'ಲಾಕ್ ಅಪ್' ಶೋ ಗೆದ್ದ ಮುನಾವರ್ ಫಾರೂಕಿ: ಸಿಕ್ಕ ಬಹುಮಾನವೆಷ್ಟು?
ಜೋಕು ಹೇಳಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಸ್ಟಾಂಡಪ್ ಕಾಮಿಡಿಯನ್ ಮುನಾವರ್ ಫಾರುಕಿ ಇದೀಗ ರಿಯಾಲಿಟಿ ಶೋ ವಿಜೇತರಾಗಿದ್ದಾರೆ.
ನಟಿ ಕಂಗನಾ ರನೌತ್ ನಡೆಸಿಕೊಡುತ್ತಿದ್ದ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಮುನಾವರ್ ಫಾರುಕಿ ಸ್ಪರ್ಧಾಳುವಾಗಿ ಭಾಗವಹಿಸಿದ್ದರು. ತುಸು ಬಿಗ್‌ಬಾಸ್ ಮಾದರಿಯಲ್ಲಿಯೇ ಇರುವ ಲಾಕ್‌ಅಪ್ ರಿಯಾಲಿಟಿ ಶೋ ನಲ್ಲಿ ಅಂತಿಮವಾಗಿ ಮುನಾವರ್ ಫಾರುಕಿ ವಿಜೇತರಾಗಿದ್ದಾರೆ.
ಶನಿವಾರ ರಾತ್ರಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಮುನಾವರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮುನಾವರ್‌ಗೆ ಬರೋಬ್ಬರಿ 18 ಲಕ್ಷ ಮತಗಳು ಬಂದಿದ್ದವು. ಇವುಗಳ ಜೊತೆಗೆ ಕಂಗನಾ ರನೌತ್‌ರ ಮತವನ್ನೂ ಪಡೆಯುವಲ್ಲಿ ಮುನಾವರ್ ಯಶಸ್ವಿಯಾದರು ಹಾಗಾಗಿ ಮುನಾವರ್ ವಿಜೇತರಾಗಿ ಹೊರಹೊಮ್ಮಿದರು.

ಮುನಾವರ್‌ಗೆ ಟ್ರೋಫಿ ನೀಡಿದ ಕಂಗನಾ ರನೌತ್, ''ಮುನಾವರ್ ಈ ರಿಯಾಲಿಟಿ ಶೋ ಗೆಲ್ಲಬೇಕಾಗಿರುವ ಸೂಕ್ತ ಅಭ್ಯರ್ಥಿಯಾಗಿದ್ದ, ಅಂತೆಯೇ ಆತನಿಗೆ ಗೆಲುವು ಧಕ್ಕಿದೆ'' ಎಂದರು.
ಮುನಾವರ್‌ಗೆ ಟ್ರೋಫಿ ಜೊತೆಗೆ 20 ಲಕ್ಷ ರುಪಾಯಿ ಬಹುಮಾನ, ಒಂದು ಐಶಾರಾಮಿ ಕಾರು ಹಾಗೂ ಇಟಲಿ ಪ್ರವಾಸಕ್ಕೆ ಟಿಕೆಟ್ ಹಾಗೂ ಪ್ರವಾಸದ ಪೂರ್ಣ ಭತ್ಯೆಯನ್ನು ನೀಡಲಾಗುತ್ತಿದೆ.
'ಲಾಕ್ ಅಪ್' ರಿಯಾಲಿಟಿ ಶೋ, ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ ಒಟಿಟಿಗಳಲ್ಲಿ ಪ್ರಸಾರವಾಗಿತ್ತು. ಕಂಗನಾ ನಿರೂಪಣೆ ಮಾಡುತ್ತಿದ್ದ ಈ ಶೋನಲ್ಲಿ ಇಪ್ಪತ್ತು ಮಂದಿ ಸ್ಪರ್ಧಾಳುಗಳು ಇದ್ದರು. ಫೆಬ್ರವರಿ 20 ರಂದು ಪ್ರಾರಂಭವಾದ ರಿಯಾಲಿಟಿ ಶೋ ಮೇ ಆರರಂದು ಪೂರ್ಣವಾಗಿದೆ.
ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರುಕಿ ಶೋನಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಂಡಿದ್ದಲ್ಲದೆ, ಸ್ಪರ್ಧಾಳುಗಳನ್ನು ನಗಿಸುತ್ತಾ, ತನ್ನ ಒನ್ ಲೈನರ್‌ಗಳಿಂದ ಪ್ರೇಕ್ಷಕರನ್ನು ನಗಿಸುತ್ತಾ ಮನೊರಂಜನೆ ನೀಡುತ್ತಿದ್ದರು. ಇದೇ ಕಾರಣಕ್ಕೆ ಅವರು ಆರಂಭದಿಂದಲೂ ಗೆಲ್ಲುವ ಸ್ಪರ್ಧಾಳುವೆಂದೇ ಬಿಂಬಿತರಾಗಿದ್ದರು.
ಮುನಾವರ್ ಫಾರುಕಿ ವಿಜೇತರಾದರೆ, ಮೊದಲನೇ ರನರ್ ಅಪ್ ಆಗಿರುವುದು ಪಾಯಲ್ ರೊಹ್ಟಗಿ, ಎರಡನೇ ರನರ್ ಅಪ್ ಅಂಜಲಿ ಅರೋರ, ಶಿವಂ ಶರ್ಮಾ ಮೂರನೇ ರನರ್ ಅಪ್, ಅಜ್ಮಾ ಫಲ್ಹಾ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.
ಟ್ರೋಫಿ ಗೆದ್ದ ಮುನಾವರ್ ಬಿಎಂಡಬ್ಲು ಕಾರಿನಲ್ಲಿ ಮುಂಬೈನ ಬಾಂದ್ರಾಕ್ಕೆ ಬಂದಿದ್ದಾರೆ. ಅಭಿಮಾನಿಗಳ ಜೈಘೋಷದ ನಡುವೆ ಟ್ರೋಫಿಯನ್ನು ಪ್ರದರ್ಶಿಸುತ್ತಾ ರಸ್ತೆಯಲ್ಲಿ ಸಾಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.


Click it and Unblock the Notifications











