ಯುಕೆ-ಏಷ್ಯನ್ ಸಿನಿಮೋತ್ಸವದಲ್ಲಿ 'ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ
ವಿಮರ್ಶಕರಿಂದ, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿರುವ 'ದಿ ಗ್ರೇಟ್ ಇಂಡಿಯನ್ ಕಿಚನ್' ಮಲಯಾಳಂ ಸಿನಿಮಾ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಅಡುಗೆ ಮನೆ, ಭಾರತೀಯ ಮಹಿಳೆಯ ಸ್ವಾತಂತ್ರ್ಯ ಇನ್ನಿತರ ಮಹಿಳಾಪರ ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ತೆರೆಗೆ ತರಲಾಗಿರುವ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ಯುಕೆ-ಏಷ್ಯನ್ ಅಂತರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗಿದೆ.
ಜೋ ಬೇಬಿ ನಿರ್ದೇಶಿಸಿರುವ ಈ ಸುಂದರ, ಸೂಕ್ಷ್ಮ ಮಲಯಾಳಂ ಸಿನಿಮಾ ಮೊದಲಿಗೆ ನೀಸ್ಟ್ರೀಮ್ ಎಂಬ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಇದೇ ಸಿನಿಮಾವನ್ನು ಅಮೆಜಾನ್ ಪ್ರೈಂ ಖರೀದಿಸಿ ಬಿಡುಗಡೆ ಮಾಡಿದೆ.

'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾವು ಈಗಾಗಲೇ ಶಾಂಘೈ ಅಂತರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಆಯ್ಕೆ ಆಗಿದೆ. ಈ ಸದಭಿರುಚಿಯ ಸುಂದರ ಸಿನಿಮಾ ಇನ್ನಷ್ಟು ಅಂತರಾಷ್ಟ್ರೀಯ ಸಿನಿಮೋತ್ಸವಗಳಿಗೆ ಆಯ್ಕೆ ಆಗಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ.
ನಿಮಿಷಾ ಸಜಯನ್, ಸೂರಜ್ ವೆಂಜರಮೂಡು ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಜೋ ಬೇಬಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಯ್ಯಪ್ಪ ವಿವಾದ ಸೇರಿದಂತೆ ಇನ್ನೂ ಕೆಲವು ಸೂಕ್ಷ್ಮ ವಿಚಾರಗಳಿವೆ ಎಂಬ ಕಾರಣಕ್ಕೆ ಅಮೆಜಾನ್ ಪ್ರೈಂ ಈ ಸಿನಿಮಾವನ್ನು ನಿರಾಕರಿಸಿತ್ತು. ಕೊನೆಗೆ ನೀಸ್ಟ್ರೀಮ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಯಿತು. ನಂತರ ಸಿನಿಮಾಕ್ಕೆ ಅಭೂತಪೂರ್ವ ಬೆಂಬಲ ದೊರೆತ ಮೇಲೆ ಅಮೆಜಾನ್ ಪ್ರೈಂನವರು ಸಿನಿಮಾವನ್ನು ಖರೀದಿಸಿ ತಮ್ಮ ವೇದಿಕೆಯಲ್ಲಿ ಪ್ರದರ್ಶಿಸಿದರು.


Click it and Unblock the Notifications











