'ಕಾಟೇರ'ನನ್ನು ಹಿಂದಿಕ್ಕಿದ್ನಾ 'ಮ್ಯಾಕ್ಸ್'? ಅಸಲಿ ಲೆಕ್ಕಾಚಾರ ಏನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಆರ್ಭಟ ಮುಂದುವೆರೆದಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗಪ್ಪಳಿಸಿ ಸದ್ದು ಮಾಡಿದ್ದ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಜೀ-ಕನ್ನಡ ವಾಹಿನಿಯಲ್ಲಿ ಕೂಡ ಸಿನಿಮಾ ಪ್ರೀಮಿಯರ್ ಆಗಿದೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಮ್ಯಾಕ್ಸಿಮಮ್ ಮನರಂಜನೆ ಹೊತ್ತು ತಂದಿತ್ತು. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಸುದೀಪ್ ಅಭಿಮಾನಿಗಳಂತೂ ಪದೇ ಪದೆ ಸಿನಿಮಾ ನೋಡಿದ್ದರು. ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದರೂ ಕೂಡ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಿದ್ದರು.

ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಕರ್ನಾಟಕದಲ್ಲಿ ಸಿನಿಮಾ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಅಧಿಕೃತವಾಗಿ 'ಮ್ಯಾಕ್ಸ್' ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಲ್ಲರೂ ಚಿತ್ರದಿಂದ ಲಾಭ ಮಾಡಿಕೊಂಡಿದ್ದಾರೆ.
ಜೀ ಸಂಸ್ಥೆ ಭಾರೀ ಮೊತ್ತಕ್ಕೆ 'ಮ್ಯಾಕ್ಸ್' ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿತ್ತು. ಫೆಬ್ರವರಿ 15ರಂದು ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅಂದೇ ಜೀ-5 ಓಟಿಟಿಗೆ ಎಂಟ್ರಿ ಕೊಟ್ಟಿತ್ತು. ಇದೀಗ ಕೇವಲ 72 ಗಂಟೆಗಳಲ್ಲಿ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಕಂಪ್ಲೀಟ್ ಮಾಡಿದೆ. ಅಂದರೆ ಒಟ್ಟಾರೆಯಾಗಿ ಜನ ಎಷ್ಟು ಹೊತ್ತು ಸಿನಿಮಾ ನೋಡಿದ್ದಾರೆ ಎನ್ನುವ ಒಟ್ಟು ಲೆಕ್ಕ ಇದೆ.
ಎರಡೂವರೆ ವರ್ಷದ ಹಿಂದೆ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಓಟಿಟಿಯಲ್ಲಿ ಸಖತ್ ಸದ್ದು ಮಾಡಿತ್ತು. ಜೀ-5ನಲ್ಲೇ ಸ್ಟ್ರೀಮಿಂಗ್ ಆಗಿದ್ದ ಸಿನಿಮಾ ಕೇವಲ 24 ಗಂಟೆಗಳಲ್ಲಿ 50 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಕಂಪ್ಲೀಟ್ ಮಾಡಿತ್ತು. ಜೀ-5ನಲ್ಲೇ ಬಂದಿದ್ದ ದರ್ಶನ್ ನಟನೆಯ 'ಕಾಟೇರ' ಸಿನಿಮಾ 5 ದಿನಗಳಲ್ಲಿ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಪೂರೈಸಿತ್ತು. ಆದರೆ 'ಕಾಟೇರ' ಚಿತ್ರವನ್ನು ಜನ ಚಿತ್ರಮಂದಿರದಲ್ಲೇ ಹೆಚ್ಚು ನೋಡಿದ್ದರು.
ಸದ್ಯ 'ಮ್ಯಾಕ್ಸ್' ಚಿತ್ರದ ವಿಚಾರದಲ್ಲೂ ಸುದೀಪ್ ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ. ಕೇವಲ 72 ಗಂಟೆಗಳಲ್ಲಿ ಸಿನಿಮಾ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಮಾಡಿದೆ ಎನ್ನುತ್ತಿದ್ದಾರೆ. ಜೀ-5 ಕನ್ನಡ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಸಾಧನೆ ಮಾಡಲು 'ಕಾಟೇರ' ಸಿನಿಮಾ 5ರಿಂದ 6 ದಿನ ತೆಗೆದುಕೊಂಡಿತ್ತು ಎನ್ನುತ್ತಿದ್ದಾರೆ. ಆದರೆ 'ಮ್ಯಾಕ್ಸ್' ಸಿನಿಮಾ ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಜೀ-5ನಲ್ಲಿ ಸ್ಟ್ಟೀಮಿಂಗ್ ಆಗುತ್ತಿದೆ.
ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಸುದೀಪ್ ಪರಭಾಷಿಕರಿಗೂ ಪರಿಚಿತ ನಟ. ಹಾಗಾಗಿ ಬೇರೆ ಭಾಷಿಕರು ದೊಡ್ಡಮಟ್ಟದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಹಾಗಾಗಿ ಬಹಳ ಬೇಗ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ.
'ಕಾಟೇರ' ಸಿನಿಮಾ ಕೂಡ ತೆಲುಗು, ತಮಿಳಿಗೆ ಡಬ್ ಆಗಿ ಜೀ-5 ಓಟಿಟಿಗೆ ಬಂದಿತ್ತು. ಆದರೆ 2 ತಿಂಗಳು ತಡವಾಗಿತ್ತು. ಕನ್ನಡದಲ್ಲಿ ಮಾತ್ರ ಮೊದಲು ಸ್ಟ್ರೀಮಿಂಗ್ ಆರಂಭಿಸಿತ್ತು. ಒಟ್ಟಾರೆ 'ಮ್ಯಾಕ್ಸ್' ಸಿನಿಮಾ ಓಟಿಟಿಯಲ್ಲಿ ಕೂಡ ಸದ್ದು ಮಾಡುತ್ತಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಈಗಾಗಲೇ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಕೂಡ ಓಟಿಟಿಯಲ್ಲಿ ಮತ್ತೊಮ್ಮೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











