ಓಟಿಟಿ ಹಿಡಿತಕ್ಕೆ ಚಿತ್ರರಂಗ? ಚಿತ್ರಮಂದಿರಗಳಿಗೆ ಕಾದಿದ್ಯಾ ಸಂಚಕಾರ?
ಚಿತ್ರಮಂದಿರಗಳಲ್ಲೇ ಜನ ಸಿನಿಮಾ ನೋಡುತ್ತಿದ್ದ ಕಾಲವೊಂದಿತ್ತು. ಬಳಿಕ ಟಿವಿ ಬಂದು ಮನೆಯಲ್ಲೇ ಸಿನಿಮಾ, ಧಾರಾವಾಹಿ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ತಂತ್ರಜ್ಞಾನ ಬೆಳೆದಂತೆ ಸಿನಿಮಾ ನೋಡುವ ರೀತಿ ಬದಲಾಗುತ್ತಾ ಸಾಗಿತು. ಬರೀ ಚಿತ್ರಮಂದಿರಗಳಿಂದ ಬರುವ ಆದಾಯ ಮಾತ್ರವಲ್ಲದೇ ಫಿಲ್ಮ್ ಮೇಕರ್ಸ್‌ಗೆ ಈಗ ಹೊಸ ಹೊಸ ಆದಾಯ ಮೂಲಗಳು ಸಿಕ್ಕಿವೆ.
ಮೊದಲೆಲ್ಲಾ ಸಿನಿಮಾ ಥ್ರಿಯೇಟ್ರಿಕಲ್ ರೈಟ್ಸ್ ಬಿಟ್ಟರೆ ಆಡಿಯೋ ರೈಟ್ಸ್ ಇಂದ ಹಣ ಬರ್ತಿತ್ತು. ಸಿನಿಮಾ ಹಿಟ್ ಆಗಿ ಯಾರಾದರೂ ರೀಮೆಕ್ ರೈಟ್ಸ್ ಕೇಳಿದರೆ ಒಂದಷ್ಟು ಹಣ ಸಿಗುತ್ತಿತ್ತು. ಬಳಿಕ ಟಿವಿ ರೈಟ್ಸ್ ಅಂದರೆ ಸ್ಯಾಟಲೈಟ್ ರೈಟ್ಸ್ ಮೂಲಕ ಹಣ ಬರೋಕೆ ಶುರುವಾಯಿತು. ಬಳಿಕ ಪರಭಾಷೆಗಳಿಗೆ ಸಿನಿಮಾ ಡಬ್ಬಿಂಗ್ ರೈಟ್ಸ್‌ನಿಂದ ಕೂಡ ಅಲ್ಪ ಸ್ವಲ್ಪ ಹಣ ಬರುವಂತಾಯಿತು. ಆದರೆ ಕಳೆದ ಆರೇಳು ವರ್ಷಗಳಿಂದ ಓಟಿಟಿ ರೈಟ್ಸ್ ಭರ್ಜರಿ ಬ್ಯುಸಿನೆಸ್ ಮಾಡ್ತಿದೆ.

ಓಟಿಟಿ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಜನ ಚಿತ್ರಮಂದಿರಗಳಿಂದ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಸಿನಿಮಾಗಳನ್ನು ಅಭಿಮಾನಿಗಳು ಮಾತ್ರ ಚಿತ್ರಮಂದಿರಗಳಲ್ಲಿ ನೋಡಲು ಬಯಸುತ್ತಿದ್ದಾರೆ. ಇನ್ನುಳಿದಂತೆ ಅದ್ಭುತ ರೆಸ್ಪಾನ್ಸ್ ಸಿಕ್ಕಿ ಮೌತ್ ಟಾಕ್ ಚೆನ್ನಾಗಿದ್ದರೆ ಮಾತ್ರ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಓಟಿಟಿ ಸಂಸ್ಥೆಗಳು ಭಾರೀ ಮೊತ್ತಕ್ಕೆ ರೈಟ್ಸ್ ಡೀಲ್ ಮಾಡಿಕೊಳ್ತಿವೆ.
ಥ್ರಿಯೇಟ್ರಿಕಲ್ ರೈಟ್ಸ್‌ಗಿಂತಲೂ ಓಟಿಟಿ ರೈಟ್ಸ್ ಈಗ ಬಹಳ ಮುಖ್ಯ ಎನ್ನುವಂತಾಗಿದೆ. ಈ ನಡುವೆ ಸ್ಯಾಟಲೈಟ್ ರೈಟ್ಸ್‌ಗೆ ಭಾರೀ ಪೆಟ್ಟು ಬಿದ್ದಿದೆ. ಇನ್ನು ಓಟಿಟಿ ಡೀಲ್ ಯಾವ ಮಟ್ಟಿಗೆ ಕುದುರಿಸುತ್ತಿದ್ದಾರೆ ಅಂದರೆ ಒಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಓಟಿಟಿ ಸಂಸ್ಥೆಗಳು ನಿರ್ಧರಿಸುವ ಮಟ್ಟಕ್ಕೆ ಬಂದು ನಿಂತಿದೆ. ತೆಲುಗಿನ 'ಹರಿಹರ ವೀರಮಲ್ಲು' ಚಿತ್ರದ ವಿಚಾರದಲ್ಲಿ ಇದೇ ಚರ್ಚೆ ನಡೀತಿದೆ.

ಅಮೇಜಾನ್ ಪ್ರೈಂ ವೀಡಿಯೋಗೆ 'ಹರಿಹರ ವೀರಮಲ್ಲು' ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರವೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಬ್ಯುಸಿಯಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಎರಡು ದಿನಗಳ ಪ್ಯಾಚ್‌ವರ್ಕ್ ಶೂಟಿಂಗ್ ನಡೀತಿದೆ. ಮೇ 30ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಆದರೆ ಇದಕ್ಕೆ ಪ್ರೈಂ ವೀಡಿಯೋ ಒಪ್ಪುತ್ತಿಲ್ಲ ಎಂದು ಹೇಳಲಾಗ್ತಿದೆ.
ದೊಡ್ಡ ದೊಡ್ಡ ಸಿನಿಮಾಗಳು ಕೂಡ ಈಗ ತಿಂಗಳಿಗೆ ಮುನ್ನ ಓಟಿಟಿಗೆ ಬರ್ತಿದೆ. ಹಾಗಾಗಿ ಓಟಿಟಿ ರಿಲೀಸ್ ಡೇಟ್ ಮೊದಲೇ ಫಿಕ್ಸ್ ಮಾಡಿ ಅದಕ್ಕೆ ತಕ್ಕಂತೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಶುರುವಾಗಿದೆ. ಸದ್ಯ 'ಹರಿಹರ ವೀರಮಲ್ಲು' ಚಿತ್ರದ ಬಗ್ಗೆ ಕ್ರೇಜ್ ಕಮ್ಮಿ ಇದೆ. ಚಿತ್ರಮಂದಿರಗಳಲ್ಲಿ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿಲ್ಲ. ಅದೇ ಕಾರಣಕ್ಕೆ ಓಟಿಟಿ ಜೊತೆ ಭರ್ಜರಿ ಬೆಲೆಗೆ ಡೀಲ್ ಕುದುರಿಸಲಾಗಿದೆ.
ದೊಡ್ಡಮಟ್ಟದ ಹಣ ಕೊಟ್ಟು ರೈಟ್ಸ್ ಖರೀದಿಸಿರುವ ಪ್ರೈಂ ವೀಡಿಯೋ ಈಗ ಚಿತ್ರವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಬಗ್ಗೆ ಅಡ್ಡಗಾಲು ಹಾಕಿ ಕೂತಿದೆ ಎನ್ನಲಾಗ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳಿಗೂ ಬೇಸರ ತಂದಿದೆ. ಇನ್ನು ಮೀಡಿಯಂ ರೇಂಜ್ ಸಿನಿಮಾಗಳಲ್ಲಿ 21 ದಿನಗಳ ಒಳಗೆ ಓಟಿಟಿಯಲ್ಲಿ ಬಿಡುಗಡೆಗೆ ಮಾಡಲು ಒಪ್ಪಿದರೆ ಮಾತ್ರ ರೈಟ್ಸ್ ಕೊಂಡುಕೊಳ್ಳುತ್ತೇವೆ ಎನ್ನುವ ಷರತ್ತು ಕೂಡ ಹಾಕುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಕನ್ನಡದಲ್ಲಿ ಇತ್ತೀಚೆಗೆ ಬಂದ 'ವಿದ್ಯಾಪತಿ' ಸಿನಿಮಾ 20 ದಿನಕ್ಕೆ ಓಟಿಟಿಗೆ ಬಂದಿದ್ದು ಗೊತ್ತೇಯಿದೆ. ಸ್ಟಾರ್ ನಟರ ಸಿನಿಮಾಗಳೇ 21 ದಿನಕ್ಕೆ ಓಟಿಟಿಗೆ ಬರುವುದನ್ನು ನೋಡಿದ್ದೇವೆ. ಇದನ್ನೆಲ್ಲಾ ನೋಡುತ್ತಿದ್ದರೆ ಚಿತ್ರಮಂದಿರಗಳಿಗೆ ಉಳಿಗಾಲವೇ ಇಲ್ಲವೇ ಎನ್ನುವಂತಾಗಿದೆ. ಈಗಾಗಲೇ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಬಾಗಿಲು ಮುಚ್ಚಿದೆ. ಕೆಲ ಚಿತ್ರಮಂದಿರಗಳು ನಷ್ಟದಲ್ಲಿ ನಡೆಯುತ್ತಿವೆ.
ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಗುಂಗಿನಲ್ಲಿದ್ದಾರೆ. ಹಾಗಾಗಿ ನಿಯಮಿತವಾಗಿ ದೊಡ್ಡ ಸಿನಿಮಾಗಳು ಬರದೇ ಜನ ಚಿತ್ರಮಂದಿರಗಳಿಂದ ದೂರಾಗುತ್ತಿದ್ದಾರೆ. 20 ದಿನಕ್ಕೆಲ್ಲಾ ಓಟಿಟಿಗೆ ಬಂದರೆ ಯಾಕಾದರೂ ಚಿತ್ರಮಂದಿರಕ್ಕೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಎನ್ನುವ ಮನಸ್ಥಿತಿಗೆ ತಲುಪುವಂತಾಗಿದೆ. ಬಹಳ ಬೇಗ ಚಿತ್ರಗಳನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುವ ಬಗ್ಗೆ ತಮಿಳುನಾಡು ಸಿನಿಮಾ ವಿತರಕರು, ಪ್ರದರ್ಶಕರು ವಿರೋಧಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ.
12 ವರ್ಷಗಳ ಹಿಂದೆ ಕಮಲ್ ಹಾಸನ್ 'ವಿಶ್ವರೂಪಂ' ಚಿತ್ರವನ್ನು ಡಿಟಿಹೆಚ್ ಮೂಲಕ ಮನೆ ಮನೆಗೂ ತಲುಪಿಸುವ ಪ್ರಯತ್ನ ಮಾಡಿದ್ದರು. ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ದಿನವೇ ಜನ ಹಣ ಪಾವತಿಸಿ ಮನೆಯಲ್ಲೇ ಡಿಟಿಹೆಚ್ ಮೂಲಕ ಸಿನಿಮಾ ನೋಡುವ ಅವಕಾಶ ಅದಾಗಿತ್ತು. ಅದಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ವಿತರಕರು, ಚಿತ್ರಮಂದಿರ ಮಾಲೀಕರು ಪ್ರತಿಭಟನೆ ನಡೆಸಿದ್ದರು. ಕಮಲ್ ಹಾಸನ್ ಪ್ಲ್ಯಾನ್ ಸಕ್ಸಸ್ ಆಗಿರಲಿಲ್ಲ. ಇದೀಗ ಓಟಿಟಿ ಮೂಲಕ ಅದೇ ಲೆಕ್ಕಾಚಾರ ನಡೀತಿದೆ.
ನೇರವಾಗಿ ಓಟಿಟಿಗೆ ಸಿನಿಮಾಗಳನ್ನು ನಿರ್ಮಿಸಿ ಕೊಡುವವರು ಇದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳೇ ಇಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಟರು ಮಾತ್ರ ತಮ್ಮ ಸ್ಟಾರ್‌ಡಂ, ಕ್ರೇಜ್ ಉಳಿಸಿಕೊಳ್ಳಲು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಬೇಕು ಎನ್ನುತ್ತಿದ್ದಾರೆ. ಬರೀ ಬ್ಯುಸಿನೆಸ್ ಎಂದು ಬಂದಾಗ ಓಟಿಟಿಯಿಂದಲೇ ಭಾರೀ ಹಣ ಸಿಗುವಂತಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡದೇ ನೇರವಾಗಿ ಒಟಿಟಿಗೆ ರೈಟ್ಸ್ ಮಾರಾಟ ಮಾಡಿದರೆ ಭಾರೀ ಹಣ ಸಿಗುತ್ತದೆ.
ದೊಡ್ಡ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ನೋಡಿದರೆ ಮಜಾ ಎನ್ನುವ ಕಾರಣಕ್ಕೆ ಜನ ಇವತ್ತಿಗೂ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್, ಪಾರ್ಕಿಂಗ್, ಸ್ನ್ಯಾಕ್ಸ್ ದರ ಹೆಚ್ಚಾಗಿ ಅದಕ್ಕೂ ಪ್ರೇಕ್ಷಕರು ಮೀನಾಮೇಷ ಎಣಿಸುವಂತಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಆದಷ್ಟು ಬೇಗ ಚಿತ್ರಮಂದಿರದ ಸಂಸ್ಕೃತಿ ಮುಗಿದು ಹೋಗುತ್ತಾ ಎನ್ನುವ ಪ್ರಶ್ನೆ ಮೂಡುತ್ತಿದೆ.
ಒಟಿಟಿಯಿಂದ ಸ್ಯಾಟಲೈಟ್ ರೈಟ್ಸ್ ಡಿಮ್ಯಾಂಡ್ ಕಮ್ಮಿ ಆಗಿದೆ. ಜನ ಓಟಿಟಿಯಲ್ಲಿ ಸಿನಿಮಾ ನೋಡಿದ ಮೇಲೆ ಟಿವಿಯಲ್ಲಿ ಪ್ರಸಾರವಾದಾಗ ನೋಡುವುದಿಲ್ಲ. ಟಿಆರ್‌ಪಿ ಕಮ್ಮಿಯಾಗಿ ಇದು ಸಹಜವಾಗಿಯೇ ವಾಹಿನಿಗಳ ಜಾಹೀರಾತುಗಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ಜೀ ಸಂಸ್ಥೆ ಇತ್ತೀಚೆಗೆ ಹೊಸ ಲೆಕ್ಕಾಚಾರ ಆರಂಭಿಸಿದೆ. ಓಟಿಟಿ ಹಾಗೂ ಸ್ಯಾಟಲೈಟ್ ಎರಡೂ ರೈಟ್ಸ್ ಕೊಟ್ಟರೆ ಖರೀದಿಸಲು ಜೀ ಸಂಸ್ಥೆ ಮನಸ್ಸು ಮಾಡಿದೆ.
ಏಕಕಾಲಕ್ಕೆ ಜೀ-5 ಓಟಿಟಿ ಹಾಗೂ ಜೀ ವಾಹಿನಿಗಳಲ್ಲಿ ಸಿನಿಮಾ ಪ್ರಸಾರ ಆರಂಭಿಸಲಾಗುತ್ತಿದೆ. ಕನ್ನಡದ 'ಮ್ಯಾಕ್ಸ್' ಹಾಗೂ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾಗಳ ವಿಚಾರದಲ್ಲಿ ಇದೇ ರೀತಿ ಮಾಡಲಾಗಿತ್ತು. ಈ ವಾರ ತೆಲುಗಿನ 'ರಾಬಿನ್ ಹುಡ್' ಚಿತ್ರವನ್ನು ಕೂಡ ಜೀ5 ಹಾಗೂ ಜೀ ತೆಲುಗು ವಾಹಿನಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುತ್ತಿದ್ದಾರೆ.
ಇನ್ನು ಚಿತ್ರರಂಗಕ್ಕೆ ಪೈರಸಿ ಭೂತ ಕೂಡ ಕಾಡುತ್ತಿದೆ. ಸಿನಿಮಾ ತೆರೆಕಂಡ ದಿನವೇ ಹೆಚ್‌ಡಿ ಪ್ರಿಂಟ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಲೀಕಾಸುರರ ಕೆಲವೊಮ್ಮೆ ಶಾಕ್ ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಬೇಗ ಬೇಗ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡುವಂತಾಗಿದೆ. ಅಂತಿಮವಾಗಿ ಇದೆಲ್ಲಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಂದ ದೂರ ಮಾಡುತ್ತಿದೆ.


Click it and Unblock the Notifications











