ಬಂಧನ ಭೀತಿಯಲ್ಲಿ 'ತಾಂಡವ್' ವೆಬ್ ಸರಣಿ ನಿರ್ಮಾಪಕ, ನಿರ್ದೇಶಕ
'ತಾಂಡವ್' ವೆಬ್ ಸರಣಿ ನಿರ್ಮಾಪಕ ಹಾಗೂ ನಿರ್ದೇಶಕ, ನಟನಿಗೆ ಬಂಧನ ಭೀತಿ ಎದುರಾಗಿದೆ. 'ತಾಂಡವ್' ನಿರ್ಮಾಪಕ, ನಿರ್ದೇಶಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದು ಮಾಡಿದೆ ಸುಪ್ರೀಂಕೋರ್ಟ್.
'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ದೇವರಿಗೆ ಅವಮಾನ ಮಾಡಲಾಗಿದೆ ಎಂದು ಹಲವರು ದೂರು ಸಲ್ಲಿಸಿದ್ದರು. 'ತಾಂಡವ್' ನಿರ್ಮಾಪಕ, ನಿರ್ದೇಶಕ, ಶಿವನ ಪಾತ್ರ ನಿರ್ವಹಿಸಿದ್ದ ನಟನ ವಿರುದ್ಧ ವಾರೆಂಟ್ ಹೊರಡಿಸಲಾಗಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕು ಹಾಗೂ ಬಂಧನಕ್ಕೆ ತಡೆ ನೀಡಬೇಕೆಂದು ಕೋರಿ 'ತಾಂಡವ್' ನಿರ್ಮಾಪಕ, ನಿರ್ದೇಶಕ, ನಟ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಅವರ ಅರ್ಜಿ ರದ್ದಾಗಿದೆ.

'ಪೂರ್ಣವಾದ ವಾಕ್ ಸ್ವಾತಂತ್ರ್ಯವಿಲ್ಲ, ಇತರರ ಭಾವನೆಗಳಿಗೆ ಧಕ್ಕೆ ಬಾರುವ ಪಾತ್ರಗಳಲ್ಲಿ ನಟಿಸುವುದು, ಮಾತನಾಡುವುದು ತಪ್ಪು' ಎಂದು ಸುಪ್ರೀಂ ಕೋರ್ಟ್ ನಟ ಮೊಹಮ್ಮದ್ ಜೀಶಾನ್ ಆಯುಬ್ ಗೆ ತಿಳಿಸಿದೆ.
ಎಫ್ಐಆರ್ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಎಫ್‌ಐಆರ್ ರದ್ದು ಮಾಡಲು 'ತಾಂಡವ್' ನ ತಂಡವು ಹೈಕೋರ್ಟ್ ನಲ್ಲಿ ಅರ್ಜಿ ಹಾಕಿಕೊಳ್ಳಬೇಕು ಎಂದು ಹೇಳಿದೆ.
ಅಲಿ ಅಬ್ಬಾಸ್ ಝಪರ್ ನಿರ್ದೇಶನದ 'ತಾಂಡವ್' ಸಿನಿಮಾದಲ್ಲಿ ಶಿವ ಪಾತ್ರಧರಿಸಿದ್ದ ವ್ಯಕ್ತಿ ಕೆಲವು ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಾನೆ. ಈ ದೃಶ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಹಲವು ರಾಜ್ಯಗಳಲ್ಲಿ 'ತಾಂಡವ್' ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲಾಗಿದೆ.
'ತಾಂಡವ್' ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ತಂಡವು ಬಹಿರಂಗ ಕ್ಷಮಾಪಣೆ ಕೋರಿತು. ಅಷ್ಟೇ ಅಲ್ಲದೆ, ಪ್ರತಿಭಟನೆಗೆ, ಅಸಮಾಧಾನಕ್ಕೆ ಕಾರಣವಾಗಿದ್ದ ಕೆಲವು ದೃಶ್ಯಗಳನ್ನು ಡಿಲೀಟ್ ಸಹ ಮಾಡಲಾಯಿತು.
'ತಾಂಡವ್' ವೆಬ್ ಸರಣಿಯು ಜೆಎನ್‌ಯು ವಿದ್ಯಾರ್ಥಿ ಹೋರಾಟ, ರಾಜಕೀಯ, ಜಾತಿ ಪದ್ಧತಿ ಇನ್ನೂ ಹಲವು ವಿಷಯಗಳನ್ನು ಹೊಂದಿರುವ ವೆಬ್ ಸರಣಿ ಆಗಿದೆ. ಸೈಫ್ ಅಲಿ ಖಾನ್, ಡಿನೊ ಮರಿಯೋ, ಕೃತಿಕಾ ಕಾಮ್ರಾ, ಸಾರಾ ಜೇನ್, ಸುನಿಲ್ ಗ್ರೋವರ್, ಡಿಂಪಲ್ ಕಪಾಡಿಯಾ, ಶೊನಾಲಿ ನಾಗ್ರಾನಿ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











