ತಿಂಗಳಿಗೂ ಮುನ್ನವೇ ಓಟಿಟಿಗೆ ಬಂತು ಕರುಪ್ಪು ; ಎಲ್ಲಿ ನೋಡಬಹುದು ಸೂರ್ಯ ವೃತ್ತಿ ಬದುಕಿನ ಮೈಲಿಗಲ್ಲು
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರಮಂದಿರ ಮತ್ತು ಓಟಿಟಿಯ ನಡುವೆ ಚಿತ್ರರಂಗ ಸಿಲುಕಿಕೊಂಡಿದೆ. ಚಿತ್ರಮಂದಿರಕ್ಕೆ ಓಟಿಟಿ ತೀವೃವಾದ ಸ್ಪರ್ಧೆಯನ್ನೊಡ್ಡುತ್ತಿದೆ. ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುವ ಮಜಾ ಬೇರೆಯದ್ದೇ ಆದರೂ ಕೂಡ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸಮಯದಲ್ಲಿ ತಮ್ಮ ಇಷ್ಟದ ಚಿತ್ರವನ್ನು ನೋಡುವ ಪ್ರೇಕ್ಷಕರ ವರ್ಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಮಲ್ಟಿಪ್ಲೆಕ್ಸ್‌ಗೆ ತೆರಳಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವ ಬದಲು ಕೆಲ ವಾರಗಳ ನಂತರ ಮೊಬೈಲ್ ಅಥವಾ ಟಿವಿಯಲ್ಲಿ ಚಿತ್ರವನ್ನು ನೋಡುವುದೇ ಹಲವರ ಪಾಲಿಗೆ ಈಗ ನೆಚ್ಚಿನ ಹವ್ಯಾಸವಾಗಿದೆ. ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ನೆಲಕಚ್ಚುತ್ತಿವೆ.

ಹಾಗಂಥ ಎಲ್ಲ ಸಿನಿಮಾಗಳು ಈ ಸಾಲಿಗೆ ಸೇರುವುದಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತವೆ. ಗೆಲ್ಲುತ್ತವೆ. ವಿಶೇಷ ಅಂದರೆ ಹೀಗೆ ಗೆದ್ದ ಚಿತ್ರಗಳನ್ನು ಹಲವರು ಚಿತ್ರಮಂದಿರಗಳಲ್ಲಿಯೇ ನೋಡಿರುತ್ತಾರೆ.
ಆದರೂ ಕೂಡ ತಮ್ಮ ಅಂಗೈಯಲ್ಲಿ ಮತ್ತೊಮ್ಮೆ ನೋಡುವ ಆಸೆ ಇದ್ದೇ ಇರುತ್ತೆ. ಹೀಗಾಗಿ ಚಿತ್ರಮಂದಿರದಲ್ಲಿ ಹೃದಯ ಗೆದ್ದ ಚಿತ್ರ ಮನೆ ಅಂಗಳಕ್ಕೆ ಬರುವುದು ಯಾವಾಗ ಎಂದು ಹಲವರು ಕಾತುರದಿಂದ ಕಾಯುತ್ತಾ ಕುಳಿತುಕೊಂಡಿರುತ್ತಾರೆ. ಉದಾಹರಣೆಗೆ ''ಕರುಪ್ಪು''.
ಹೌದು, ''ಕರುಪ್ಪು'' ಸೂರ್ಯ ವೃತ್ತಿ ಬದುಕಿನ ಮೈಲಿಗಲ್ಲು. ಕಳೆದ ಮೇ 15ರಂದು ಹಲವಾರು ಅಡೆ ತಡೆಯ ನಡುವೆ ತೆರೆಗೆ ಬಂದ ಈ ಚಿತ್ರ, ಬಾಕ್ಸಾಫೀಸ್‌ನಲ್ಲಿ ಮಾಡಿದ ಮತ್ತು ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ.
ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ''ಕರುಪ್ಪು'' ಇಲ್ಲಿಯವರೆಗೆ 25 ದಿನಗಳ ಯಶಸ್ವೀ ಪ್ರದರ್ಶನ ಕಂಡಿದೆ. ಈ 25 ದಿನಗಳಲ್ಲಿ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹193.69 ಕೋಟಿಯನ್ನು ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿದೆ.

ನೆನಪಿರಲಿ, ಸೂರ್ಯ ಚಿತ್ರರಂಗಕ್ಕೆ ಬಂದು ಹತ್ ಹತ್ರ 30 ವರ್ಷಗಳಾಗುತ್ತಾ ಬಂದಿವೆ. ವಿಶೇಷ ಅಂದರೆ ಇಲ್ಲಿಯವರೆಗೆ ಸೂರ್ಯ ಅಭಿನಯದ ಯಾವ ಚಿತ್ರ ಕೂಡ ಕೇವಲ ಭಾರತದಲ್ಲಿ ಇಷ್ಟೊಂದು ಹಣ ದೋಚಿಲ್ಲ. 200 ಕೋಟಿಯ ಗಡಿಯ ಬಳಿ ಕೂಡ ಬಂದಿಲ್ಲ. ''ಕರುಪ್ಪು'' ಸೂರ್ಯ ವೃತ್ತಿ ಬದುಕಿನ ಮೈಲಿಗಲ್ಲು ಎಂದು ನಾವು ಹೇಳಲು ಇದೇ ಪ್ರಮುಖ ಕಾರಣ.
ಇಂಥಾ ''ಕರುಪ್ಪು'' ಕೇವಲ 28 ದಿನಕ್ಕೆ ಸದ್ಯ ಓಟಿಟಿಗೆ ಬರುತ್ತಿದೆ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಆಗಲೇ ಹೇಳಿದಂತೆ ''ಕರುಪ್ಪು'' ಚಿತ್ರಕ್ಕೆ ಪ್ರೇಕ್ಷಕರ ಕರತಾಡನ ಸಿಕ್ಕಿದೆ. ಈಗಲೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಿದ್ದಾರೆ. ಹೀಗಿರುವಾಗ ತಿಂಗಳ ಮುಂಚೆಯೇ ಓಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಚಿತ್ರತಂಡದ ನಿರ್ಧಾರದ ಕುರಿತು ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ. ಸೂರ್ಯ ಅಭಿಮಾನಿಗಳಲ್ಲಿ ಅಸಮಾಧಾನದ ಅಲೆ ಕೂಡ ಎದ್ದಿದೆ.
ಎಲ್ಲಿ ನೋಡಬಹುದು ?
ಬಾಕ್ಸಾಫೀಸ್‌ನಲ್ಲಿ ಸದ್ಯ 200 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ''ಕರುಪ್ಪು'' ಇದೇ ಜೂನ್ 12ರಂದು ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಜೂನ್ 12ರಂದು 200ಕ್ಕೂ ಅಧಿಕ ದೇಶಗಳಲ್ಲಿ ''ಕರುಪ್ಪು'' ಏಕಕಾಲಕ್ಕೆ ಪ್ರಸಾರ ಆಗಲಿರುವುದು ವಿಶೇಷ.
ಇನ್ನು ''ಕರುಪ್ಪು'' ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲಿಯೂ ಕೂಡ ಬಿಡುಗಡೆಯಾಗಿತ್ತು. ಹೀಗಾಗಿ ತೆಲುಗು ಚಿತ್ರಪ್ರೇಮಿಗಳು ಈ ''ವೀರಭದ್ರುಡು''ವನ್ನು ನೋಡಬಹುದು. ತಮಿಳು ಮತ್ತು ಹಿಂದಿಗೂ ಕೂಡ ''ಕರುಪ್ಪು'' ಡಬ್ ಆಗಿದ್ದು ಕನ್ನಡದಲ್ಲಿ ಕೂಡ ''ಕರುಪ್ಪು'' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಹೀಗಾಗಿ ನೀವು ಸೂರ್ಯ ಅಭಿಮಾನಿಯಾಗಿದ್ದರೆ ಈ ಚಿತ್ರವನ್ನು ನಿಮ್ಮ ನೆಚ್ಚಿನ ಭಾಷೆಯಲ್ಲಿ ಈ ಜೂನ್ 12ರಂದು ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ.


Click it and Unblock the Notifications