ಅಮೇಜಾನ್ ಪ್ರೈಮ್‌ಗೆ ಬಂತು 3 ಕನ್ನಡ ಚಿತ್ರಗಳು: ಆ ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ
ದಸರಾ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಕನ್ನಡದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಖತ್ ಸದ್ದು ಮಾಡ್ತಿದೆ. 'ಲಿಯೋ', 'ಭಗವಂತ್ ಕೇಸರಿ' ಹಾಗೂ 'ಟೈಗರ್ ನಾಗೇಶ್ವರ ರಾವ್' ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಥಿಯೇಟರ್‌ನಲ್ಲಿ ತೆರೆಕಂಡ ಸಿನಿಮಾಗಳ ಕತೆ ಇದಾದರೆ ಓಟಿಟಿಯಲ್ಲೂ ಒಂದಷ್ಟು ಸಿನಿಮಾಗಳು ಈ ವಾರ ಬಂದಿವೆ. ಸಾಮಾನ್ಯವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ ಕಂಟೆಂಟ್ ಕಮ್ಮಿ. ಆದರೆ ಈ ವಾರ ಒಂದಲ್ಲ ಎರಡಲ್ಲ 3 ಕನ್ನಡ ಸಿನಿಮಾಗಳು ಅಮೇಜಾನ್ ಪ್ರೈಮ್‌ಗೆ ದಾಂಗುಡಿ ಇಟ್ಟಿವೆ. ಅದರಲ್ಲೂ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ 'ತತ್ಸಮ ತದ್ಭವ' ಸಿನಿಮಾ ಇದೀಗ ಸ್ಟ್ರೀಮಿಂಗ್ ಆಗುತ್ತಿದೆ.

ಮೇಘನಾ ರಾಜ್ ರೀಎಂಟ್ರಿ ಸಿನಿಮಾ ಎನ್ನುವ ಕಾರಣಕ್ಕೆ 'ತತ್ಸಮ ತದ್ಭವ' ನಿರೀಕ್ಷೆ ಹುಟ್ಟಾಕ್ಕಿತ್ತು. ಥಿಯೇಟರ್‌ಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡದೇ ಇದ್ದರೂ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕೆಲವರು ಓಟಿಟಿಯಲ್ಲಿ ಸಿನಿಮಾ ಮಜಾ ಕೊಡುತ್ತದೆ ಎಂದಿದ್ದರು. ಕೊನೆಗೂ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಿದೆ. 'ತತ್ಸಮ ತದ್ಭವ' ಜೊತೆಗೆ ವಿಜಯ್ ರಾಘವೇಂದ್ರ ನಟನೆಯ 'ಕದ್ದ ಚಿತ್ರ' ಹಾಗೂ 'ನಮ್ ನಾಣಿ ಮದುವೆ ಪ್ರಸಂಗ' ಸಿನಿಮಾಗಳು ಪ್ರೈ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ವಿಶಾಲ್ ಆತ್ರೇಯಾ ನಿರ್ದೇಶನದ 'ತತ್ಸಮ ತದ್ಭವ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅರವಿಂದ್ ಅಯ್ಯರ್, ಬಾಲಾಜಿ ಮನೋಹನ್, ಶ್ರುತಿ, ಗಿರಿಜಾ ಲೋಕೇಶ್, ರಾಜಶ್ರೀ ಪೊನ್ನಪ್ಪ ತಾರಾಗಣದಲ್ಲಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದೆ.

ನನ್ನ ಪತಿ ಕಾಣೆಯಾಗಿದ್ದಾನೆ ಎಂದು ಆರಿಕಾ (ಮೇಘನಾ), ಪೊಲೀಸ್ ಅಧಿಕಾರಿ ಅರವಿಂದ್ ಬಳಿ ದೂರು ಕೊಡುವ ಸನ್ನಿವೇಶದೊಂದಿಗೆ 'ತತ್ಸಮ ತದ್ಭವ' ಕತೆ ಶುರುವಾಗುತ್ತದೆ. ಪ್ರಕರಣ ಭೇದಿಸಲು ಮುಂದಾಗುವ ಅರವಿಂದ್‌ಗೆ ಸಾಕಷ್ಟು ಸವಾಲುಗಳು, ತಿರುವುಗಳು ಎದುರಾಗುತ್ತದೆ. ಅದನ್ನೆಲ್ಲಾ ಮೆಟ್ಟಿ ಆತ ಹೇಗೆ ಪ್ರಕರಣ ಭೇದಿಸುತ್ತಾನೆ ಅನ್ನೋದು ಇನ್ನುಳಿದ ಕತೆ. ಚಿತ್ರದಲ್ಲಿ ಮೇಘನಾ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾತ್ರವಲ್ಲ ಸೈಕಾಲಾಜಿಕಲ್ ಥ್ರಿಲ್ಲರ್ ಕೂಡ. ಕುತೂಹಲಭರಿತವಾಗಿ ಸಾಗುವ ಕತೆ ಪ್ರೇಕ್ಷಕರಿಗೆ ಒಳ್ಳೆ ಅನುಭವ ನೀಡುತ್ತದೆ.
ಪ್ರಸಿದ್ಧ ಬರಹಗಾರನ ಮೇಲೆ ಕೃತಿ ಚೌರ್ಯದ ಆರೋಪ ಎದುರಾದರೆ ಏನೆಲ್ಲಾ ಆಗುತ್ತದೆ ಅನ್ನೋದನ್ನು 'ಕದ್ದ ಚಿತ್ರ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ವಿಜಯ್ ರಾಘವೇಂದ್ರ ಜೊತೆಗೆ ಚಿತ್ರದಲ್ಲಿ ನಮೃತಾ ಸುರೇಂದ್ರನಾಥ್, ರಾಘು ಶಿವಮೊಗ್ಗ, ಬೇಬಿ ಆರಾಧ್ಯ ನಟಿಸಿದ್ದಾರೆ. ಸುಹಾಸ್ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಹೇಮಂತ್ ಹೆಗ್ಡೆ ನಿರ್ದೇಶಿಸಿ ನಟಿಸಿರುವ 'ನಮ್ ನಾಣಿ ಮದುವೆ ಪ್ರಸಂಗ' ಕೂಡ ಅಮೇಜಾನ್ ಪ್ರೈ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಶೃತಿ ನಂದೀಶ್, ರಾಜೇಶ್ ನಟರಂಗ, ಪದ್ಮಜಾ ರಾವ್ ಸೇರಿದಂತೆ ದೊಡ್ಡ ತಾರಾಗಣವಿದೆ. ಹಳ್ಳಿಯ ರೈತರು ಮದುವೆ ಆಗಲು ಹೆಣ್ಣು ಸಿಗುತ್ತಿಲ್ಲ ಎನ್ನುವ ಅಂಶವನ್ನಿಟ್ಟುಕೊಂಡು ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಉತ್ತರ ಕನ್ನಡ ಹಿನ್ನೆಲೆಯಲ್ಲಿ ಈ ಸಿನಿಮಾ ಕತೆ ಸಾಗುತ್ತದೆ.


Click it and Unblock the Notifications











