50 ದಿನ ಪೂರೈಸಿದ್ದ ಮಲೆನಾಡ ಸೊಗಡಿನ ಕನ್ನಡ ಸಿನಿಮಾ ಓಟಿಟಿ ಬಂತು.. ಆದರೆ..
ಈ ವಾರ ಚಿತ್ರಮಂದಿರಗಳಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾ ರಿಲೀಸ್ ಆಗಿಲ್ಲ. ತೆಲುಗಿನ ಹಿಟ್-3 ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬಂದಿದೆ. ಇನ್ನು ತಮಿಳಿನ 'ರೆಟ್ರೋ' ಸಿನಿಮಾ ಕೂಡ ರಾಜ್ಯದಲ್ಲಿ ತೆರೆಕಂಡಿದೆ. ಕಳೆದ ವಾರ ಬಿಡುಗಡೆಯಾಗಿದ್ದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ.
ಈ ಹಿಂದೆ ಬಿಡುಗಡೆಯಾಗಿದ್ದ 'ಅಜ್ಞಾತವಾಸಿ' ಹಾಗೂ 'ವಾಮನ' ಚಿತ್ರಗಳು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಓಟಿಟಿಯಲ್ಲಿ 'ಸೋಮು ಸೌಂಡ್ ಇಂಜಿನಿಯರ್', 'ಗೌರಿ', 'ಗೋಪಿಲೋಲ', 'ವಿಷ್ಣುಪ್ರಿಯ' ಸೇರಿ ಇತ್ತೀಚೆಗೆ ಬಂದಿದ್ದ ಒಂದಷ್ಟು ಸಿನಿಮಾಗಳು ವೀಕ್ಷಕರನ್ನು ರಂಜಿಸುತ್ತಿವೆ, ವೀಕೆಂಡ್ ಬಂತು. ಯಾವುದೇ ಕನ್ನಡ ಸಿನಿಮಾ ಓಟಿಟಿಗೆ ಬರಲ್ವಾ ಎಂದು ಕಾಯುತ್ತಿದ್ದವರಿಗೆ ಸರ್‌ಪ್ರೈಸ್ ಸಿಕ್ಕಿದೆ.

ವರ್ಷದ ಹಿಂದೆ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದ 'ಕೆರೆಬೇಟೆ' ಸಿನಿಮಾ ದಿಢೀರ್ ಸ್ಟ್ರೀಮಿಂಗ್ ಆರಂಭಿಸಿದೆ. ರಾಜ್‌ಗುರು ಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಗೌರಿಶಂಕರ್ ಹೀರೊ ಆಗಿ ನಟಿಸಿದ್ದಾರೆ. ಬಿಂದು ಶಿವರಾಮ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್ ಹಾಗೂ ಸಂಪತ್ ಮೈತ್ರೆಯ ಚಿತ್ರದ ತಾರಾಗಣದಲ್ಲಿದ್ದಾರೆ. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ಸದ್ಯಕ್ಕೆ ಪ್ರೈಂ ಚಂದಾದಾರರು ಉಚಿತವಾಗಿ 'ಕೆರೆಬೇಟೆ' ಸಿನಿಮಾ ವೀಕ್ಷಿಸಲು ಸಾಧ್ಯವಿಲ್ಲ. 99 ರೂಪಾಯಿ ಪಾವತಿಸಿ ಸಿನಿಮಾ ನೋಡಬಹುದು. ಮುಂದಿನ ವಾರ ಉಚಿತವಾಗಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. 'ಕಾಂತಾರ' ರೀತಿಯಲ್ಲಿ ರಾಜ್ಯದ ಒಂದು ಪ್ರಾಂತ್ಯದ ಆಚಾರ, ವಿಚಾರ, ಭಾಷೆ, ಸೊಗಡನ್ನು ಹೊತ್ತು ತಂದಿದ್ದ ಸಿನಿಮಾ ಇದು. ಮಲೆನಾಡಿನ ಸೊಗಬನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಮಲೆನಾಡಿನ ಭಾಗದಲ್ಲಿ ಜನ ವರ್ಷಕ್ಕೊಮ್ಮೆ ಕೆರೆಗೆ ಹೋಗಿ ಮೀನು ಹಿಡಿಯುವ ರೂಢಿ ಇದೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಕಥೆ ಮಾಡಿದ್ದಾರೆ. ಮಲೆನಾಡಿನ ಭಾಗದ ನಟ ಗೌರಿಶಂಕರ್ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಜಾತಿ, ಪ್ರೀತಿಯ ವಿಚಾರವೇ ಚಿತ್ರದ ಹೈಲೆಟ್.
ಹುಲಿಮನೆ ನಾಗ(ಗೌರಿಶಂಕರ್) ಸಿಕ್ಕಾಪಟ್ಟೆ ರಗಡ್. ಮುಂಗೋಪಿ. ಸದಾ ಹೊಡೆದಾ, ಗಲಾಟೆ ಎಂದು ಸುತ್ತಾಡುತ್ತಿರುತ್ತಾನೆ. ಅಂತಹ ನಾಗ ಬಾಳಿಗೆ ಮೀನಾ(ಬಿಂದು) ಆಗಮನವಾಗುತ್ತದೆ. ಈ ಪ್ರೀತಿ ಬಹಳ ದಿನ ಗುಟ್ಟಾಗಿ ಉಳಿಯುವುದಿಲ್ಲ. ಅನ್ಯಜಾತಿಯ ನಾಗನಿಗೆ ಮಗಳನ್ನು ಹೊಡುವುದಿಲ್ಲ ಎಂದು ಮೀನಾಳ ತಂದೆ(ಗೋಪಾಲಕೃಷ್ಣ ದೇಶಪಾಂಡೆ) ಹಠಕ್ಕೆ ಬೀಳುತ್ತಾರೆ. ಈ ಹಂತದಲ್ಲಿ ನಾಗ ಮಾಡುವ ಎಡವಟ್ಟು ಮುಂದೆ ಏನೆಲ್ಲಾ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಿಂದ ಆತ ಹೇಗೆ ಹೊರ ಬರುತ್ತಾನೆ ಎನ್ನುವುದು ಚಿತ್ರದ ಇನ್ನುಳಿದ ಕಥೆ.
ಚಿತ್ರದುದ್ದಕ್ಕೂ ನಾಯಕನಿಗೆ ನೆಗೆಟಿವ್ ಶೇಡ್ ಹೆಚ್ಚಾಗಿದೆ. ಮಲೆನಾಡಿನ ಸ್ವಚ್ಛ ಕಥೆಯನ್ನು ಹೇಳಿ ಚಿತ್ರತಂಡ ಗೆದ್ದಿತ್ತು. ಸುದೀಪ್, ಧ್ರುವ ಸರ್ಜಾ ಸೇರಿ ಹಲವರು 'ಕೆರೆಬೇಟೆ' ಚಿತ್ರದ ಬೆಂಬಲಕ್ಕೆ ನಿಂತಿದ್ದರು. ಸುದೀಪ್ ಟ್ರೈಲರ್ ನೋಡಿ ಮೆಚ್ಚಿದ್ದರು. ಧ್ರುವ ಸಿನಿಮಾ ನೋಡಿ ಎಲ್ಲರೂ ನೋಡುವಂತೆ ಮನವಿ ಮಾಡಿದ್ದರು. ಸಿನಿಮಾ 50 ದಿನಗಳ ಕಾಲ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಕೆಲವರು ಸಿನಿಮಾ ನೋಡಲು ಬಯಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆ ಅವಕಾಶ ಸಿಗುತ್ತಿದೆ. ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೂಡ ಸಿನಿಮಾ ಪ್ರದರ್ಶನ ಕಂಡಿತ್ತು.
ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿರುವ ನಿರ್ದೇಶಕ ರಾಜ್‌ಗುರು ಇದೀಗ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಅವರ ಮುಂದಿನ ಚಿತ್ರದಲ್ಲಿ ಧ್ರುವ ಸರ್ಜಾ ಹೀರೊ ಆಗಿ ನಟಿಸೋ ಸಾಧ್ಯತೆ ದಟ್ಟವಾಗಿದೆ. ನಿರ್ದೇಶಕ ಪವನ್ ಒಡೆಯರ್ ಬಳಿ ರಾಜ್‌ಗುರು ಸಹಾಯಕರಾಗಿ ಕೆಲಸ ಮಾಡಿದ್ದರು. 'ಕೆರೆಬೇಟೆ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು.


Click it and Unblock the Notifications











