ರಾಜಮೌಳಿ ಮೆಚ್ಚಿದ್ದ ತಮಿಳು ಸಿನಿಮಾ ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ಕೆಲ ಸಿನಿಮಾಗಳು ಸೈಲೆಂಟ್ ಆಗಿ ಬಂದು ಹಿಟ್ ಆಗಿಬಿಡುತ್ತವೆ. ಯಾವುದೇ ಅಬ್ಬರ ಆರ್ಭಟ ಇಲ್ಲದೇ ಬಂದು ಪ್ರೇಕ್ಷಕರ ಮನಗೆಲ್ಲುತ್ತವೆ. ಮಾಸ್, ಕ್ಲಾಸ್ ಎಲ್ಲಾ ಮೀರಿ ಫೀಲ್ ಗುಡ್ ಸಿನಿಮಾ ಆಗಿ ರಂಜಿಸುತ್ತವೆ. ಇತ್ತೀಚೆಗೆ ಬಂದ ತಮಿಳು ಸಿನಿಮಾವೊಂದು ಇದೇ ರೀತಿ ಸದ್ದು ಮಾಡಿತ್ತು. ನಿರ್ದೇಶಕ ರಾಜಮೌಳಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ದೊಡ್ಡ ಬಜೆಟ್, ಸ್ಟಾರ್ ಕಾಸ್ಟ್ ಇಲ್ಲದೇ ಬಂದು ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಅಂದಾಜು 10 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬರೋಬ್ಬರಿ 50 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಸಾಕಷ್ಟು ಜನ ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಬಯಸಿದ್ದರು. ಅಂತಹವರಿಗೆ ಸಿಹಿಸುದ್ದಿ ಸಿಕ್ಕಿದೆ. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಬಹಿರಂಗವಾಗಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ಶಶಿಕುಮಾರ್ ಹಾಗೂ ಸಿಮ್ರನ್ ನಟನೆಯ 'ಟೂರಿಸ್ಟ್ ಫ್ಯಾಮಿಲಿ'. ಈ ಕಾಮಿಡಿ ಡ್ರಾಮಾ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬಂದಿತ್ತು. ಈಗಾಗಲೇ 25 ದಿನ ಪೂರೈಸಿ ಸಿನಿಮಾ ಸದ್ದು ಮಾಡ್ತಿದೆ. ಇದೀಗ ಅಧಿಕೃತವಾಗಿ ಸಿನಿಮಾ ಓಟಿಟಿ ರಿಲೀಸ್ ಅಪ್‌ಡೇಟ್ ಸಿಕ್ಕಿದೆ. ಅಭಿಷನ್ ಜೀವಿತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಯೋಗಿ ಬಾಬು, ಎಂ. ಎಸ್ ಭಾಸ್ಕರ್, ರಮೇಶ್ ತಿಲಕ್, ಭಗವತಿ ಪೆರುಮಾಳ್, ಎಲಂಗೋ ಕುಮಾರವೇಲ್, ಶ್ರೀಜ ರವಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಚಿತ್ರ ಯುಕೆ ಸೂಪರ್ ಸ್ಕ್ರೀನ್‌ನಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಲ್ಲಿ ಪ್ರದರ್ಶನ ಕಂಡು ಕಡಿಮೆ ಬಜೆಟ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಬಹಳ ಸಿಂಪಲ್ ಕಥೆಯನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಸೂರ್ಯ ನಟನೆಯ 'ರೆಟ್ರೋ' ಸಿನಿಮಾ ಆರ್ಭಟದ ನಡುವೆಯೂ ಈ ಫ್ಯಾಮಿಲಿ ಡ್ರಾಮಾ ಗೆದ್ದಿತ್ತು. ಜಿಯೋ ಹಾಟ್‌ಸ್ಟರ್‌ನಲ್ಲಿ ಜೂನ್ 2ರಂದು(ಸೋಮವಾರ) ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಮನೆಯಲ್ಲೇ ಕೂತು ಈ ಫ್ಯಾಮಿಲಿ ಡ್ರಾಮಾ ನೋಡಿ ನೀವು ಎಂಜಾಯ್ ಮಾಡಬಹುದು.
ಅಷ್ಟಕ್ಕೂ 'ಟೂರಿಸ್ಟ್ ಫ್ಯಾಮಿಲಿ' ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ಶ್ರೀಲಂಕಾದಲ್ಲಿ ನೆಲೆಸಿರುವ ಧರ್ಮದಾಸ್ ಹಾಗೂ ಪತ್ನಿ ವಸಂತಿ ಕುಟುಂಬ ಚೆನ್ನೈಗೆ ಬರುತ್ತದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ದಾಸ್ ಫೇಕ್ ಡಾಕ್ಯುಮೆಂಟ್ಸ್ ಮಾಡಿಸಿಕೊಂಡು ಕುಟುಂಬ ಸಮೇತ ರಾಮೇಶ್ವರಂ ಮೂಲಕ ಭಾರತದ ಗಡಿ ಪ್ರವೇಶಿಸುತ್ತಾನೆ. ಚೆನ್ನೈನ ಒಂದು ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ನೆಲೆಸುತ್ತದೆ.
ತಮ್ಮ ಮುಗ್ಧತೆಯಿಂದ ಬಹಳ ಬೇಗ ಕಾಲೋನಿ ಜನರ ಜೊತೆ ದಾಸ್ ಕುಟುಂಬ ಬೆರತುಬಿಡುತ್ತದೆ. ಮುಂದೆ ಏನೆಲ್ಲಾ ನಡೆಯುತ್ತದೆ. ಆ ಕುಟುಂಬವನ್ನು ಹುಡುಕಿ ಪೊಲೀಸರು ಬರುವುದು ಯಾಕೆ? ಮುಂದೆ ಕಾಲೋನಿ ಜನರಿಗೆ ದಾಸ್ ಮಾಡುವ ಮಾನವೀಯತೆ ಪಾಠ ಎಂಥದ್ದು ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ನಿರ್ದೇಶಕ ರಾಜಮೌಳಿ ಮಾತ್ರವಲ್ಲ, ತೆಲುಗು ನಟ ನಾನಿ ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು.


Click it and Unblock the Notifications











