಗಳು ಬಾಕಿಯಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ಆಕೆಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಯುವರಾಣಿ ಕನಕವತಿಯಾಗಿ ರುಕ್ಕು ಮೋಡಿ ಮಾಡಲಿದ್ದಾರೆ. ಮತ್ತೊಂದು ಕಡೆ ಆಕೆಯ ಹೊಸ ಸಿನಿಮಾ ಓಟಿಟಿಗೆ ಬರ್ತಿದೆ.
ನಾಲ್ಕೈದು ಸಿನಿಮಾಗಳಲ್ಲಿ ನಟಿಸಿ ರುಕ್ಮಿಣಿ ವಸಂತ್ ಭಾರೀ ಕ್ರೇಜ್ ಸಂಪಾದಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. 'ಕಾಂತಾರ- 1' ಬಳಿಕ ಯಶ್ ಜೊತೆ 'ಟಾಕ್ಸಿಕ್' ಚಿತ್ರದಲ್ಲಿ ಮಿಂಚಲಿದ್ದಾರೆ. ಮುಂದೆ ಜ್ಯೂ. ಎನ್‌ಟಿಆರ್ ಚಿತ್ರದಲ್ಲೂ ನಾಯಕಿಯಾಗಿ ನಟಿಸುವ ಸುಳಿವು ಸಿಕ್ಕಿದೆ. ಇತ್ತೀಚೆಗೆ ತಮಿಳಿನ 'ಮದರಾಸಿ' ಸಿನಿಮಾ ತೆರೆಗೆ ಬಂದಿತ್ತು.

ಎ. ಆರ್ ಮುರುಗದಾಸ್ ನಿರ್ದೇಶನದ 'ಮದರಾಸಿ' ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಸೆಪ್ಟೆಂಬರ್ 5ರಂದು ಸಿನಿಮಾ ಬಿಡುಗಡೆ ಆಗಿತ್ತು. ಅಂದಾಜು 150 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿತ್ತು. ಆದರೆ ಪ್ರಯೋಜನವಾಗಲಿಲ್ಲ.
ಓಟಿಟಿಗೆ 'ಮದರಾಸಿ'
ಚಿತ್ರಮಂದಿರಗಳಲ್ಲಿ ಸೋಲುಂಡ 'ಮದರಾಸಿ' ಸಿನಿಮಾ ಅಕ್ಟೋಬರ್ 1ರಂದು ಓಟಿಟಿಗೆ ಬರ್ತಿದೆ. ಈ ಬಗ್ಗೆ ಪ್ರೈಂ ವೀಡಿಯೋ ಸಂಸ್ಥೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಕಾರಣ ಎ. ಆರ್ ಮುರುಗದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು.
'ಮದರಾಸಿ' ಕಥೆ
ಚಿಕ್ಕಂದಿನಲ್ಲಿ ರಘು (ಶಿವಕಾರ್ತಿಕೇಯನ್) ತನ್ನ ಕುಟುಂಬ ಅಪಘಾತದಲ್ಲಿ ಸಾಯುವುದನ್ನು ನೋಡುತ್ತಾನೆ. ಅದರಿಂದ ಆಘಾತಕ್ಕೆ ಒಳಗಾಗಿ ಡಿಲ್ಯೂಷನ್ ಸಿಂಡ್ರೋಮ್‌ನಿಂದ ಬಳಲುತ್ತಿರುತ್ತಾನೆ. ಇದರಿಂದ ಕೆಲವರಿಗೆ ಸಹಾಯ ಕೂಡ ಆಗುತ್ತಿರುತ್ತದೆ. ವರ್ಷಗಳ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಮುಂದೆ ಸಹಾಯ ಕೇಳಿದವರ ಬೆಂಬಲಕ್ಕೆ ನಿಲ್ಲುತ್ತಾನೆ. ಇನ್ನು ರಘು ಬಾಳಿಗೆ ಮಾಲತಿ(ರುಕ್ಮಿಣಿ ವಸಂತ್) ಆಗಮನವಾಗುತ್ತದೆ. ಮತ್ತೊಂದು ಚಿರಾಗ್(ಶಬ್ಬೀರ್) ಹಾಗೂ ವಿರಾಟ್(ವಿದ್ಯುತ್ ಜಮ್ವಾಲ್) ಎಂಬ ಇಬ್ಬರು ಸ್ನೇಹಿತರು ಚೆನ್ನೈಗೆ ಗನ್ ಸರಬರಾಜು ಮಾಡುತ್ತಿರುತ್ತಾರೆ. ಬಳಿಕ NIA ಅಧಿಕಾರಿ ಪ್ರೇಮ್ ಕುಮಾರ್ (ಬಿಜು ಮೆನನ್) ರಘುವಿನ ಜೀವನಕ್ಕೆ ಬರುವಂತಾಗುತ್ತದೆ. ತಮಿಳುನಾಡಿಗೆ ಗನ್ ಕಂಟೇನರ್‌ಗಳು ಬರುವುದನ್ನು ನಿಲ್ಲಿಸಲು ಆತ ಮುಂದಾಗುತ್ತಾನೆ. ಈ ಹಾದಿಯಲ್ಲಿ ರಘು ಕೂಡ ಕೈ ಜೋಡಿಸುತ್ತಾನೆ? ಅದು ಯಾಕೆ? ಎನ್ನುವುದು 'ಮದರಾಸಿ' ಸಿನಿಮಾ ಕಥೆ.
100 ರೂ. ಕೋಟಿ ಕಲೆಕ್ಷನ್
ಬಹಳ ನಿರೀಕ್ಷೆ ಹುಟ್ಟಾಕಿದ್ದ 'ಮದರಾಸಿ' ಸಿನಿಮಾ ನಿರಾಸೆ ಮೂಡಿಸಿತ್ತು. ಅದ್ಯಾಕೋ ಮುರುಗದಾಸ್ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿವೆ. ಇದೇ ವರ್ಷ ಸಲ್ಮಾನ್ ಖಾನ್ ನಿರ್ದೇಶನದ 'ಸಿಕಂದರ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಸೋತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಬೇಸರ ತಂದಿತ್ತು. ಅದೇ ಪಟ್ಟಿಗೆ ಶಿವಕಾರ್ತಿಕೇಯನ್ ಸಿನಿಮಾ ಕೂಡ ಸೇರಿಕೊಂಡಿತ್ತು.
ರುಕ್ಮಿಣಿ ವಸಂತ್ ನಟನೆಯ 'ಕಾಂತಾರ- 1' ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರ್ತಿದೆ. ಅದಕ್ಕಿಂತ ಮುನ್ನ ಓಟಿಟಿಯಲ್ಲಿ 'ಮದರಾಸಿ' ಸಿನಿಮಾ ಬರ್ತಿದೆ. ಹಾಗಾಗಿ ಆಕೆಯ ಅಭಿಮಾನಿಗಳಿಗೆ ಡಬಲ್ ಧಮಾಕ ಎನ್ನಬಹುದು. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











