The Devil OTT: ಕೊನೆಗೂ ಓಟಿಟಿಗೆ 'ಡೆವಿಲ್'; ದರ್ಶನ್ ಅಭಿಮಾನಿಗಳು ಖುಷ್
ನಟ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ತೆರೆಕಂಡು 8 ತಿಂಗಳು ಕಳೆದಿದೆ. ಆದರೆ ಸಿನಿಮಾ ಮಾತ್ರ ಓಟಿಟಿಗೆ ಬಂದಿರಲಿಲ್ಲ. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುವಾಗ ಈ ಸಿನಿಮಾ ಯಾಕೆ ಬರ್ತಿಲ್ಲ ಎಂದು ಪ್ರೇಕ್ಷಕರು ಕಾಯುತ್ತಿದ್ದರು. ಅಂತಿಮವಾಗಿ ಆ ಸಮಯ ಬಂದುಬಿಟ್ಟಿದೆ.
ಅಮೇಜಾನ್ ಪ್ರೈಂ ವೀಡಿಯೋಗೆ 'ಡೆವಿಲ್' ಸಿನಿಮಾ ರೈಟ್ಸ್ ಸೇಲಾಗಿದೆ ಎಂದು ಗುಲ್ಲಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ಜೀ ಸಂಸ್ಥೆ ಓಟಿಟಿ ಹಾಗೂ ಟಿವಿ ರೈಟ್ಸ್ ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ ಯಾವಾಗ ಸ್ಟ್ರೀಮಿಂಗ್ ಎನ್ನುವ ಸಸ್ಪೆನ್ಸ್ ಮುಂದುವರೆದಿತ್ತು. ಅಂತಿಮವಾಗಿ ಸಿನಿಮಾ ಜುಲೈ 17ಕ್ಕೆ ಜೀ5ನಲ್ಲಿ ರಿಲೀಸ್ ಆಗುವುದು ಖಚಿತವಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಸಾಕಷ್ಟು ಅಡೆತಡೆ ಎದುರಿಸಿ ಡಿಸೆಂಬರ್ 11ರಂಉ ತೆರೆಗೆ ಬಂದಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನು ಪಡೆದು ಹೊರ ಬಂದ ಬಳಿಕ ಚಿತ್ರದ ಚಿತ್ರೀಕರಣ ಮುಗಿಸಿದ್ದರು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರುವಂತಾಗಿತ್ತು. ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಫಸ್ಟ್ ವೀಕೆಂಡ್ ಒಳ್ಳೆ ಕಲೆಕ್ಷನ್ ಮಾಡಿತ್ತು. ಬಳಿಕ ಸದ್ದು ಮಾಡಿರಲಿಲ್ಲ.
ಓಟಿಟಿ ಸ್ಟ್ರೀಮಿಂಗ್ ತಡ
ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡೋಣ ಎಂದು ಸುಮ್ಮನಾಗಿದ್ದರು. ಒಂದು ತಿಂಗಳು ಎರಡು ತಿಂಗಳು ಕಳೆದರೂ ಸಿನಿಮಾ ಓಟಿಟಿಗೆ ಎಂಟ್ರಿ ಕೊಡಲಿಲ್ಲ. ಅಭಿಮಾನಿಗಳಂತೂ ಕಾದು ಕಾದು ಸುಮ್ಮನಾಗಿದ್ದರು. ಇಷ್ಟು ತಡವಾಗಿ ಓಟಿಟಿಗೆ ಬರಲು ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕೊನೆಗೂ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಿದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ದರ್ಶನ್ ಡಬಲ್ ರೋಲ್
'ಡೆವಿಲ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ಅಭಿಮಾನಿಗಳನ್ನು ರಂಜಿಸಿದ್ದರು. ಸಿಎಂ ಮಗ ಧನುಷ್ ಹಾಗೂ ವಿದೇಶದಲ್ಲಿರುವ ಡಾನ್ ಜೊತೆಗೆ ಸಾಮಾನ್ಯ ವ್ಯಕ್ತಿ ಕೃಷ್ಣ ಆಗಿ ದರ್ಶನ್ ಬಣ್ಣ ಹಚ್ಚಿದ್ದರು. 'ತಾರಕ್' ಬಳಿಕ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದ 2ನೇ ಸಿನಿಮಾ ಇದಾಗಿತ್ತು. ಸ್ವತಃ ಪ್ರಕಾಶ್ ಸಿನಿಮಾ ನಿರ್ಮಾಣ ಮಾಡಿದ್ದರು.
'ದಿ ಡೆವಿಲ್' ಬಾಕ್ಸಾಫೀಸ್
ಮೊದಲ ದಿನವೇ ಸಿನಿಮಾ 13.8 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಸಿಗಲಿಲ್ಲ. 40 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಒಟ್ಟಾರೆ 30ರಿಂದ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದರು. ಸಿನಿಮಾ ಬಜೆಟ್ 40 ಕೋಟಿ ರೂ. ದಾಟಿತ್ತು ಎನ್ನಲಾಗಿತ್ತು. ಆ ಲೆಕ್ಕದಲ್ಲಿ ನಿರ್ಮಾಪಕರಿಗೆ ಹೆಚ್ಚಿನ ಲಾಭ ಬರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಕನ್ನಡ ಬಿಟ್ಟರೆ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಲಿಲ್ಲ.
ಸಂಕಷ್ಟದಲ್ಲಿ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ 2ನೇ ಬಾರಿ ದರ್ಶನ್ ಜೈಲು ಸೇರಿ 11 ತಿಂಗಳಾಗುತ್ತಾ ಬಂತು. ದರ್ಶನ್ ಹುಟ್ಟುಹಬ್ಬಕ್ಕೆ 'ಡೆವಿಲ್' ಸಿನಿಮಾ ಓಟಿಟಿಗೆ ಬರುತ್ತದೆ. ಅಥವಾ ಅವರು ಜೈಲಿನಿಂದ ಬಿಡುಗಡೆಯಾಗುವ ಸಮಯದಲ್ಲಿ ಸ್ಟ್ರೀಮಿಂಗ್ ಮಾಡಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಆದರೆ ಯಾವುದು ನಿಜವಾಗಲಿಲ್ಲ. ಬರೋಬ್ಬರಿ 8 ತಿಂಗಳ ಬಳಿಕ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಸಿಗಲಿದೆ. ವರಲಕ್ಷ್ಮಿ ಹಬ್ಬ ಅಥವಾ ಗಣೇಶ ಹಬ್ಬದ ವೇಳೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರೀಮಿಯರ್ ಆಗುವ ನಿರೀಕ್ಷೆಯಿದೆ.


Click it and Unblock the Notifications