ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ 'ಕಂಗುವ' ಓಟಿಟಿಯಲ್ಲಾದರೂ ಗೆಲ್ಲುತ್ತಾ ..?
ಕಂಗುವ ಸೂರ್ಯ ವೃತ್ತಿ ಬದುಕಿನ ಕಪ್ಪುಚುಕ್ಕೆ. ಇದನ್ನು ಸೂರ್ಯ ಅವರ ಅಸಂಖ್ಯಾತ, ಅಗಣಿತ ಅಭಿಮಾನಿಗಳು ಕೂಡ ಒಪ್ಪುತ್ತಾರೆ. ಸೂರ್ಯ ಸ್ಟಾರ್ ಇಮೇಜ್‌ನ ಸಂಪೂರ್ಣ ಡ್ಯಾಮೇಜ್ ಮಾಡಿದ ಹೆಗ್ಗಳಿಕೆ ಈ ಚಿತ್ರದ್ದು.
ಹೌದು, ನಿಮಗೆ ಗೊತ್ತಿರಲಿ, ಸೂರ್ಯ ಅಭಿನಯದ 'ಕಂಗುವ' ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತೆ, ಭರ್ಜರಿ ಕಮಾಯಿ ಮಾಡುತ್ತೆ ಎಂದು ಎಲ್ಲರು ಅಂದುಕೊಂಡಿದ್ದರು. ಇದಕ್ಕೆ ಕಂಗುವ ಸೂರ್ಯ ಅಭಿನಯದ ಚಿತ್ರ ಎನ್ನುವುದು ಒಂದು ಕಾರಣವಾಗಿದ್ದರೆ ಚಿತ್ರದ ಕಥಾಹಂದರ ಮತ್ತೊಂದು ಕಾರಣವಾಗಿತ್ತು. ಇನ್ನೂ ಸೂರ್ಯಗೆ ಸವಾಲು ಹಾಕಲು ಬಾಬಿ ಡಿಯೋಲ್ ಇದ್ದರು. ಗ್ಲಾಮರ್‌ನಿಂದ ರಂಗು ಹೆಚ್ಚಿಸಲು ದಿಶಾ ಪಠಾಣಿ ಇದ್ದರು. ಹೀಗಾಗಿಯೇ ಭಂಡ ಧೈರ್ಯ ಮಾಡಿದ್ದ ನಿರ್ಮಾಪಕರು ಕಂಗುವ ಮೇಲೆ ಹಣದ ಹೊಳೆ ಹರಿಸಿದ್ದರು. ಲಾಭ ಗ್ಯಾರೆಂಟಿ ಎಂದುಕೊಂಡು ಮುನ್ನೂರೈವತ್ತು ಕೋಟಿ ಸುರಿದಿದ್ದರು.

ಆದರೆ, ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಕಂಗುವ ಬಾಕ್ಸಾಫೀಸ್‌ನಲ್ಲಿ ಕೊನೆಯುಸಿರೆಳೆದಿದೆ. ಮುನ್ನೂರೈವತ್ತು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾದ ಕಂಗುವ ಬಾಕ್ಸಾಫೀಸ್‌ನಲ್ಲಿ 110 ಕೋಟಿಯನ್ನು ಕೂಡ ಗಳಿಸಲಿಲ್ಲ. ಯಾರೇ ಆಗಿರಲಿ ಎಷ್ಟೇ ದೊಡ್ಡ ನಿರ್ಮಾಪಕರೇ ಆಗಿರಲಿ. ಈ ತರಹದ ಗಳಿಕೆಯನ್ನು ಕಂಡ ಯಾರಿಗೆ ಆದರೂ ನೆಲ ಕುಸಿದ ಅನುಭವ ಆಗುತ್ತೆ. ಯಾಕೆಂದರೆ ಸೂರ್ಯ ಸಾಮಾನ್ಯ ಸ್ಟಾರ್ ಅಲ್ಲ. ಎಲ್ಲರು ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತಿರುಗುತ್ತಿರುವಾಗ ಸೂರ್ಯ ಆ ಕಾಲದಲ್ಲಿಯೇ ಭಾರತದೆಲ್ಲೆಡೆ ಮಿಂಚಿದವರು. ಹೆಸರು ಮಾಡಿದವರು.
ಆದರೂ ಕೂಡ ಎಲ್ಲರಂತೆ ಪ್ಯಾನ್ ಇಂಡಿಯಾ ಮೆರವಣಿಗೆಯಲ್ಲಿ ಭಾಗಿಯಾಗುವ ಹುಚ್ಚು, ಅಧಿಕೃತವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕೆಂಬ ತವಕ ಸೂರ್ಯ ಅವರನ್ನು ಕಂಗುವ ಮಾಡುವಂತೆ ಪ್ರೇರೆಪಿಸಿತ್ತು. ಆದರೆ ದುರಾದೃಷ್ಟ. ಈ ಬಾರಿ ಸೂರ್ಯನಿಗೆ ಗ್ರಹಣ ಹಿಡಿದಿತ್ತು. ಕಂಗುವಾ ತೆರೆಗೆ ಬಂದ ಮೊದಲ ದಿನದಂದೆ ಮಕಾಡೆ ಮಲಗಿತ್ತು. ನಿರ್ಮಾಪಕರನ್ನು ನಷ್ಟದ ಕೂಪಕ್ಕೆ ತಳ್ಳಿತ್ತು.
ಇನ್ನು ಕಂಗುವ ಚಿತ್ರಕ್ಕೆ ಮೊದಲ ದಿನದಿಂದ ವ್ಯಕ್ತವಾದ ಅಭಿಪ್ರಾಯ ಚಿತ್ರಮಂದಿರದಿಂದ ಅನೇಕರನ್ನು ದೂರ ಇರಿಸಿತ್ತು. ಚಿತ್ರ ನೋಡುವ ಮನಸು ಮಾಡಿದವರು ಕೂಡ ಹಾಗೂ ಹೀಗೂ ಚಿತ್ರ ಓಟಿಟಿಯಲ್ಲಿ ಬರುತ್ತೆ ಆಗ ನೋಡಿದರಾಯ್ತು ಎಂದುಕೊಂಡು ಸುಮ್ಮನಾದರು. ಹೀಗೆ ಕಾಯುತ್ತಿದ್ದ ಅನೇಕರಿಗೆ ಈಗ ಚಿತ್ರತಂಡ ಸಿಹಿಸುದ್ದಿಯನ್ನು ನೀಡಿದೆ. ಸೂರ್ಯ ಅಭಿನಯದ ಕಂಗುವ ಇಂದು ರಾತ್ರಿಯಿಂದಲೇ ಓಟಿಟಿಯಲ್ಲಿ ಪ್ರಸಾರವಾಗಲಿದೆ.
ಹೌದು, ಅಮೆಜಾನ್ ಫ್ರೈಮ್‌ನಲ್ಲಿ ಕಂಗುವ ಚಿತ್ರ ಡಿಸೆಂಬರ್ 08ರಿಂದ ಸ್ಟ್ರೀಮ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಭಾಷೆಯಲ್ಲಿ ನೀವು ಈ ಚಿತ್ರವನ್ನು ಅಮೆಜಾನ್ ಫ್ರೈಮ್‌ನಲ್ಲಿ ನಿಮ್ಮ ಮನೆಮಂದಿಯ ಜೊತೆ ಕುಳಿತು ನೋಡಬಹುದು. ಹಿಂದಿಯಲ್ಲಿ ನೋಡಲು ಬಯಸುವ ಪ್ರೇಕ್ಷಕರಿಗೆ ನಿರಾಸೆಯಾಗಬಹುದು. ಯಾಕೆಂದರೆ ಡಿಸೆಂಬರ್ 08ರಿಂದ ಕೇವಲ ನಾಲ್ಕು ಭಾಷೆಯಲ್ಲಿ ಮಾತ್ರ ಅಮೆಜಾನ್ ಫ್ರೈಮ್‌ನಲ್ಲಿ ಕಂಗುವ ತನ್ನ ಪ್ರದರ್ಶನ ಆರಂಭ ಮಾಡಲಿದೆ. ಇನ್ನು ಹಿಂದಿಯಲ್ಲಿ ಈ ಚಿತ್ರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ ಎನ್ನುವ ಮಾತು ಇದೆ. ಮುಂಬರುವ ವರ್ಷ ಅಂದರೆ 2025ರ ಜನವರಿಯಲ್ಲಿ ಕಂಗುವ ಚಿತ್ರದ ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿ ಇದೆ.
ಇನ್ನುಳಿದಂತೆ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ ಕಂಗುವ ಚಿತ್ರಕ್ಕೆ ಓಟಿಟಿಯಲ್ಲಿ ಅಭೂತಪೂರ್ವ ಸ್ವಾಗತ ಸಿಗುತ್ತೆ ಎನ್ನುವ ನಂಬಿಕೆ ಸೂರ್ಯ ಅಭಿಮಾನಿಗಳಿಗಷ್ಟೇ ಅಲ್ಲ ಕಂಗುವ ಚಿತ್ರತಂಡಕ್ಕೂ ಇದೆ. ಓಟಿಟಿಯಲ್ಲಿ ಕಂಗುವ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಕಾಲಿವುಡ್ ಚಿತ್ರಪಂಡಿತರಿಗೆ ಇದೆ. ನಿಜಕ್ಕೂ ಓಟಿಟಿಯ ಮೂಲಕ ಕಂಗುವ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಾ ಎನ್ನುವುದಕ್ಕೆ ಉತ್ತರ ಸದ್ಯದಲ್ಲಿ ಸಿಗಲಿದೆ.


Click it and Unblock the Notifications











