Mirai OTT; ಸೂಪರ್ ಹಿಟ್ 'ಮಿರಾಯ್' ಸಿನಿಮಾ ಓಟಿಟಿಗೆ; ಕನ್ನಡದಲ್ಲೇ ನೋಡಿ
ತಿಂಗಳಿಗೂ ಮುನ್ನ ತೆಲುಗಿನ 'ಮಿರಾಯ್' ಸಿನಿಮಾ ಓಟಿಟಿಗೆ ಬರ್ತಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ ಕಳೆದ ತಿಂಗಳು ತೆರೆಗೆ ಬಂದಿತ್ತು. ತೇಜಾ ಸಜ್ಜಾ ಹಾಗೂ ಮಂಚು ಮನೋಜ್ ನಟನೆಯ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.
'ಹನುಮಾನ್' ಚಿತ್ರದಲ್ಲಿ ನಟಿಸಿ ತೇಜಾ ಸಜ್ಜಾ ಗೆದ್ದಿದ್ದರು. ಅದೇ ರೀತಿ ಫ್ಯಾಂಟಿ ಅಂಶಗಳನ್ನು ಸೇರಿಸಿ 'ಮಿರಾಯ್' ಸಿನಿಮಾ ಮಾಡಲಾಗಿದೆ. ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮ 160 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿತ್ತು. ರಿತಾಕಾ ನಾಯಕ್, ಶ್ರಿಯಾ ಶರಣ್, ಜಗಪತಿ ಬಾಬು, ಜಯರಾಂ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಗೌರ ಹರೀ ಛಾಯಾಗ್ರಹಣ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ಸೆಪ್ಟೆಂಬರ್ 12ರಂದು 5 ಭಾಷೆಗಳಲ್ಲಿ 'ಮಿರಾಯ್' ಸಿನಿಮಾ ತೆರೆಗೆ ಬಂದಿತ್ತು. ಅಕ್ಟೋಬರ್ 10ಕ್ಕೆ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಇಷ್ಟು ಬೇಗ ಓಟಿಟಿಗೆ ಬರ್ತಿದ್ಯಾ? ಎಂದು ಕೆಲವರು ಬೇಸರ ಹೊರ ಹಾಕುತ್ತಿದ್ದಾರೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕೂಡ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿತ್ತು. ಹೀಗೆ ಮುಂದುವರೆದರೆ ಜನ ಚಿತ್ರಮಂದಿರಕ್ಕೆ ಯಾಕೆ ಬರ್ತಾರೆ ಎನ್ನುವ ಪ್ರಶ್ನೆ ಕೆಲವರದ್ದು.
ಮಿರಾಯ್ ಕಥೆ
ಕಳಿಂಗ ಯುದ್ಧದ ಕಾಲದಲ್ಲಿ 'ಮಿರಾಯ್' ಸಿನಿಮಾ ಕಥೆ ಶುರುವಾಗುತ್ತದೆ. ಆ ಘೋರ ಯುದ್ಧದ ಬಳಿಕ ಸಾಮ್ರಾಟ್ ಅಶೋಕ ಪಶ್ಚಾತ್ತಾಪ ಪಡುತ್ತಾನೆ. ತನ್ನ ದೈವಶಕ್ತಿಯೇ ಇದಕ್ಕೆಲ್ಲಾ ಕಾರಣ ಎಂದು ಅದನ್ನು ಒಟ್ಟು 9 ಗ್ರಂಥಗಳಲ್ಲಿ ಸಂಕ್ಷೇಪಿಸಿ 9 ರಕ್ಷಕರಿಗೆ ನೀಡುತ್ತಾನೆ. ಕ್ರೂರ ಮಹಾವೀರ (ಮಂಚು ಮನೋಜ್) ಆ ಗ್ರಂಥವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಒಂಬತ್ತನೇ ಗ್ರಂಥವು ಅಂಬಿಕಾ (ಶ್ರಿಯಾ ಶರಣ್) ರ ರಕ್ಷಣೆಯಲ್ಲಿರುತ್ತದೆ.
ಅಂಬಿಕಾಳ ಮಗ ವೇದ (ತೇಜಾ ಸಜ್ಜ) ರಾಮನ ಕಾಲದ ಮಿರಾಯ್ ಸಹಾಯದಿಂದ ಹೇಗೆ ಆ ಗ್ರಂಥಧ ರಕ್ಷಣೆ ಮಾಡುತ್ತಾನೆ. ಅದಕ್ಕಾಗಿ ಅವನು ನಡೆಸಿದ ಹೋರಾಟ ಎಂಥದ್ದು? ಮಹಾವೀರನ ಹಿನ್ನೆಲೆ ಏನು? ಮುಂದೆ ಏನೆಲ್ಲಾ ನಡೆಯುತ್ತದೆ ಎನ್ನುವುದು ಇನ್ನುಳಿದ ಕಥೆ.
ಗ್ರಾಫಿಕ್ಸ್ ಬಳಸಿ ಬಹಳ ಅದ್ಭುತವಾಗಿ 'ಮಿರಾಯ್' ಚಿತ್ರದ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಪ್ರಭಾಸ್ ನಿರೂಪಣೆಯಲ್ಲಿ ಚಿತ್ರದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ರಾಣಾ ದಗ್ಗುಬಾಟಿ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿ ಒಟ್ಟು 5 ಹಾಡುಗಳು ಇವೆ.
ನಟ ತೇಜ ಸಜ್ಜ ಬೆಂಗಳೂರಿಗೆ ಬಂದು 'ಮಿರಾಯ್' ಸಿನಿಮಾ ಪ್ರಚಾರ ಮಾಡಿದ್ದರು. ತೆಲುಗು ಮಾತ್ರವಲ್ಲದೇ ಹಿಂದಿಯಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ತೆಲುಗು, ತಮಿಳು, ಮಲಯಾಳಂ, ಕನ್ನಡ ವರ್ಷನ್ ಮಾತ್ರ ಓಟಿಟಿಗೆ ಬರಲಿದೆ. ಹಿಂದಿ ವರ್ಷನ್ ಸ್ಟ್ರೀಮಿಂಗ್ ಮತ್ತಷ್ಟು ತಡವಾಗಲಿದೆ.
'ಮಿರಾಯ್' ಸಿನಿಮಾ ಸೀಕ್ವೆಲ್ ಕೂಡ ಬರುವುದು ಖಚಿತವಾಗಿದೆ. ರಾಣಾ ದಗ್ಗುಬಾಟಿ ಆ ಚಿತ್ರದಲ್ಲಿ ಮೇನ್ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನಲಾಗ್ತಿದೆ. ಸೀಕ್ವೆಲ್ ನೋಡಲು ಸಿನಿರಸಿಕರು ಉತ್ಸುಕರಾಗಿದ್ದಾರೆ.


Click it and Unblock the Notifications











