ನಿಮ್ಮ ಕ್ರಶ್ ಯಾರು ಅಂದರೆ ಕನ್ನಡತಿ ಹೆಸರು ಹೇಳಿದ ಬಾಲಯ್ಯ!
ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ತಮ್ಮ ವಿಭಿನ್ನ ಬಾಡಿ ಲಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿಯಿಂದಲೇ ಫೇಮಸ್. ಕಳೆದ ವರ್ಷವಷ್ಟೇ 'ಅಖಂಡ' ಸಿನಿಮಾ ಮೂಲಕ ನಟಸಿಂಹ ಬಾಲಕೃಷ್ಣ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಸದ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಮ್ಮ ಸದ್ಯದ ಕ್ರಶ್ ಯಾರು ಎನ್ನುವುದನ್ನು ಬಾಲಯ್ಯ ರಿವೀಲ್ ಮಾಡಿದ್ದಾರೆ.
ಹೀರೊ ಆಗಿ ಮಾತ್ರವಲ್ಲದೇ ಹಿಂದೂಪುರದ ಶಾಸಕರಾಗಿಯೂ ಬಾಲಯ್ಯ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಆಹಾ ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ 'ಅನ್‌ಸ್ಟಾಪೆಬಲ್' ಎನ್ನುವ ಚಾಟ್ ಶೋ ನಡೆಸಿಕೊಡುತ್ತಾರೆ. ಸದ್ಯ ಅದರ 2ನೇ ಸೀಸನ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕಳೆದ ಎಪಿಸೋಡ್‌ನಲ್ಲಿ ತಮ್ಮ ಬಾವ, ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ಲೋಕೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವಾರದ ಎಪಿಸೋಡ್‌ನಲ್ಲಿ ಯುವ ನಟರಾದ ವಿಶ್ವಕ್ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿದ್ದು ಬಾಲಯ್ಯ ತಮ್ಮದೇ ಸ್ಟೈಲ್‌ನಲ್ಲಿ ಮಸ್ತ್ ಎಂಟರ್‌ಟೈನ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ವಿಶ್ವಕ್ ಹಾಗೂ ಸಿದ್ದು "ನಿಮ್ಮ ಪ್ರಸೆಂಟ್ ಕ್ರಶ್ ಯಾರು ಸರ್?" ಎಂದು ಬಾಲಕೃಷ್ಣ ಅವರನ್ನು ಕೇಳಿದ್ದಾರೆ. ಕೂಡಲೇ ಬಾಲಯ್ಯ, ರಶ್ಮಿಕಾ ಮಂದಣ್ಣ ಹೆಸರು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರೋ ರಶ್ಮಿಕಾ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುವುದೇ ಬೇಕಾಗಿಲ್ಲ. ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್ ಹಾಗೂ ಕಾಲಿವುಡ್‌ಗೆ ಹೋಗಿ ಸಕ್ಸಸ್ ಕಂಡ ಕೊಡಗಿನ ಚೆಲುವೆ ಈಗ ಬಾಲಿವುಡ್‌ನಲ್ಲಿ ಮಿಂಚು ಹರಿಸಿದ್ದಾರೆ. ರಶ್ಮಿಕಾ ನಟನೆಯ ಚೊಚ್ಚಲ ಬಾಲಿವುಡ್ ಸಿನಿಮಾ 'ಗುಡ್‌ಬೈ' ಕಳೆದ ವಾರ ರಿಲೀಸ್ ಆಗಿತ್ತು. ಆದರೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.

'ಗುಡ್‌ಬೈ' ಸಿನಿಮಾ ಸೋತರೂ ಮೊದಲ ಪ್ರಯತ್ನದಲ್ಲೇ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದು ರಶ್ಮಿಕಾ ಅದೃಷ್ಟವೇ ಸರಿ. ಇನ್ನು 'ಮಿಷನ್ ಮಜ್ನು' ಹಾಗೂ 'ಅನಿಮಲ್' ಎನ್ನುವ ಮತ್ತೆರಡು ಹಿಂದಿ ಸಿನಿಮಾಗಳಲ್ಲಿ ಸಾನ್ವಿ ನಟಿಸುತ್ತಿದ್ದಾರೆ. 'ಅನಿಮಲ್' ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ವಿಶೇಷ. ಮತ್ತೊಂದಷ್ಟು ಬಾಲಿವುಡ್ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆ ನಡೀತಿದೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ- 2', ತಮಿಳಿನ ಇಳಯ ದಳಪತಿ ಜೋಡಿಯಾಗಿ 'ವಾರಿಸು' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಬಿಕಿನಿ ಫೋಟೊಶೂಟ್‌ನಿಂದ ಕೊಡಗಿನ ಚೆಲುವೆ ಸುದ್ದಿಯಾಗಿದ್ದರು.
'ಪುಷ್ಪ' ಸಿನಿಮಾ ರಿಲೀಸ್ ಸಮಯದಲ್ಲಿ ರಶ್ಮಿಕಾ ಮಂದಣ್ಣ ಕೂಡ 'ಅನ್‌ಸ್ಟಾಪೆಬಲ್' ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಆಗ ಕನ್ನಡದಲ್ಲೇ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಾಸಬದ್ಧವಾಗಿ ಸಾಲು ಕಟ್ಟಿ ಹಾಡಿ ಹೊಗಳಿ ಬಾಲಯ್ಯ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದರು. ಬಾಲಕೃಷ್ಣ ಕನ್ನಡ ಮಾತನಾಡಿದ್ದು ನೋಡಿ ರಶ್ಮಿಕಾ ಕೂಡ ಅವರನ್ನು ನೋಡಿ ಕಲಿಬೇಕು ಎಂದು ಕೆಲವರು ಹೇಳಿದ್ದರು. 'ಸಾಮಿ ಸಾಮಿ' ಎಂದು ಕೊಡಗಿನ ಬೆಡಗಿ ಜೊತೆ ಬಾಲಯ್ಯ ಕುಣಿದಿದ್ದರು. ರಶ್ಮಿಕಾನ ಕ್ರಶ್‌ಮಿಕಾ ಎಂದು ಎಂದು ಕರೆದಿದ್ದರು. ಶೀಘ್ರದಲ್ಲೇ ಬಾಲಕೃಷ್ಣ ಜೋಡಿಯಾಗಿ ಕಿರಿಕ್ ಬೆಡಗಿಗೆ ಅವಕಾಶ ಸಿಕ್ಕರೂ ಸಿಗಬಹುದು.

ಬಾಲಕೃಷ್ಣ ನಟನೆಯ ಸಿನಿಮಾಗಳ ಬಗ್ಗೆ ಹೇಳುವುದಾದರೆ #NBK107 ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ದರ್ಶನಕೊಟ್ಟಿದ್ದಾರೆ. 'ಮಫ್ತಿ' ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದ ಗೆಟಪ್‌ನಲ್ಲಿ ಬಾಲಯ್ಯ ಮಿಂಚಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾ ಟೀಸರ್ ಸೂಪರ್ ಹಿಟ್ ಆಗಿದೆ. ಅಕ್ಟೋಬರ್ 21ಕ್ಕೆ ಈ ಚಿತ್ರದ ಟೈಟಲ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.


Click it and Unblock the Notifications











