ಮಿರ್ಜಾಪುರ್ ನಿರ್ಮಾಪಕರಿಗೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್
ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುತ್ತಿರುವ ಮಿರ್ಜಾಪುರ್ ವೆಬ್ ಸರಣಿ ಗೆ ಸಂಕಷ್ಟ ಎದುರಾಗಿದೆ. ಮಿರ್ಜಾಪುರ್ ವೆಬ್ ಸರಣಿಯ ವಿರುದ್ಧ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ದೂರು ನೀಡಿದ್ದು, ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಮಿರ್ಜಾಪುರ ವೆಬ್ ಸರಣಿಯ ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯವರಾದ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೂಡಿದ್ದರು. ದೂರಿನಲ್ಲಿ, 'ಮಿರ್ಜಾಪುರ್' ವೆಬ್ ಸರಣಿಯು ಉತ್ತರ ಪ್ರದೇಶ ರಾಜ್ಯದ ಮಿರ್ಜಾಪುರ ಜಿಲ್ಲೆಗೆ ಅಪಮಾನ ಮಾಡುತ್ತಿದೆ. ಮಿರ್ಜಾಪುರದ ಹೆಸರು ಹಾಳು ಮಾಡುತ್ತಿದೆ ಎಂದು ಹೇಳಲಾಗಿತ್ತು.
'ಮಿರ್ಜಾಪುರ್' ವೆಬ್ ಸರಣಿಯಲ್ಲಿ ಅಸಭ್ಯ ಭಾಷೆ ಬಳಕೆ, ರಕ್ತಪಾತ, ಹಿಂದೆ, ಸಾಮಾಜಿಕ ದ್ವೇಷಕ್ಕೆ ಪ್ರಚಾರ ನೀಡಲಾಗಿದೆ. ಇದೆಲ್ಲದರ ಜೊತೆಗೆ ಮಿರ್ಜಾಪುರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ವೆಬ್ ಸರಣಿಯು ಮಿರ್ಜಾಪುರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿತ್ತು.

'ಮಿರ್ಜಾಪುರವು ಪುರಾತನ ಇತಿಹಾಸವುಳ್ಳ ನಗರವಾಗಿದೆ ಆದರೆ ಈ ವೆಬ್ ಸರಣಿಯಲ್ಲಿ ಮಿರ್ಜಾಪುರ್, ಕೊಲೆಗಡುಕರ, ಗೂಂಡಾಗಳ ನಗರ, ಕಾಮಪಿಪಾಸುಗಳ ನಗರ ಎಂಬಂತೆ ಚಿತ್ರಿಸಲಾಗಿದೆ ' ಎಂದು ದೂರಿನಲ್ಲಿ ಹೇಳಲಾಗಿದೆ.
ವೆಬ್ ಸರಣಿಯ ನಿರ್ಮಾಪಕರಾದ ಫರ್ಹಾನ್ ಅಖ್ತರ್, ರಿತೇಶ್ ಸಿದ್ವಾನಿ ಅವರಿಗೆ ಹಾಗೂ ಅಮೇಜಾನ್ ಪ್ರೈಂ ಗೆ ನೊಟೀಸ್ ಜಾರಿಯಾಗಿತ್ತು. ಉತ್ತರ ನೀಡುವಂತೆ ಆಗ್ರಹಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸಲು ಮುಂಬೈ ಗೆ ಸಹ ತಲುಪಿದ್ದಾರೆ.


Click it and Unblock the Notifications











