Retro Ott; ಸೂರ್ಯ 'ರೆಟ್ರೋ' ಓಟಿಟಿ ರಿಲೀಸ್; ಕನ್ನಡದಲ್ಲೇ ನೋಡಬಹುದು
ತಿಂಗಳಿಗೂ ಮುನ್ನ ಸೂರ್ಯ ನಟನೆಯ 'ರೆಟ್ರೋ' ಸಿನಿಮಾ ಓಟಿಟಿಗೆ ಬರ್ತಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೇ 1ಕ್ಕೆ ತೆರೆಗೆ ಬಂದಿತ್ತು. ಅದೇ ದಿನ ತೆಲುಗಿನ 'ಹಿಟ್- 3' ಸಿನಿಮಾ ಕೂಡ ತೆರೆಗಪ್ಪಳಿಸಿತ್ತು. ಇದೀಗ ಎರಡೂ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಖಚಿತವಾಗಿದೆ.
'ಕಂಗುವ' ಹೀನಾಯ ಸೋಲಿನ ಬಳಿಕ ಸೂರ್ಯ ನಟನೆಯ 'ರೆಟ್ರೊ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. 17 ದಿನಕ್ಕೆ ವಿಶ್ವದಾದ್ಯಂತ ಸಿನಿಮಾ 235 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳಿತ್ತು. ಈ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡಿದ್ದರು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿದರೆ 150 ಕೋಟಿ ರೂ. ಕಲೆಕ್ಷನ್ ಮಾಡುವುದು ಕಷ್ಟ. ಆದರೆ 235 ಕೋಟಿ ರೂ. ಎಂದು ಸುಳ್ಳು ಹೇಳ್ತೀರಾ ಎಂದಿದ್ದರು.

60ರಿಂದ 90ರ ದಶಕದ ನಡುವೆ ನಡೆಯುವ ಕಥೆ 'ರೆಟ್ರೋ' ಚಿತ್ರದಲ್ಲಿದೆ. ಒಂದು ಗ್ಯಾಂಗ್‌ಸ್ಟರ್ ಕಥೆಯ ಜೊತೆ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಬ್ಲೆಂಡ್ ಮಾಡಿ ಚಿತ್ರ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾರಿವೇಲ್ ಆಗಿ ಸೂರ್ಯ ಅಬ್ಬರಿಸಿದ್ದಾರೆ. ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ದರ್ಬಾರ್ ನಡೆಸಿದ್ದಾರೆ. ಆತನ ಪ್ರೇಯಸಿ, ಪತ್ನಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಚಿತ್ರದ 'ಕನ್ನಿಮಾ' ಸಾಂಗ್ ಹಿಟ್ ಆಗಿ ಸಖತ್ ಸದ್ದು ಮಾಡಿತ್ತು.
ಓಟಿಟಿ ಡೀಲ್
80 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ 'ರೆಟ್ರೋ' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿರುವುದಾಗಿ ಹಿಂದೆ ಸುದ್ದಿಯಾಗಿತ್ತು. ಮೇ 31ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುವುದು ಇದೀಗ ಖಚಿತವಾಗಿದೆ. 'ಕಂಗುವ' ಸಿನಿಮಾ ಸೋತಿದ್ದರೂ ದೊಡ್ಡ ಮೊತ್ತಕ್ಕೆ 'ರೆಟ್ರೋ' ಓಟಿಟಿ ಡೀಲ್ ಕುದುರಿಸಲಾಗಿತ್ತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಎನ್ನುವುದು ಅದಕ್ಕೆ ಮತ್ತೊಂದು ಕಾರಣ. ಚಿತ್ರ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.
25 ದಿನ ಪೂರೈಸಿದ 'ರೆಟ್ರೊ'
ಸದ್ಯ ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಚಿತ್ರತಂಡ ಪೋಸ್ಟ್ ಮಾಡಿದೆ. ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಒಡೆತನದ 2D ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೂಡ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಥೈಲ್ಯಾಂಡ್‌ಗೆ ಹೋಗಿ ಸೂರ್ಯ ಮಾರ್ಷಲ್ ಆರ್ಟ್ಸ್ ಕಲಿತು ಬಂದು ಚಿತ್ರದಲ್ಲಿ ನಟಿಸಿದ್ದರು.
'ರೆಟ್ರೋ' ಸಿನಿಮಾ ಕಥೆ
ತಿಲಕನ್ (ಜೋಜು ಜಾರ್ಜ್) ದೊಡ್ಡ ಗ್ಯಾಂಗ್‌ಸ್ಟರ್. ಆತನ ಆರೈಕೆಯಲ್ಲಿ ಪಾರಿವೇಲ್ ಕಣ್ಣನ್ (ಸೂರ್ಯ) ಬೆಳೆದು ದೊಡ್ಡವನಾಗುತ್ತಾನೆ. ಹಾಗಾಗಿ ತಾನೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗುತ್ತದೆ. ಆದರೆ ರುಕ್ಮಿಣಿ (ಪೂಜಾ ಹೆಗ್ಡೆ) ಆತನ ಬಾಲಿಗೆ ಎಂಟ್ರಿ ಕೊಟ್ಟ ಮೇಲೆ ಪಾತಕಲೋಕದಿಂದ ದೂರಾಗಲು ಬಯಸುತ್ತಾನೆ. ಆದರೆ ಅದು ಸುಲಭವೇ? ಅದಕ್ಕೆ ತಿಲಕನ್ ಆಸ್ಪದ ಕೊಡುತ್ತಾನಾ?ಏನದು ಗೋಲ್ಡ್ ಫಿಶ್ ಡೀಲ್ ಎನ್ನುವುದರ ಸುತ್ತಾ 'ರೆಟ್ರೋ' ಸಿನಿಮಾ ಕತೆ ಸುತ್ತುತ್ತದೆ. ಹಳೆ ಕತೆಯನ್ನೇ ಹೊಸದಾಗಿ ಹೇಳುವ ಪ್ರಯತ್ನ ನಡೆದಿದೆ.
ಸೂರ್ಯ, ಪೂಜಾ ಜೊತೆಗೆ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಜಯರಾಮ್, ನಾಸರ್, ಪ್ರಕಾಶ್ ರಾಜ್, ರೆಮ್ಯಾ ಸುರೇಶ್, ಸಾಯಿ ದೀನಾ ಹೀಗೆ ಸಾಕಷ್ಟು ಜನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೇಯಸ್ ಕೃಷ್ಣ ಛಾಯಾಗ್ರಹಣ ಹಾಗೂ ಸಂತೋಷ್ ನಾರಾಯಣನ್ ಸಂಗೀತ ಚಿತ್ರಕ್ಕಿದೆ. ಅಂಡಮಾನ್, ಊಟಿ, ಕನ್ಯಾಕುಮಾರಿ, ಕೇರಳ ಹಾಗೂ ಚೆನ್ನೈ ಸೇರಿ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿತ್ತು. 60, 70, 80ರ ದಶಕದ ಕಾಲಘಟ್ಟವವನ್ನು ಕಟ್ಟಿಕೊಡಲು ಚಿತ್ರರಂಡ ಬಹಳ ಶ್ರಮಿಸಿದೆ.


Click it and Unblock the Notifications