ತೆಲುಗಿನಲ್ಲೂ ಪ್ರಾರಂಭ ಬಿಗ್‌ಬಾಸ್ ಒಟಿಟಿ: ಯಾವಾಗ? ಎಲ್ಲಿ ವೀಕ್ಷಿಸಬಹುದು?
ಬಿಗ್‌ಬಾಸ್ ರಿಯಾಲಿಟಿ ಶೋ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಸೆಳೆದಿದೆ. ಮೊದಲಿಗೆ ಹಿಂದಿಯಲ್ಲಿ ಪ್ರಾರಂಭವಾದ ಈ ರಿಯಾಲಿಟಿ ಶೋ ಇದೀಗ ಭಾರತದ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ ಮತ್ತು ದಾಖಲೆಯ ಟಿಆರ್‌ಪಿ ಗಳಿಸುತ್ತಿದೆ.
Recommended Video
ಟಿವಿಯಲ್ಲಿ ದೊಡ್ಡ ಮಟ್ಟದ ಹಿಟ್ ಆದ ಇದೇ ರಿಯಾಲಿಟಿ ಶೋ ಅನ್ನು ಹೊಸ ಮನರಂಜನಾ ಮಾಧ್ಯಮ ಎನಿಸಿಕೊಂಡಿರುವ ಒಟಿಟಿಗೂ ತರಲಾಗಿದ್ದು, ಹಿಂದಿಯಲ್ಲಿ ಮೊದಲ ಬಿಗ್‌ಬಾಸ್ ಒಟಿಟಿ ಪ್ರಸಾರವಾಗಿ ಹಿಟ್ ಆಗಿದೆ.
ಹಿಂದಿಯ ಬಿಗ್‌ಬಾಸ್ ಒಟಿಟಿ ಹಿಟ್ ಆದ ಬೆನ್ನಲ್ಲೆ ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಬಿಗ್‌ಬಾಸ್ ಒಟಿಟಿ ಪ್ರಾರಂಭವಾಗುತ್ತಿದೆ. ಇದೀಗ ತೆಲುಗಿನಲ್ಲಿ ಬಿಗ್‌ಬಾಸ್ ಒಟಿಟಿ ಆರಂಭವಾಗುತ್ತಿದೆ. ಕೆಲವೇ ದಿನಗಳಲ್ಲಿ ಶೋ ಆರಂಭವಾಗುತ್ತಿದೆ.

ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ಸ್ಟಾರ್ ಮಾ ನಲ್ಲಿ ಪ್ರಸಾರವಾಗುತ್ತಿತ್ತು. ಈವರೆಗೆ ನಾಲ್ಕು ಸೀಸನ್ ಮುಗಿದಿದ್ದು ಐದನೇ ಸೀಸನ್ ಕೆಲ ತಿಂಗಳಲ್ಲಿ ಪ್ರಾರಂಭವಾಗಲಿದೆ. ಇದರ ನಡುವೆ ಬಿಗ್‌ಬಾಸ್ ಒಟಿಟಿ ತೆಲುಗು ಆರಂಭವಾಗುತ್ತಿದ್ದು, ಈಗಾಗಲೇ ಘೋಷಣೆ ಸಹ ಆಗಿದೆ.
ಬಿಗ್‌ಬಾಸ್ ಒಟಿಟಿ ತೆಲುಗು ಕಾರ್ಯಕ್ರಮವು ಡಿಸ್ನಿ ಹಾಟ್‌ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗಲಿದೆ. ಶೋ ಅನ್ನು ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ. ಈ ಹಿಂದೆ ಹಿಂದಿ ಬಿಗ್‌ಬಾಸ್ ಒಟಿಟಿ ಮಾಡಿದಾಗ ಅದನ್ನು ಸಲ್ಮಾನ್ ಖಾನ್ ಬದಲಿಗೆ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ ತೆಲುಗಿನಲ್ಲಿ ಟಿವಿ ರಿಯಾಲಿಟಿ ಶೋ, ಒಟಿಟಿ ರಿಯಾಲಿಟಿ ಶೋ ಎರಡನ್ನೂ ನಾಗಾರ್ಜುನ ಅವರೇ ನಿರೂಪಣೆ ಮಾಡುತ್ತಿರುವುದು ವಿಶೇಷ.
ಬಿಗ್‌ಬಾಸ್ ಒಟಿಟಿ ತೆಲುಗು ಸಹ 24 ಗಂಟೆಗಳ ಸ್ಟ್ರೀಮಿಂಗ್ ಹೊಂದಿರಲಿದೆ. ದಿನದ 24 ಗಂಟೆ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳು ಏನು ಮಾಡುತ್ತಾರೆ ಎಂಬುದು ಲೈವ್ ಸ್ಟ್ರೀಮ್ ಆಗಿ ಪ್ರೇಕ್ಷಕರಿಗೆ ತಲುಪಲಿದೆ. ವಾರಾಂತ್ಯದಲ್ಲಿ ಮಾತ್ರ ನಾಗಾರ್ಜುನ ಬಂದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಲಿಮಿನೇಶನ್ ಇನ್ನಿತರೆ ಕಾರ್ಯಗಳನ್ನು ನಡೆಸಿಕೊಡಲಿದ್ದಾರೆ.
ಬಿಗ್‌ಬಾಸ್ ಒಟಿಟಿ ತೆಲುಗು ರಿಯಾಲಿಟಿ ಶೋನ ವಿಶೇಷತೆಯೆಂದರೆ ಹಾಟ್‌ಸ್ಟಾರ್ ಒಟಿಟಿಯ ಚಂದಾದಾರಾಗದಿದ್ದರೂ ಎಪಿಸೋಡ್‌ಗಳನ್ನು ನೋಡಬಹುದಾಗಿದೆ. ಆದರೆ ಚಂದಾದಾರಾಗದಿದ್ದರೆ ಒಂದು ದಿನ ತಡವಾಗಿ ಎಪಿಸೋಡ್‌ಗಳನ್ನು ನೋಡಬೇಕಾಗುತ್ತದೆ. ಚಂದಾದಾರಾಗಿರುವವರು ಲೈವ್‌ನಲ್ಲಿ ನೋಡಬಹುದಾಗಿರುತ್ತದೆ. ಹಾಗೂ ಚಂದಾದಾರಾಗಿರುವವರು ಹಾಗೂ ಆಗಿಲ್ಲವದವರು ಇಬ್ಬರೂ ಸ್ಪರ್ಧಿಗಳಿಗೆ ಒಟಿಟಿ ಮೂಲಕವೇ ಮತ ಚಲಾಯಿಸಬಹುದಾಗಿದೆ.
ತೆಲುಗು ಬಿಗ್‌ಬಾಸ್‌ನ ಆರಂಭದ ಎರಡು ಸೀಸನ್ ಅಷ್ಟೇನೂ ಹಿಟ್ ಆಗಲಿಲ್ಲ. ಆದರೆ ಮೂರು ಮತ್ತು ನಾಲ್ಕನೇ ಸೀಸನ್ ದೊಡ್ಡ ಮಟ್ಟದ ಟಿಆರ್‌ಪಿ ಗಳಿಸಿತು. ಹಾಗಾಗಿ ನಾಗಾರ್ಜುನ ಅವರೇ ಬಿಗ್‌ಬಾಸ್ ಒಟಿಟಿ ಮಾಡಲು ಉತ್ಸಾಹ ತೋರಿದ್ದಾರೆ ಎನ್ನಲಾಗುತ್ತಿದೆ. ಬಿಗ್‌ಬಾಸ್ ಒಟಿಟಿ ತೆಲುಗು ಫೆಬ್ರವರಿ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ.


Click it and Unblock the Notifications











