ಹುಡುಗಿಗೆ ಸ್ನಾನ ಮಾಡಿಸೋದು, ಬಾಯಿಂದ ಮಸಾಜ್ ಮಾಡೋದು ಮನರಂಜನೆನಾ ? ರಿಯಾಲಿಟಿ ಶೋ ವಿರುದ್ಧ ಭುಗಿಲೆದ್ದ ಆಕ್ರೋಶ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮನರಂಜನೆಗೆ ಒಂದು ಗೆರೆ ಇರುತ್ತಿತ್ತು. ಇತಿ ಮಿತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮೊದಲಾಗಿದ್ದರೆ ಖ್ಯಾತಿಯ ಶಿಖರಕ್ಕೇರಲು ಕೇವಲ ಪ್ರತಿಭೆ ಮಾತ್ರ ಮಾನದಂಡವಾಗಿತ್ತು.
ಆದರೆ ಇಂದು ಹಾಗಲ್ಲ. ಬೆಳ್ಳಿತೆರೆ .. ಕಿರುತೆರೆಯಲ್ಲಿ ಮಿಂಚಬೇಕೆಂದರೆ ಪ್ರತಿಭೆ ಇರಲಿ ಇಲ್ಲದಿರಲಿ ಗ್ಲ್ಯಾಮರ್ ಇರಬೇಕು ಎನ್ನುವ ಅಲಿಖಿತ ನಿಯಮ ಜಾರಿಯಲ್ಲಿದೆ. ಸೆರಗು ಜಾರಿಸೋದು.. ಹಾಲು ಕುಡಿಯೋದು.. ಮೈ ತಿಕ್ಕುವುದು.. ಮುಂತಾದ ಸವಕಲೆದ್ದ ಅಸಹ್ಯದ ಸರಕುಗಳನ್ನೇ ಇಂದು ಮನರಂಜನೆಯ ಹೆಸರಿನಲ್ಲಿ ಹಂಚಲಾಗುತ್ತಿದೆ.

ಕೆಲವೊಂದು ಸಾರಿ ಇಂತಹ ಅಸಭ್ಯ ಮತ್ತು ಅಶ್ಲೀಲ ಕಾರ್ಯಕ್ರಮ, ಸಿನಿಮಾ ಮತ್ತು ಧಾರಾವಾಹಿಗಳನ್ನು ವಿಧಿಯಿಲ್ಲದೆ ಮನೆ ಮಂದಿ ಜೊತೆ ಕುಳಿತು ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಮನರಂಜನಾ ಕ್ಷೇತ್ರ ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆ ಎದ್ದೇಳುತ್ತೆ. ಇದಕ್ಕೆ ಇನ್ನೊಂದು ಉದಾಹರಣೆಯೇ ''ಎಂಗೇಜ್ಡ್ 2'' ಎಂಬ ಅಸಹ್ಯವಾದ ಕಾರ್ಯಕ್ರಮ.
ಹೌದು, ''ಎಂಗೇಜ್ಡ್ 2''.. ಎಲ್ವಿಶ್ ಯಾದವ್ ಮತ್ತು ಜಿಯಾ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮ. ಉತ್ತರದ ಪ್ರಖ್ಯಾತ ಯೂಟ್ಯೂಬರ್ ಗಳಲ್ಲಿ ಒಬ್ಬರಾದ ಎಲ್ವೀಶ್ 2023ರಲ್ಲಿ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಒಟಿಟಿ ಸೀಸನ್ 2ರ ಮನೆಯನ್ನು ಪ್ರವೇಶ ಮಾಡಿದ್ದ ಎಲ್ವಿಶ್ ಕಪ್ ಸಮೇತ ಮನೆಯಾಚೆ ಬಂದಿದ್ದರು. ಗೆದ್ದು ಬೀಗಿದ್ದರು.
ಆ ನಂತರ ''ಪ್ಲೇ ಗ್ರೌಂಡ್'' ಸೀಸನ್ 4.. ''ಲಾಫ್ಟರ್ ಶೆಫ್ಸ್''.. ''MTV ರೋಡೀಸ್ XX''.. ಅಂತಹ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ ಎಲ್ವಿಶ್ ಯಾದವ್ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಇನ್ನು ಜಿಯಾ ಶಂಕರ್ ವೃತ್ತಿಯಲ್ಲಿ ನಟಿ. ''ಮೇರಿ ಹಾನಿಕಾರಕ್ ಬೀವಿ''.. ''ಕಾಟೇಲಾಲ್ & ಸನ್ಸ್''.. ''ಕ್ವೀನ್ಸ್ ಹೈ ಹಮ್'' ಅಂತಹ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಜನ ಮನ ಗೆದ್ದ ಜಿಯಾ ಮರಾಠಿಯಲ್ಲಿ ರಿತೇಶ್ ದೇಶಮುಖ್ ನಿರ್ದೇಶನದ ''ವೆಡ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ''ವರ್ಜಿನ್ ಭಾಸ್ಕರ್ 2'' ಎಂಬ ವೆಬ್ ಸರಣಿಯನ್ನು ಕೂಡ ಮಾಡಿದ್ದಾರೆ.
ಇಂಥಾ ಎಲ್ವೀಶ್ ಯಾದವ್ ಮತ್ತು ಜಿಯಾ ಶಂಕರ್ ಸದ್ಯ ''ಎಂಗೇಜ್ಡ್ 2'' ಎಂಬ ಪರಮ ಅಶ್ಲೀಲ-ಅಸಹ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಜೀಯೋ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಹೇಳಿಕೊಳ್ಳಲು ರಿಯಾಲಿಟಿ ಶೋ. ಆದರೆ ಇಲ್ಲಿ ಮಾನಸಿಕ ಮತ್ತು ದೈಹಿಕ ಶಕ್ತಿ ಮಾನದಂಡವಲ್ಲ. ಸ್ಫರ್ಧಿಗಳ ಯುಕ್ತಿಗೆ ಕೂಡ ಇಲ್ಲಿ ಕೆಲಸ ಇಲ್ಲ.

ಯಾಕೆಂದರೆ ಇಲ್ಲಿ ಫಿಸಿಕಲ್ ಟಾಸ್ಕ್ ಹೆಸರಿನಲ್ಲಿ ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಮನರಂಜನೆಯ ಹೆಸರಿನಲ್ಲಿ ಸ್ಫರ್ಧಿಗಳ ಮರ್ಯಾದೆ ಹರಾಜು ಹಾಕಲಾಗುತ್ತಿದೆ. ವಿಲಕ್ಷಣವಾದ ಸವಾಲುಗಳನ್ನು ಸ್ಫರ್ಧಿಗಳಿಗೆ ನೀಡಲಾಗುತ್ತಿದೆ. ಉದಾಹರಣೆಗೆ ಮೈತುಂಬಾ ಕೆಸರು ಮೆತ್ತಿಕೊಂಡ ಹುಡುಗಿಯ ಕೈಯನ್ನು ಕಟ್ಟಿ ಹಾಕಲಾಗಿರುತ್ತೆ. ಆಗ ಬರುವ ಹುಡುಗ ಆಕೆಗೆ ಸ್ನಾನ ಮಾಡಿಸುತ್ತಾನೆ. ಸ್ನಾನ ಮಾಡಿಸಿಕೊಳ್ಳುವ ಹುಡುಗಿ ಕೂಡ ಹುಡುಗನನ್ನು ಉತ್ತೇಜಿಸುತ್ತಾಳೆ. ಅಲ್ಲಿಯೇ ನಿಂತ ನಿರೂಪಕ ಎಲ್ವೀಶ್ ಯಾದವ್ ಇನ್ನಷ್ಟು ಪ್ರಚೋದನೆ ನೀಡುತ್ತಾರೆ.
ಇದು ಮಾತ್ರವಲ್ಲ ಐಸ್ ಕ್ಯೂಬ್‌ನ ಬಾಯಲ್ಲಿಟ್ಕೊಂಡು ಹುಡುಗಿಯ ದೇಹವನ್ನು ಹುಡುಗ ಇಲ್ಲಿ ಮಸಾಜ್ ಮಾಡುತ್ತಾನೆ. ಮತ್ತೊಬ್ಬ ಬಂದು ತನ್ನ ಬಾಯಿಂದ ಹುಡುಗಿಯ ಟಾಪ್ ಎಳೆಯುತ್ತಾನೆ. ಬಿಚ್ಚುತ್ತಾನೆ . ಹುಡುಗಿ ಬಾಯಲ್ಲಿರುವ ಸ್ಟ್ರಾಬೆರಿಯನ್ನು ಹುಡುಗ ಕಚ್ಚಿ ತಿನ್ನುತ್ತಾನೆ. ಇನ್ನೂ ಅದ್ಯಾವುದೋ ಲ್ಯಾಪ್ ಡ್ಯಾನ್ಸ್ ಅಂತೆ. ಈ ಟಾಸ್ಕ್‌ನಲ್ಲಿ ಅರೆಬೆತ್ತಲಾದ ಹುಡುಗನ ತೊಡೆಯ ಮೇಲೆ ಹುಡುಗಿ ಕುಳಿತುಕೊಂಡು ಹುಡುಗಿ ನುಲಿಯುತ್ತಾಳೆ.
ಹೀಗೆ ವಾಕರಿಕೆಗೆ ಕಾರಣವಾಗುವ ಈ ಕಾರ್ಯಕ್ರಮ ಸದ್ಯ ಲಂಗು ಲಗಾಮು ಇಲ್ಲದೇ ಪ್ರಸಾರವಾಗುತ್ತಿದೆ. ಸದ್ಯ ಈ ಕಾರ್ಯಕ್ರಮದ ಕೆಲ ತುಣುಕುಗಳು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಚರ್ಚೆಗೆ ಮುನ್ನುಡಿಯನ್ನು ಕೂಡ ಬರೆದಿವೆ.


Click it and Unblock the Notifications











