Thangalaan OTT: ಚಿಯಾನ್ ವಿಕ್ರಂ 'ತಂಗಲಾನ್' ಓಟಿಟಿ ಸ್ಟ್ರೀಮಿಂಗ್ ಡೇಟ್
ದೊಡ್ಡ ಸಿನಿಮಾಗಳನ್ನು ಕೆಲವರು ಓಟಿಟಿಯಲ್ಲಿ ನೋಡಲು ಕಾಯುತ್ತಿರುತ್ತಾರೆ. ಇನ್ನು ಪರಭಾಷೆಯಲ್ಲಿ ಗೆದ್ದ ಸಿನಿಮಾಗಳನ್ನು ನಮ್ಮದೇ ಭಾಷೆಯಲ್ಲಿ ಓಟಿಟಿಯಲ್ಲಿ ನೋಡಬೇಕು ಎಂದು ಕಾದು ಕೂರುವವರಿಗೆ ಲೆಕ್ಕವಿಲ್ಲ. ಆಗಸ್ಟ್ 15ಕ್ಕೆ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ತಂಗಲಾನ್' ಓಟಿಟಿ ರಿಲೀಸ್ ಯಾವಾಗ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ.
ಪಾ. ರಂಜಿತ್ ನಿರ್ದೇಶನದ 'ತಂಗಲಾನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಕರ್ನಾಟಕದ ಕೆಜಿಎಫ್ ಚಿನ್ನದ ಗಣಿಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗಿತ್ತು. ಚಿನ್ನದ ಗಣಿ ಹುಡುಕಲು, ಚಿನ್ನ ಅಗೆದು ತೆಗೆಯಲು ಬ್ರಿಟೀಷರು ನಡೆಸಿದ ಪ್ರಯತ್ನ, ಅದಕ್ಕಾಗಿ ಬುಡಕಟ್ಟು ಜನರನ್ನು ಬಳಸಿಕೊಂಡಿದ್ದರು ಎನ್ನುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

ಕೆ. ಇ ಜ್ಞಾನವೇಲ್ ರಾಜಾ ನಿರ್ಮಾಣದ 'ತಂಗಲಾನ್' ಚಿತ್ರದಲ್ಲಿ ಪಾರ್ತತಿ ಮೆನನ್, ಮಾಳವಿಕಾ ಮೋಹನನ್ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಎರಡ್ಮೂರು ಪಾತ್ರಗಳನ್ನು ವಿಕ್ರಂ ನಿಭಾಯಿಸಿದ್ದಾರೆ. 1850ರ ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ. ವೆಪ್ಪುರ್ ಎನ್ನುವ ಹಳ್ಳಿಯಲ್ಲಿ ಶುರುವಾಗುವ ಕಥೆ ಕೊನೆಗೆ ಕೋಲಾರದ ಚಿನ್ನದ ಗಣಿಗೆ ಬಂದು ನಿಲ್ಲುತ್ತದೆ. ಲೀಡ್ ರೋಲ್‌ನಲ್ಲಿ ವಿಕ್ರಂ ಗೆಟಪ್ ಹಾಗೂ ಅಭಿನಯ ಹುಬ್ಬೇರಿಸುವಂತಿದೆ.
ಕೆಜಿಎಫ್ ಗಣಿಯ ಸುತ್ತಾ ಇದ್ದ ಬುಡಕಟ್ಟು ಸಮುದಾಯದವರು ಚಿನ್ನ ಹುಡುಕುವುದು, ಬ್ರಿಟೀಷರು ವಿರುದ್ಧ ಅವರ ಹೋರಾಟ, ನಮ್ಮವರೇ ಕೆಲವರು ಬ್ರಿಟೀಷರ ಪರ ನಿಂತು ಜರನ್ನು ಶೋಷಿಸುವ ಕಥೆ ಚಿತ್ರದಲ್ಲಿದೆ. ಚಿನ್ನ ಹುಡುಕುವ ಕಥೆಗೆ ಈ ದೇಶದ ಶೋಷಿತರು, ಅಸ್ಪೃಶ್ಯರ ವಿಚಾರಗಳನ್ನು ಸೇರಿಸಿ ಪಾ. ರಂಜಿತ್ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ.

ಭಾರೀ ಕುತೂಹಲ ಮೂಡಿಸಿದ್ದ 'ತಂಗಲಾನ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು ಸುಳ್ಳಲ್ಲ. ಆದರೂ ವಿಕ್ರಂ ಅಭಿಮಾನಿಗಳಿಗೆ ಮೆಚ್ಚಿಕೊಂಡಿದ್ದರು. ಬೇರೆ ಬೇರೆ ಕೋನಗಳಲ್ಲಿ ನೋಡಿದ ಕೆಲವರಿಗೆ ಸಿನಿಮಾ ಬಹಳ ಇಷ್ಟವಾದರೆ ಬಹುತೇಕರಿಗೆ ಬೋರ್ ಹೊಡೆಸಿತ್ತು. ಆದರೆ ಭಾರೀ ಚರ್ಚೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಅದೇ ಕಾರಣಕ್ಕೆ ಸಾಕಷ್ಟು ಜನ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುವಂತಾಗಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.
ಮ್ಯಾಜಿಕಲ್ ರಿಯಲಿಸಂ ತಂತ್ರ ಅಳವಡಿಸಿ ಪಾ. ರಂಜಿತ್ ಕಥೆ ಹೇಳಿದ್ದಾರೆ. ಇದೇ ಕೆಲವರಿಗೆ ಗೊಂದಲ ಮೂಡಿಸಿತ್ತು. ಇನ್ನು ಸೆಕೆಂಡ್ ಹಾಫ್‌ನಲ್ಲಿ ಪುನರಾವರ್ತನೆ ಆಗುವ ಸನ್ನಿವೇಶಗಳು ನೋಡುಗರ ತಾಳ್ಮೆ ಪರೀಕ್ಷಿಸಿತ್ತು. ತಮಿಳುನಾಡಿನಲ್ಲಿ ಕೂಡ ಚಿತ್ರಕ್ಕೆ ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್ ಸಿಗಲಿಲ್ಲ.
'ತಂಗಲಾನ್' ಚಿತ್ರದ ಕಥೆ ಸಿಂಪಲ್. ವೆಪ್ಪುರ್ ಗ್ರಾಮದ ಒಂದು ಬುಡಕಟ್ಟಿನ ನಾಯಕ ತಂಗಲಾನ್. ಪತ್ನಿ ಗಂಗಮ್ಮ. ದಂಪತಿಗೆ 5 ಜನ ಮಕ್ಕಳು. ಇದ್ದ ತುಂಡು ನೆಲದಲ್ಲಿ ವ್ಯವಸಾಯ ಮಾಡಿಕೊಂಡು ದಂಪತಿ ಇರುತ್ತಾರೆ. ಆ ಜಾಗವನ್ನು ಜಮೀನ್ದಾರ ಕಿತ್ತುಕೊಳ್ಳುತ್ತಾನೆ. ಅದೇ ಸಮಯದಲ್ಲಿ ಬ್ರಿಟೀಷ್ ಅಧಿಕಾರಿ ಕ್ಲೆಮೆಂಟ್ ಕೋಲಾರದ ಚಿನ್ನದ ಆಸೆಯಿಂದ ಬರುತ್ತಾನೆ. ಅಲ್ಲಿ ಚಿನ್ನ ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಈ ಬುಡಕಟ್ಟು ಜನರನ್ನು ಬಳಸಿಕೊಳ್ಳುತ್ತಾನೆ.
ಕಾಡಿನಲ್ಲಿ ಚಿನ್ನದ ಗಣಿಯನ್ನು ನಾಗ ಸಂಕುಲ ಕಾಯುತ್ತಿರುತ್ತದೆ. ಅತೇಂದ್ರಿಯ ಶಕ್ತಿಗಳಿರುವ ಆರತಿ 'ತಂಗಲಾನ್' ಚಿನ್ನ ತೆಗೆಯಲು ಬರುವುದಕ್ಕೆ ಪ್ರತಿರೋಧ ಒಡ್ಡುತ್ತಿರುತ್ತಾಳೆ. ಹಾಗಾದರೆ ಬ್ರಿಟೀಷರಿಗಾಗಿ 'ತಂಗಲಾನ್' ತನ್ನವರ ಜೊತೆ ಸೇರಿ ಚಿನ್ನ ಹುಡುಕಿ ಕೊಡ್ತಾನಾ? ಈ ಹಾದಿಯಲ್ಲಿ ಏನೆಲ್ಲಾ ನಡೆಯುತ್ತದೆ? ಏನೆಲ್ಲಾ ಕಳೆದುಕೊಳ್ಳುತ್ತಾನೆ ಎನ್ನುವುದು ಇನ್ನುಳಿದ ಕಥೆ.
'ತಂಗಲಾನ್' ಸಿನಿಮಾ ತೆರೆಕಂಡು ತಿಂಗಳಾಗುತ್ತಾ ಬಂತು. ಸೆಪ್ಟೆಂಬರ್ 20ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗ್ತಿದೆ. ಮೊದಲಿಗೆ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರಲಿದೆ. ಬಳಿಕ ಹಿಂದಿ ವರ್ಷನ್ ವೀಕ್ಷಣೆಗೆ ಸಿಗುತ್ತದೆ. ಆದರೆ ಓಟಿಟಿ ಸ್ಟ್ರೀಮಿಂಗ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
Disclaimer;
ಸೆಪ್ಟೆಂಬರ್ 20ಕ್ಕೆ ತಂಗಲಾನ್ ಓಟಿಟಿಗೆ ಬರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಆದರೆ ನೆಟ್‌ಫ್ಲಿಕ್ಸ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications











