ಬಿಡುಗಡೆಯಾದ ಕೇವಲ 28 ದಿನಕ್ಕೆ ಓಟಿಟಿಗೆ ಬಂತು ಬಾಲಿವುಡ್ ಸ್ಟಾರ್ ನಟಿಯ ಸೌತ್ ಸಿನಿಮಾ ; ಎಲ್ಲಿ ನೋಡಬಹುದು..?
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ.. ಹೀಗೆ ತಮ್ಮ ತಮ್ಮ ಭಾಷೆಯಲ್ಲಿ ಮಿಂಚಿದ ಹಲವರು ಬೇರೆ ಬೇರೆ ಭಾಷೆಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಕೆಲವರು ಬಾಲಿವುಡ್ ಮೇಲಿನ ವ್ಯಾಮೋಹದಿಂದ ವಲಸೆ ಹೋಗಿ ಅಲ್ಲಿಯೇ ಬಿಡಾರ ಹೂಡಿದ್ದಾರೆ.
ಮತ್ತೂ ಕೆಲವರು ಬಾಲಿವುಡ್‌ನಲ್ಲಿ ಮಿಂಚಲು ಸಾಧ್ಯವಾಗದೇ ಇದ್ದಾಗ ಉತ್ತರದಿಂದ ದಕ್ಷಿಣಕ್ಕೆ ಬಂದಿದ್ದಾರೆ. ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಹಣದಾಸೆಗೆ ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಹಿಂದಿ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಬಂದಿದ್ದ ಸೋನಾಕ್ಷಿ ಸಿನ್ಹಾ ಅಭಿನಯದ ಚಿತ್ರವೊಂದು ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಆ ಚಿತ್ರದ ಹೆಸರು ''ಜಟಾಧರ''.

ಹೌದು, ''ಜಟಾಧರ''.. ಬಾಲಿವುಡ್‌ನ ಸೋನೆ ಕಿ ಚಿಡಿಯಾ ಸೋನಾಕ್ಷಿ ಸಿನ್ಹಾ ಅಭಿನಯದ ಮೊದಲ ತೆಲುಗು ಚಿತ್ರ. ಬಿಡುಗಡೆಗೆ ಮುನ್ನ ಅಪಾರವಾದ ಸದ್ದು ಮಾಡಿದ್ದ ಈ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ಕಳೆದ ನವೆಂಬರ್ 7ರಂದು ಬಿಡುಗಡೆಯಾಗಿತ್ತು.
''ಪ್ರೇಮ ಕಥಾ ಚಿತ್ರಂ''.. ''ಸಮ್ಮೋಹನಂ''.. ''ಭಲೇ ಮಂಚಿ ರೋಜು''.. ಹೀಗೆ ಚಿತ್ರಗಳ ಮೂಲಕ ಆಂಧ್ರದ ಹೃದಯ ಗೆದ್ದ ಸುಧೀರ್ ಬಾಬು ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಶಿವನ ಭಕ್ತನಾಗಿ ಕಾಣಿಸಿಕೊಂಡಿದ್ದರು. ಇನ್ನು ಸೋನಾಕ್ಷಿ ಸಿನ್ಹಾ ಈ ಚಿತ್ರದಲ್ಲಿ ರಾಕ್ಷಸಿಯ ಪಾತ್ರವನ್ನು ನಿರ್ವಹಿಸಿದ್ದರು. ದಿವ್ಯಾ ಖೋಸ್ಲಾ ಕುಮಾರ್.. ಶಿಲ್ಪಾ ಶಿರೋಡ್ಕರ್.. ಇಂದಿರಾ ಕೃಷ್ಣ.. ರವಿ ಪ್ರಕಾಶ್.. ಝಾನ್ಸಿ.. ಈ ಚಿತ್ರಗಳಲ್ಲಿನ ಉಳಿದ ಮಹತ್ತರವಾದ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

ವೆಂಕಟ್ ಕಲ್ಯಾಣ್ ಮತ್ತು ಅಭಿಷೇಕ್ ಜೈಸ್ವಾಲ್ ನಿರ್ದೇಶನದ ಈ ಚಿತ್ರಕ್ಕೆ ಜೀ ಸ್ಟೂಡಿಯೋ ಜೊತೆ ಸೇರಿ ಪ್ರೇರಣಾ ಅರೋರಾ ಬಂಡವಾಳ ಹೂಡಿದ್ದರು. ಆದರೆ .. ಹಾಕಿದ ಬಂಡವಾಳ ಮಾತ್ರ ಮರಳಿ ಬರಲಿಲ್ಲ. 2 ಗಂಟೆ 8 ನಿಮಿಷ ಅವಧಿಯ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ ₹5.73 ಕೋಟಿ ಮಾತ್ರ.
ಇಂಥಾ ''ಜಟಾಧರ'' ಚಿತ್ರ ಇಂದು ( ಡಿಸೆಂಬರ್ 5 ) ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಬಿಡುಗಡೆಯಾದ ಕೇವಲ 28 ದಿನಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಅಂದ್ಹಾಗೇ ಆಗಲೇ ಹೇಳಿದಂತೆ ತೆಲುಗು ಜೊತೆ ಹಿಂದಿಯಲ್ಲಿ ಕೂಡ ''ಜಟಾಧರ'' ಬಿಡುಗಡೆಯಾಗಿತ್ತು. ಆದರೆ.. ಸದ್ಯ ಅಮೆಜಾನ್‌ನಲ್ಲಿ ಕೇವಲ ತೆಲುಗು ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಹಿಂದಿ ವರ್ಷನ್ ಕಥೆ ಏನಾಯ್ತು ಎನ್ನುವುದು ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅಮೆಜಾನ್‌ನಲ್ಲಿಯೇ ಹಿಂದಿ ಆವೃತ್ತಿ ಪ್ರಸಾರವಾಗುತ್ತಾ..? ಅಥವಾ ಹಿಂದಿ ಆವೃತ್ತಿಯನ್ನು ಬೇರೆ ಯಾವುದಾದ್ದರೂ ಓಟಿಟಿಗೆ ವೇದಿಕೆಗೆ ಮಾರಲಾಗಿದೆಯಾ..? ಎನ್ನುವುದು ಗೊತ್ತಾಗಲಿದೆ.
ಸದ್ಯ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದ ''ಜಟಾಧರ'' ಅಮೆಜಾನ್ ಪ್ರೈಂಗೆ ಬಂದಿದ್ದು ಇಲ್ಲಿ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಆಸಕ್ತ ಚಿತ್ರಪ್ರೇಮಿಗಳು ಮನೆಯಲ್ಲಿಯೇ ಕುಳಿತುಕೊಂಡು ಮನೆಮಂದಿಯ ಜೊತೆ ಪೌರಾಣಿಕ ಸ್ಫರ್ಶವನ್ನು ಹೊಂದಿರುವ ಈ ''ಜಟಾಧರ''ವನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications











