ಅಬ್ಬಾ.. ಕೊನೆಗೂ 'ಟಗರುಪಲ್ಯ' ಓಟಿಟಿ ರೈಟ್ಸ್ ಮಾರಾಟ: ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಕನ್ನಡ ಸಿನಿಮಾಗಳನ್ನು ಓಟಿಟಿ ಮಂದಿ ಕೊಂಡುಕೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಲೇ ಇದೆ. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಡಿಸ್ನಿ ಪ್ಲಸ್ ಹಾಟ್‌ಸ್ಟರ್ ರೀತಿಯ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ.
ಓಟಿಟಿಗೆ ಕನ್ನಡ ಕಂಟೆಂಟ್ ಕಮ್ಮಿ ಆಗಿದೆ. ಸ್ಟಾರ್ ನಟರ ಸಿನಿಮಾಗಳನ್ನು ಬಿಟ್ಟರೆ ಉಳಿದ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಮುಂದೆ ಬರ್ತಿಲ್ಲ. ಡಾಲಿ ಧನಂಜಯ್ ನಿರ್ಮಿಸಿದ್ದ 'ಟಗರುಪಲ್ಯ' ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ಸು ಕಂಡಿತ್ತು. ಆದರೆ ಸಿನಿಮಾ ಓಟಿಟಿಗೆ ಬರಲೇಯಿಲ್ಲ.

ಸಾಕಷ್ಟು ಜನ ಸಿನಿರಸಿಕರು ಈಗಾಗಲೇ ಥಿಯೇಟರ್‌ನಲ್ಲಿ ನೋಡಿದವರು, ನೋಡದವರು ಓಟಿಟಿಯಲ್ಲಿ ಸಿನಿಮಾ ನೀಡಲು ಬಯಸಿದ್ದರು. ಆದರೆ ಓಟಿಟಿ ಸಂಸ್ಥೆಗಳು ನಮ್ಮ ಸಿನಿಮಾ ಕೊಂಡುಕೊಳ್ಳಲು ಮುಂದೆ ಬಂದಿಲ್ಲ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ವತಃ ಧನಂಜಯ್ ಹೇಳಿಕೊಂಡಿದ್ದರು.
"3 ಲಕ್ಷಕ್ಕೂ ಹೆಚ್ಚು ಜನ ಹೊಸಬರ 'ಟಗರುಪಲ್ಯ' ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಬಜೆಟ್‌ಗೆ ಹೋಲಿಸಿದರೆ ಸಿನಿಮಾ ಹಿಟ್ ಆಗಿದೆ. ಒಳ್ಳೆ ಕಲೆಕ್ಷನ್ ಆಗಿದೆ. ಆದರೆ ನಮ್ಮ ಸಿನಿಮಾ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಡಿಜಿಟಲ್ ರೈಟ್ಸ್ ಮಾತ್ರ ಇನ್ನು ಕೊಂಡುಕೊಂಡಿಲ್ಲ" ಎಂದು ಕರ್ನಾಟಕ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಧನಂಜಯ್ ಹೇಳಿದ್ದರು.
"ಡಿಜಿಟಲ್, ಸ್ಯಾಟಲೈಟ್‌ನವರು ಯಾವ ಸಿನಿಮಾಗಳು ನಮಗೆ ವರ್ಕ್‌ಔಟ್ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಬೇರೆ ಭಾಷೆ ಸಿನಿಮಾ ಕೊಂಡುಕೊಳ್ಳುತ್ತಾರೆ. ನಮ್ಮ ಸಿನಿಮಾ ಯಾಕೆ ಕೊಂಡುಕೊಳ್ಳಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಮಾತನಾಡಿದ್ದರೆ ಸಾಲದು. ಓಟಿಟಿಯಲ್ಲಿ ಕನ್ನಡ ಕಂಟೆಂಟ್ ನೋಡುವುದು ಜಾಸ್ತಿಯಾಗಬೇಕು" ಎಂದಿದ್ದರು.
ಅಂತೂ ಇಂತೂ 'ಟಗರುಪಲ್ಯ' ಚಿತ್ರದ ಅಮೇಜಾನ್ ಪ್ರೈಂಗೆ ಮಾರಾಟವಾಗಿದೆ. ಡಿಸೆಂಬರ್ 8ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಹಳ್ಳಿಸೊಗಡಿನ 'ಟಗರುಪಲ್ಯ' ಚಿತ್ರದಲ್ಲಿ ನಾಗಭೂಷಣ್ ಹಾಗೂ ಅಮೃತಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ತಾರಾ ಪೋಷಕ ಪಾತ್ರಗಳಲ್ಲಿ ಸಾಥ್ ಕೊಟ್ಟಿದ್ದಾರೆ.
ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ 'ಟಗರುಪಲ್ಯ' ಸಿನಿಮಾ ಮೂಡಿ ಬಂದಿದೆ. ವಾಸುಕಿ ವೈಭವ್ ಸಂಗೀತ, ಎಸ್. ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಸೆವೆನ್ ಸ್ಟಾರ್ ಸುಲ್ತಾನ ಹೆಸರಿನ ಟಗರುವೊಂದು ಕಾಣಿಸಿಕೊಂಡಿದೆ.
ಧನಂಜಯ್ ಆಪ್ತ ಸ್ನೇಹಿತ ನಾಗಭೂಷಣ್ 'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. 'ಟಗರುಪಲ್ಯ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಾಗಭೂಷಣ್‌ಗೆ ನಾಯಕಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸಾಥ್ ಕೊಟ್ಟಿದ್ದಾರೆ.
ಒಂದೇ ದಿನದಲ್ಲಿ ನಡೆಯುವ ಕತೆ 'ಟಗರುಪಲ್ಯ' ಚಿತ್ರದಲ್ಲಿದೆ. ಕುಟುಂಬವೊಂದು ಊರ ದೇವರ ಹರಕೆ ತೀರಿಸಲು ಹೋದಾಗ ಅಲ್ಲಿ ನಡೆಯುವ ಘಟನೆಗಳನ್ನೇ ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗಿದೆ. ಕಾಮಿಡಿ ಜೊತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಿ ನಿರ್ದೇಶಕ ಉಮೇಶ್ ಕೆ ಕೃಪ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು.
ದೇವನೂರು ಮಹಾದೇವ ಅವರ 'ಸಂಬಂಜ ಅನ್ನೋದು ದೊಡ್ದು ಕನಾ' ಎನ್ನುವ ಮಾತನ್ನು 'ಟಗರುಪಲ್ಯ' ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಸಣ್ಣ ಎಳೆಯನ್ನಿಟ್ಟುಕೊಂಡು 2 ಗಂಟೆ ಸಿನಿಮಾ ಮಾಡುವುದು ಕಷ್ಟ. ಆದರೆ ಆ ಪ್ರಯತ್ನದಲ್ಲಿ ಉಮೇಶ್ ಕೆ ಕೃಪ ಬಹುತೇಕ ಸಕ್ಸಸ್ ಕಂಡಿದ್ದರು. ಸಿನಿಮಾ ನೋಡಿದ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದರು.
ಅಕ್ಟೋಬರ್ 27ಕ್ಕೆ 'ಟಗರುಪಲ್ಯ' ಸಿನಿಮಾ ರಿಲೀಸ್ ಆಗಿತ್ತು. 3 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದಾರೆ ಎಂದು ಸ್ವತಃ ನಿರ್ಮಾಪಕರಾದ ಧನಂಜಯ ಮಾಹಿತಿ ನೀಡಿದ್ದಾರೆ.


Click it and Unblock the Notifications











