ಓಟಿಟಿಗೆ ಬಂತು ಪಾಕಿಸ್ತಾನದಿಂದ ಭಾರತಕ್ಕೆ ಮಹಿಳೆಯನ್ನು ಕರೆತಂದ ರೋಚಕ ಕತೆ..!
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.
ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಚಿತ್ರಮಂದಿರದಲ್ಲಿ ಚಿತ್ರ ಸೋತ ನಂತರ ಪ್ರೇಕ್ಷಕರನ್ನೇ ನೇರವಾಗಿ ಹೊಣೆಯಾಗಿಸುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಬಿಡುಗಡೆಯಾದ ಒಂದೂವರೆ ತಿಂಗಳಿಗೆ ಜಾನ್ ಅಬ್ರಾಹಂ ಅಭಿನಯದ ದಿ ಡಿಪ್ಲೊಮ್ಯಾಟ್ ಚಿತ್ರ ಓಟಿಟಿಗೆ ಬಂದಿದೆ. ಈ ಮೇ 09ರಿಂದ ಪ್ರಸಾರವಾಗಲಿದೆ.

ಹೌದು ದಿ ಡಿಪ್ಲೊಮ್ಯಾಟ್ ಕಳೆದ ಮಾರ್ಚ್ 14ರಂದು ತೆರೆಗೆ ಬಂದಿದ್ದ ಚಿತ್ರ. 2017ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸತ್ಯಘಟನೆಯನ್ನಾಧರಿಸಿದ ಈ ಚಿತ್ರದಲ್ಲಿ ಜಾನ್ ಅಬ್ರಾಹಂ ಭಾರತದ ಉಪ ಹೈ ಕಮಿಷನರ್ ಜೆಪಿ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಸಾದಿಯಾ ಖತೀಬ್ ಉಜ್ಮಾ ಅಹ್ಮದ್ ಪಾತ್ರವನ್ನು ನಿರ್ವಹಿಸಿದ್ದರು. ರಿತೇಶ್ ಶಾ ಬರೆದ ಕಥೆಯನ್ನು ಶಿವಂ ನಾಯರ್ ನಿರ್ದೇಶನ ಮಾಡಿದ್ದರು. ಇನ್ನು ಜಾನ್ ಅಬ್ರಾಹಂ ಈ ಚಿತ್ರಕ್ಕೆ ಕೇವಲ ತನು ಮನು ಮಾತ್ರ ಅರ್ಪಿಸಿರಲಿಲ್ಲ. ಬದಲಿಗೆ ಈ ಚಿತ್ರಕ್ಕೆ ಹಣವನ್ನು ಕೂಡ ಹೂಡಿದ್ದರು.
ಬಾಲಿವುಡ್ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಈ ಚಿತ್ರ ₹40.70 ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು. ಇನ್ನು ಚಿತ್ರದ ಬಿಡುಗಡೆಯ ಮೊದಲ ದಿನ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಕೂಡ ಜಾನ್ ಅಬ್ರಾಹಂ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ಮಾತುಗಳನ್ನಾಡಿದ್ದರು. ಪ್ರೇಕ್ಷಕರನ್ನು ಈ ಚಿತ್ರ ನಿಧಾನವಾಗಿ ಸೆಳೆಯುತ್ತೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದರು.
ಜಾನ್ ಅಬ್ರಾಹಂ ಅವರ ಈ ನಂಬಿಕೆ ಹುಸಿಯಾಗಲಿಲ್ಲ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಮೊದಲ ದಿನ ₹4.3 ಕೋಟಿಯನ್ನು ಗಳಿಸಿದ್ದ ಈ ಚಿತ್ರ ಮೊದಲ ವಾರದ ಅಂತ್ಯಕ್ಕೆ ₹19.45 ಕೋಟಿ ಹಣವನ್ನು ಗಳಿಸಿತ್ತು.
ಇನ್ನು ಪಾಕಿಸ್ತಾನದಲ್ಲಿ ಮೋಸದ ಬಲೆಗೆ ಸಿಲುಕಿ ನರಳುತ್ತಿದ್ದ ಉಜ್ಮಾ ಅಹ್ಮದ್ ಅವರನ್ನು ಭಾರತಕ್ಕೆ ಮರಳಿ ಕರೆತರುವ ಕಥಾಹಂದರವನ್ನು ಹೊಂದಿರುವ ದಿ ಡಿಪ್ಲೊಮ್ಯಾಟ್ ಚಿತ್ರವನ್ನು ಮಧ್ಯಪ್ರಾಚ್ಯದಲ್ಲಿ ಬ್ಯಾನ್ ಕೂಡ ಮಾಡಲಾಗಿತ್ತು. ಆಗ ಆಘಾತಕ್ಕೊಳಗಾಗಿದ್ದ ಜಾನ್ ಅಬ್ರಾಹಂ ನಮ್ಮ ಚಿತ್ರ ಪಾಕಿಸ್ತಾನ ವಿರೋಧಿ ಚಿತ್ರವಲ್ಲ ಎಂದು ಹೇಳಿದ್ದರು. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ ಪ್ರಾಮಾಣಿಕವಾಗಿದೆ ಎಂದು ನಾವು ತೋರಿಸಿದ್ದೇವೆ ಎಂದು ಕೂಡ ಹೇಳಿದ್ದರು.
ಇಂತಹ ಡಿಪ್ಲೊಮ್ಯಾಟ್ ಚಿತ್ರವನ್ನು ಚಿತ್ರಮಂದಿರದ ಬದಲು, ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಅನೇಕರು ಜಾನ್ ಅಬ್ರಾಹಂಗೆ ಸಲಹೆಯನ್ನು ನೀಡಿದ್ದರು. ವಿಪರ್ಯಾಸವೆಂದರೆ ಈ ಚಿತ್ರವನ್ನು ಖರೀದಿ ಮಾಡಲು ಆಗ ಯಾವ ಓಟಿಟಿ ಸಂಸ್ಥೆ ಕೂಡ ಮುಂದೆ ಬಂದಿರಲಿಲ್ಲ. ಜಾನ್ ಅಬ್ರಾಹಂ ಬೇಸರದಿಂದ ಈ ಮಾತುಗಳನ್ನು ಖುದ್ದು ಹೇಳಿದ್ದರು. ನಮ್ಮ ಚಿತ್ರದಲ್ಲಿ ಅವರಿಗೆ ವ್ಹಾ ಎಂದು ಅನಿಸುವ ಯಾವ ಅಂಶ ಕೂಡ ಕಂಡಿಲ್ಲ ಹೀಗಾಗಿ ಯಾರು ಚಿತ್ರ ಖರೀದಿಸಲು ಮುಂದೆ ಬರುತ್ತಿಲ್ಲ ಎಂದು ಹೇಳಿದ್ದರು.
ಆದರೆ ಈಗ ಚಿತ್ರ ಬಿಡುಗಡೆಯಾಗಿ ಒಂದೂವರೆ ತಿಂಗಳ ನಂತರ ದಿ ಡಿಪ್ಲೊಮ್ಯಾಟ್ ಚಿತ್ರದ ಹಕ್ಕುಗಳನ್ನು ನೆಟ್‌ಪ್ಲಿಕ್ಸ್ ಸಂಸ್ಥೆ ತನ್ನದಾಗಿಸಿಕೊಂಡಿದೆ. ಈ ಮೇ 9ರಿಂದ ಚಿತ್ರವನ್ನು ಪ್ರಸಾರ ಶುರು ಮಾಡಲಿದೆ. ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ದಿ ಡಿಪ್ಲೊಮ್ಯಾಟ್ ಚಿತ್ರ ಏಕಕಾಲಕ್ಕೆ ಮೇ 9ರಿಂದ ಸ್ಟ್ರೀಮ್ ಆಗಲಿದೆ. ಉಜ್ಮಾ ಅಹ್ಮದ್ ಅವರ ಈ ರೋಚಕ ಕಥೆಯನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಕುಳಿತು ಮೇ 9ರಿಂದ ಈ ಚಿತ್ರವನ್ನು ನೋಡಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











