ವೀಕೆಂಡ್ ಈ ಹಿಟ್ ಸಿನಿಮಾ ಹಾಗೂ ಹಿಟ್ ವೆಬ್ ಸೀರಿಸ್ ಸೀಕ್ವೆಲ್ ಕನ್ನಡದಲ್ಲೇ ನೋಡಿ
ಮತ್ತೊಂದು ವೀಕೆಂಡ್ ಬಂದಿದೆ. ಚಿತ್ರಮಂದಿರಗಳಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದರೂ ದೊಡ್ಡದಾಗಿ ಯಾವುದು ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆಗುತ್ತಿದೆ.
ಕನ್ನಡದ ಯಾವುದೇ ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿಲ್ಲ. ಆದರೆ ಪರಭಾಷೆಯ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಕನ್ನಡಕ್ಕೆ ಡಬ್ ಆಗಿ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಹಾಗೂ ತಮಿಳಿನ ವೆಬ್ ಸೀರಿಸ್ 'ಸುಳಲ್' ಸೀಸನ್-2 ರಿಲೀಸ್ ಆಗುತ್ತಿದೆ.

'ಸಂಕ್ರಾಂತಿಕಿ ವಸ್ತುನ್ನಾಂ'
ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆಯಾಗಿ ಸಕ್ಸಸ್ ಕಂಡ ತೆಲುಗು ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ'. ಜನವರಿ 14ರಂದು ತೆರೆಗೆ ಬಂದಿದ್ದ ಕಾಮಿಡಿ ಎಂಟರ್‌ಟೈನರ್ ಅಂದಾಜು 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ವಿಕ್ಟರಿ ವೆಂಕಟೇಶ್, ಮೀನಾಕ್ಷಿ ಚೌಧರಿ ಹಾಗೂ ಐಶ್ವರ್ಯ ರಾಜೇಶ್ ನಟನೆಯ ಸಿನಿಮಾ ಪ್ರೇಕ್ಷಕರು ಹೊಟ್ಟೆ ಹುಣ್ಣಾವುವಂತೆ ನಗಿಸಿತ್ತು.
ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರವನ್ನು ಶಿರೀಶ್ ನಿರ್ಮಾಣ ಮಾಡಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ನೋಡ ನೋಡುತ್ತಲೇ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲಾಜಿಕ್ ಇಲ್ಲದೇ ಬರೀ ತಮಾಷೆಗಾಗಿ ಮಾಡಿದ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ದೇಶವಿದೇಶಗಳಲ್ಲಿ ಸದ್ದು ಮಾಡಿದ್ದ ಸಿನಿಮಾ ಮಾರ್ಚ್ 1ರಂದು ಸಂಜೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅದೇ ಸಮಯಕ್ಕೆ ಜೀ5 ಓಟಿಟಿಗೆ ಬರ್ತಿದೆ.
ಚಿತ್ರದ ಕಥೆ ಏನು ಎಂದು ನೋಡುವುದಾದರೆ ಪೊಲೀಸ್ ಇಲಾಖೆಯಲ್ಲಿ ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುವ ಯಾದಗಿರಿ ರಾಜು (ವೆಂಕಟೇಶ್) ತನ್ನ ಪ್ರಾಮಾಣಿಕತೆ ಕಾರಣಕ್ಕೆ ಕೆಲಸ ಕಳೆದುಕೊಳ್ಳುತ್ತಾನೆ. ಬಳಿಕ ಭಾಗ್ಯ (ಐಶ್ವರ್ಯ ರಾಜೇಶ್)ಳನ್ನು ಮದುವೆಯಾಗಿ ಅವಳ ಕುಟುಂಬದೊಂದಿಗೆ ನೆಲೆಸುತ್ತಾನೆ. ಇತ್ತ ಅಮೇರಿಕಾದ ಬರುವ ಒಬ್ಬ ಉದ್ಯಮಿಯನ್ನು ಗ್ಯಾಂಗ್‌ಸ್ಟರ್ ಅಪಹರಿಸುತ್ತಾನೆ. ಆತನನ್ನು ಕರೆತರುವ ಮಿಷನ್‌ಗೆ ರಾಜು ಎಂಟ್ರಿ ಕೊಟ್ಟಿದ್ಹೇಗೆ? ಆತನ ಮಾಜಿ ಪ್ರೇಯಸಿ, ಪೊಲೀಸ್ ಅಧಿಕಾರಿ ಮೀನಾಕ್ಷಿ (ಮೀನಾಕ್ಷಿ ಚೌಧರಿ) ಹಾಗೂ ಭಾಗ್ಯ ನಡುವೆ ಜಡೆ ಜಗಳಕ್ಕೆ ಕಾರಣವೇನು? ಎನ್ನುವುದಕ್ಕೆ ಸಿನಿಮಾ ನೋಡಬೇಕು.

'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ಜೀ5ನಲ್ಲಿ ವೀಕ್ಷಣೆಗೆ ಸಿಗಲಿದೆ. ಈ ಕನ್ನಡ 'ಮ್ಯಾಕ್ಸ್' ಚಿತ್ರವನ್ನು ಓಟಿಟಿ ಹಾಗೂ ಟಿವಿಯಲ್ಲಿ ಒಮ್ಮೆಲೆ ಪ್ರೀಮಿಯರ್ ಮಾಡಲಾಗಿತ್ತು. ಈ ಚಿತ್ರದ ವಿಚಾರದಲ್ಲಿ ಕೂಡ ಅದೇ ಲೆಕ್ಕಾಚಾರ ನಡೀತಿದೆ.
'ಸುಳಲ್' ಸೀಸನ್-2
ಮೂರು ವರ್ಷಗಳ ಹಿಂದೆ ಬಂದಿದ್ದ ತಮಿಳಿನ 'ಸುಳಲ್' ವೆಬ್ ಸೀರಿಸ್ ಹಿಟ್ ಆಗಿತ್ತು. ಬ್ರಹ್ಮ ಜಿ ಹಾಗೂ ಅನುಚರಣ್ ಮುರುಗೈಯನ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಸೀರಿಸ್ ಸಖತ್ ಕಿಕ್ ಕೊಟ್ಟಿತ್ತು. ಸದ್ಯ ಆ ಕಥೆಯನ್ನು ಮುಂದುವರೆಸಲಾಗ್ತಿದೆ. ಕಥಿರ್ ಹಾಗೂ ಐಶ್ವರ್ಯ ರಾಜೇಶ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಮೊದಲ ಸೀಸನ್ 8 ಎಪಿಸೋಡ್‌ಗಳಾಗಿ ಪ್ರೈಂ ವೀಡಿಯೋದಲ್ಲಿ ಬಂದಿತ್ತು.
ಇದೀಗ 2ನೇ ಸೀಸನ್ ಕೂಡ 8 ಎಪಿಸೋಡ್‌ಗಳಾಗಿ ಸ್ಟ್ರೀಮಿಂಗ್ ಆರಂಭಿಸಿದೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಇಷ್ಟಪಡುವವರಿಗೆ ಹೇಳಿಮಾಡಿಸಿದ ವೆಬ್ ಸೀರಿಸ್ ಇದು. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ 'ಡಬ್ಬಾ ಕಾರ್ಟೆಲ್' ಎನ್ನುವ ಹಿಂದಿ ವೆಬ್ ಸೀರಿಸ್ ಸಹ ರಿಲೀಸ್ ಆಗ್ತಿದೆ.


Click it and Unblock the Notifications











