ಬಿಗ್‌ಬಾಸ್ ಸ್ಪರ್ಧಿಗಳನ್ನು ಗೊಂದಲಕ್ಕೆ ಸಿಲುಕಿಸಿದ 'ಪನ್ನೀರ್'! ಏನಿದರ ಕತೆ
ಬಿಗ್‌ಬಾಸ್ ಒಟಿಟಿ ಕನ್ನಡ ನಿನ್ನೆಯಷ್ಟೆ ಅಧಿಕೃತವಾಗಿ ಪ್ರಾರಂಭವಾಗಿದೆ. ಹದಿನಾರು ಮಂದಿ ಸ್ಪರ್ಧಿಗಳು ಮನೆಯ ಒಳಗೆ ಪ್ರವೇಶಿಸಿದ್ದಾರೆ.
ಅದ್ಧೂರಿಯಾಗಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿರೂಪಕ ಸುದೀಪ್ ಎಲ್ಲ ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು ಅವರೊಟ್ಟಿಗೆ ಮಾತನಾಡಿ, ಅವರ ಜೀವನದ ಬಗ್ಗೆ ಕಿರು ವಿಡಿಯೋಗಳನ್ನು ಪ್ರದರ್ಶಿಸಿ ಮನೆಯ ಒಳಕ್ಕೆ ಕಳಿಸಿಕೊಟ್ಟಿದ್ದಾರೆ.
ಆದರೆ ಸುದೀಪ್, ಯಾರನ್ನೇ ಮನೆಯ ಒಳಗೆ ಕಳಿಸುವ ಮುನ್ನ ಎಲ್ಲರಿಗೂ ಒಂದು ಸಾಮಾನ್ಯ ಪ್ರಶ್ನೆಯಂತೂ ಕೇಳಿದರು ಅದುವೇ 'ನಿಮಗೆ ಪನ್ನೀರ್ ಇಷ್ಟವಾ?' ಎಂದು. ಕೆಲವರು ಹೌದು ಇಷ್ಟ ಎಂದರೆ ಇನ್ನು ಕೆಲವರು ಇಷ್ಟವಿಲ್ಲ ಎಂದರು. ಆದರೆ ಸುದೀಪ್, ತಾವೇಕೆ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ಎಂದು ಮಾತ್ರ ಯಾರಿಗೂ ಹೇಳಲಿಲ್ಲ. ಇದಕ್ಕೆ ಕಾರಣ ಮಜವಾಗಿದೆ.

ಆರ್ಯವರ್ಧನ್‌ರ ಪನ್ನೀರ್ ವಿಡಿಯೋ
ಬಿಗ್‌ಬಾಸ್ ಒಟಿಟಿ ಕನ್ನಡದ ಮೊದಲ ಸ್ಪರ್ಧಿ ಸಂಖ್ಯಾಶಾಸ್ತ್ರಜ್ಞ ಎಂದು ಕರೆದುಕೊಳ್ಳುವ ಆರ್ಯವರ್ಧನ್. ಇವರ ವಿಡಿಯೋ ಒಂದು ಬಹಳ ವೈರಲ್ ಆಗಿತ್ತು ಅದು ಪನ್ನೀರ್ ವಿಡಿಯೋ. ಆರ್ಯವರ್ಧನ್‌ಗೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳುವ ವ್ಯಕ್ತಿಯೊಬ್ಬನಿಗೆ ಕೆಜಿಗಟ್ಟಲೆ ಪನ್ನೀರ್ ಅನ್ನು ಕಳಿಸುವಂತೆ ಆರ್ಯವರ್ಧನ್ ಕೇಳುತ್ತಾರೆ. ಎಲ್ಲರೂ ಹೂವಿನಲ್ಲೋ, ತುಪ್ಪದಲ್ಲೊ, ಎಳನೀರಲ್ಲೋ ಅಭಿಷೇಕ ಮಾಡಿಸಿದರೆ ಆರ್ಯವರ್ಧನ್ ಮಾತ್ರ ಪನ್ನೀರ್ ಕೇಳಿದ್ದು ಟ್ರೋಲ್‌ಗೆ ಕಾರಣವಾಗಿತ್ತು.

''ನಾನು ಪನ್ನೀರಿನ ಬಗ್ಗೆ ಹೇಳಿದ್ದೆ, ಪನ್ನೀರ್ ಬಗ್ಗೆ ಅಲ್ಲ''
ಇದೇ ಕಾರಣಕ್ಕೆ ಆರ್ವರ್ಧನ್ ಬಿಗ್‌ಬಾಸ್ ವೇದಿಕೆಗೆ ಬಂದಾಗ ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಆರ್ವರ್ಧನ್, ''ನಾನು ಪನ್ನೀರನ್ನು ಕೇಳಿದ್ದೆ ಆದರೆ ಜನ ನಾನು ಪನ್ನೀರ್ ಎಂದುಕೊಂಡರು'' ಎಂದಿದ್ದಾರೆ. ಅಂದರೆ ಆರ್ಯವರ್ಧನ್ ಹೂವಿನಿಂದ ಮಾಡಲಾಗುವ ದ್ರವ ವಸ್ತು ಪನ್ನೀರಿನಿಂದ ಅಭಿಷೇಕ ಮಾಡಲು ಕೇಳಿದ್ದರಂತೆ ಆದರೆ ಜನ ಅದನ್ನು ಹಾಲಿನಿಂದ ಮಾಡುವ ಘನ ವಸ್ತು ಪನ್ನೀರ್ ಎಂದುಕೊಂಡಿದ್ದಾರೆ!

ಪನ್ನೀರ್ ವೆಜ್ಜಾ? ನಾನ್ ವೆಜ್ಜಾ?
ಆದರೆ ಸುದೀಪ್ ಇಷ್ಟಕ್ಕೆ ಸುಮ್ಮನಾಗಿಲ್ಲ. ಆ ನಂತರ ಬಂದ ಎಲ್ಲರಿಗೂ ಇದೇ ಪ್ರಶ್ನೆಯನ್ನು ಕೇಳಿದರು. ನಿಮಗೆ ಪನ್ನೀರ್ ಇಷ್ಟವಾ ಎಂದರು. ಸೋನು ಶ್ರೀನಿವಾಸ್ ಗೌಡಗೆ 'ಪನ್ನೀರ್ ವೆಜ್ಜಾ ನಾನ್ ವೆಜ್ಜಾ' ಎಂದರು. ಸೋನು, ಪನ್ನೀರ್ ವೆಜ್ ಎಂದು ಉತ್ತರಿಸಿದರು. ಅದು ಹೇಗೆ? ಪನ್ನೀರ್ ಗಿಡದಲ್ಲಿ ಬೆಳೆಯುವುದಿಲ್ಲವಲ್ಲಾ? ಎಂದರು. ಗಿಡದಲ್ಲಿ ಬೆಳೆಯುವುದಿಲ್ಲ ನಿಜ ಆದರೆ ಅದನ್ನು ಮೊಸರಿನಿಂದ ಮಾಡುತ್ತಾರಲ್ಲಾ? ಎಂದರು. ಅದಕ್ಕೆ ನಕ್ಕು ಸುಮ್ಮನಾದರು ಸುದೀಪ್. ಅಸಲಿಗೆ ಪನ್ನೀರ್ ಅನ್ನು ಹಾಲಿನಿಂದ ಮಾಡಲಾಗುತ್ತದೆ. ಪಾಪ ಅಡುಗೆ ಮನೆಯ ಪರಿಚಯ ಇಲ್ಲದ ಸೋನುಗೆ ಅದು ಗೊತ್ತಿರಲಿಲ್ಲ.

ಎಲ್ಲರಿಗೂ ಪ್ರಶ್ನೆ ಕೇಳಿದ ಸುದೀಪ್
ಆ ನಂತರ ಬಂದ ಎಲ್ಲರಿಗೂ ಈ ಪ್ರಶ್ನೆಯಂತೂ ಸಾಮಾನ್ಯ ಎಂಬಂತಾಗಿತ್ತು. ಕೆಲವರು ನನಗೆ ಪನ್ನೀರ್ ಇಷ್ಟ ಎಂದರೆ ನನಗೆ ಪನ್ನೀರ್ ಸ್ವಲ್ಪವೂ ಇಷ್ಟವಿಲ್ಲ ಎಂದರು. ಜೊತೆಗೆ ಆರ್ಯವರ್ಧನ್ ಬಿಗ್‌ಬಾಸ್ ವೇದಿಕೆಗೆ ಮೊದಲ ಸ್ಪರ್ಧಿಯಾಗಿ ಬಂದು, ಮೂರು ಐದು ಹಾಗೂ ಆರನೇ ಸ್ಪರ್ಧಿಗಳು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಸಹ ಹೇಳಿದ್ದರು. ಆ ಬಗ್ಗೆಯೂ ಸುದೀಪ್ ಸಹ ಎಲ್ಲರಿಗೂ ಪ್ರಶ್ನೆ ಮಾಡಿದರು. ಒಟ್ಟಾರೆ ಆರ್ಯವರ್ಧನ್ ಸಂಭಾಷಣೆ ಆಧಾರದಲ್ಲಿ ಸಾಕಷ್ಟು ಹಾಸ್ಯಮಯ ಡೈಲಾಗ್‌ಗಳನ್ನು ಸುದೀಪ್ ಹೇಳಿ ಜನರನ್ನು ರಂಜಿಸಿದರು.


Click it and Unblock the Notifications











