ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ? ಬಣ್ಣದ ಲೋಕಕ್ಕೆ ಬಂದ ಹಿಟ್ ಮ್ಯಾನ್ - ವಿಡಿಯೋ ಮಿಸ್ ಮಾಡ್ಬೇಡಿ
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಈ ಎರಡು ಉದ್ಯಮಗಳ ನಡುವೆ ಹಲವು ಪ್ರೇಮ ಪ್ರಕರಣಕ್ಕೆ ಅಖಂಡ ಭಾರತ ಹಲವು ಬಾರಿ ಸಾಕ್ಷಿಯಾಗಿದೆ. ಯುವರಾಜ್ ಸಿಂಗ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ.. ಕೆ.ಎಲ್ ರಾಹುಲ್ ಅವರಿಂದ ಹಿಡಿದು ಜಹೀರ್ ಖಾನ್‌ವರೆಗೆ ಹಲವರು ಮದುವೆಯ ಬಂಧನಕ್ಕೊಳಗಾಗಿ ನೆಮ್ಮದಿಯ ಸಂಸಾರವನ್ನು ಕೂಡ ನಡೆಸುತ್ತಿದ್ದಾರೆ.

ಹಾಗಂಥ ಕ್ರಿಕೆಟ್ ಮತ್ತು ಚಿತ್ರರಂಗ ಕೇವಲ ಪ್ರೇಮದ ಅಮಲನ್ನೇರಿಸಿಕೊಂಡು ತೂರಾಡಿವೆ ಅಂತ ಅಲ್ಲ. ಇಲ್ಲಿ ಕೇವಲ ಲವ್-ಬ್ರೇಕಪ್ ಮತ್ತು ಮ್ಯಾರೇಜ್ ಸಂಬಂಧ ಇದೆ ಎಂದು ಕೂಡ ಅಲ್ಲ. ಯಾಕೆಂದರೆ ಹಲವು ಕ್ರಿಕೆಟಿಗರ ಜೀವನಾಧಾರಿತ ಚಿತ್ರಗಳನ್ನು ಚಿತ್ರರಂಗ ಜನರಿಗೆ ಉಡುಗೊರೆಯಾಗಿ ನೀಡಿದೆ. ನಿವೃತ್ತಿಯ ನಂತರ ಹಲವು ಕ್ರಿಕೆಟ್‌ರಗಳು ಚಿತ್ರರಂಗವನ್ನು ವೃತ್ತಿ ಬದುಕಿನ ಮತ್ತೊಂದು ಆಯ್ಕೆ ಎಂದು ಪರಿಗಣಿಸಿದ್ದು ಇದೆ.
ಉದಾಹರಣೆಗೆ ಅಜಯ್ ಜಡೇಜಾ.. ಹರ್ಭಜನ್ ಸಿಂಗ್.. ಇರ್ಫಾನ್ ಪಠಾಣ್.. ವಿನೋದ್ ಕಾಂಬ್ಳಿ.. ಶ್ರೀಶಾಂತ್ ಮುಂತಾದವರು. ಸದ್ಯ ಈ ಸಾಲಿಗೆ ರೋಹಿತ್ ಶರ್ಮಾ ಕೂಡ ಸೇರಿಕೊಂಡಿದ್ದಾರೆ ಎನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.
ಹೌದು 22 ಯಾರ್ಡ್‌ನ ಪಿಚ್‌ನಲ್ಲಿ ಬೌಲರ್ ಗಳನ್ನು ಚೆಂಡಾಡುವ ರೋಹಿತ್ ಶರ್ಮಾ ಇಲ್ಲಿಯವರೆಗೆ ಮಾಡಿದ ಸಾಧನೆ ಒಂದೆರಡಲ್ಲ. ಜನ ಸುಖಾ ಸುಮ್ಮನೆ ಇವರನ್ನು ''ಹಿಟ್ ಮ್ಯಾನ್'' ಎಂದು ಕರೆಯುವುದು ಇಲ್ಲ. ಟಿ-20 ವಿಶ್ವಕಪ್.. ಐಸಿಸಿ ಚಾಂಪಿಯನ್ಸ್ ಟ್ರೋಫಿ.. ಏಷ್ಯಾಕಪ್‌ನ ಭಾರತಕ್ಕೆ ತಂದ ರೋಹಿತ್ ಶರ್ಮಾ 2023ರ ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿಯೂ ಭಾರತವನ್ನು ಫೈನಲ್‌ವರೆಗೆ ಕರೆದೊಯ್ದಿದ್ದರು.
ಇನ್ನೂ ಬಿದ್ದು ಎದ್ದು ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು ಕೂಡ ಇವರ ನಾಯಕತ್ವದಲ್ಲೇ. ಇಂಥಾ ರೋಹಿತ್ ಶರ್ಮಾ ತಮ್ಮ 19 ವರ್ಷಗಳ ವೃತ್ತಿ ಬದುಕಿಗೆ ಗುಡ್ ಬೈ ಹೇಳಲು ಈಗ ನಿರ್ಧರಿಸಿದಂತೆ ಇದೆ. ಇದಕ್ಕೆ ಸಾಕ್ಷಿಯೇ ಬಿಡುಗಡೆಯಾಗಿ ಸದ್ಯ ವೈರಲ್ ಆದ ಪ್ರೋಮೋ.

ಹೌದು. ನಿಮಗೆ ನೆನಪಿದ್ದರೆ 2024ರಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಿತ್ತು. ಜಿದ್ದಾಜಿದ್ದಿನ ರಣರಂಗ ಅದು. ಮೊದಲ ಪಂದ್ಯವನ್ನು ಅದಾಗಲೇ ಇಂಗ್ಲೆಂಡ್ ತಂಡ ಗೆದ್ದು ಬೀಗಿತ್ತು. ಭಾರತದ ಮೇಲೆ ಇದರಿಂದ ಒತ್ತಡ ಹೆಚ್ಚಿತ್ತು. ಎರಡನೇ ಪಂದ್ಯ ಗೆಲ್ಲಲೇಬೇಕಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು ಭಾರತ 399 ರನ್‌ಗಳ ಗುರಿ ನೀಡಿತ್ತು.
ಈ ಸಮಯದಲ್ಲಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ರೋಹಿತ್ ಶರ್ಮಾ, ಎಲ್ಲರನ್ನೂ ಹುರಿದುಂಬಿಸಲು, ನಿದ್ದೆಯಲ್ಲಿದ್ದಂತೆ ವರ್ತಿಸುತ್ತಿದ್ದ ಎಲ್ಲರನ್ನೂ ಎಬ್ಬಿಸಲು, ಒಂದು ಡೈಲಾಗ್ ಹೊಡೆದಿದ್ದರು. ಯಾರು ಇಲ್ಲಿ ಗಾರ್ಡ್‌ನ್‌ನಲ್ಲಿ ಓಡಾಡಿದಂತೆ ಓಡಾಡುವಂತೆ ಇಲ್ಲ ಎನ್ನುವ ಸಂಭಾಷಣೆ ಅದು. ರೋಹಿತ್ ಆಡಿದ ಈ ಮಾತು ಸ್ಟಂಪ್ ಮೈಕ್ ಮೂಲಕ ಅಖಂಡ ಭಾರತಕ್ಕೆ ಕೇಳಿತ್ತು. ಆ ಕ್ಲಿಪ್ ವ್ಯಾಪಕವಾಗಿ ವೈರಲ್ ಕೂಡ ಆಗಿತ್ತು.
ಸದ್ಯ ಇದೇ ಡೈಲಾಗ್ ಮೂಲಕ ರೋಹಿತ್ ಶರ್ಮಾ ನಿಮ್ಮ ಅಂಗೈಯನ್ನು ತಲುಪಲಿದ್ದಾರೆ. ಹೊಚ್ಚ ಹೊಸ ಕಾರ್ಯಕ್ರಮದ ಮೂಲಕ ಮನರಂಜನೆಯ ರಸದೌತಣ ನೀಡಲು ಸರ್ವ ಸನ್ನದ್ದರಾಗಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಗಾರ್ಡನ್ ಸಂಭಾಷಣೆಯನ್ನೇ ಬಳಸಿಕೊಂಡು ಒಟಿಟಿಯ ಒನ್ ಆಫ್ ದಿ ಪ್ಲೇಯರ್ ''ಸೋನಿ'' ಸಂಸ್ಥೆ 1 ನಿಮಿಷ 40 ಸೆಕೆಂಡ್‌ನ ಚಿಕ್ಕ ತುಣುಕು ಹಂಚಿಕೊಂಡಿದೆ.
ನೋಡಲು ತುಂಬಾನೇ ಮಜವಾಗಿರುವ ಈ ಪ್ರೋಮೊದಲ್ಲಿ ಹಲವರು ರೋಹಿತ್ ಶರ್ಮಾ ಅವರ ಬಳಿ ಬಂದು ಗಾರ್ಡನ್ ಡೈಲಾಗ್ ಹೇಳುವಂತೆ ಮನವಿಯನ್ನು ಮಾಡಿಕೊಳ್ಳುತ್ತಾರೆ. ತಮ್ಮೆದುರು ವ್ಯಕ್ತವಾದ ಈ ಜನಾಭಿಪ್ರಾಯದಿಂದ ಕಿರಿಕಿರಿಗೊಳಗಾಗುವ, ರೋಸಿ ಹೋಗುವ ರೋಹಿತ್ ಶರ್ಮಾ ಕೊನೆಯಲ್ಲಿ ನಾನು ಹೇಳಿದ್ದ ಎರಡು ಸಾಲು ಇಷ್ಟೊಂದು ವೈರಲ್ ಆಯ್ತು. ಇನ್ನು ಸಂಪೂರ್ಣ ಕಾರ್ಯಕ್ರಮ ಹೊರ ಬಂದರೆ ಏನಾಗಬಹುದು ಎಂಬ ಪ್ರಶ್ನೆಯನ್ನು ಮಾಡಿದ್ದಾರೆ.
ರೋಹಿತ್ ಶರ್ಮಾ ಅವರ ಈ ಪ್ರೋಮೊ ಸದ್ಯ ವ್ಯಾಪಕವಾಗಿ ವೈರಲ್ ಆಗಿದ್ದು ಹಿಟ್ ಮ್ಯಾನ್ ಅಭಿಮಾನಿಗಳಿಗೆ ಈ ಪ್ರೋಮೋ ಹುಚ್ಚು ಹಿಡಿಸಿದೆ. ಹಲವರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಉತ್ಸುಕತೆ ತೋರಿಸಿದ್ದಾರೆ. ಕಾರ್ಯಕ್ರಮದ ಹೆಸರನ್ನು ಸೋನಿ ಲಿವ್ ಅಧಿಕೃತವಾಗಿ ಹೇಳದಿದ್ದರೂ ಕೂಡ ''ಹಿಟ್ ಮ್ಯಾನ್ ಶೋ'' ಎಂದು ಅಭಿಮಾನಿಗಳೇ ನಾಮಕರಣ ಮಾಡಿ ಸಂಭ್ರಮಿಸುತ್ತಿದ್ದಾರೆ.
ಇದೇ ಸಮಯದಲ್ಲಿ ಹಲವರು ಈಗಾಗಲೇ T20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ಈಗ ಟೆಸ್ಟ್ ಮತ್ತು ಏಕದಿನ ಪಂದ್ಯಕ್ಕೂ ಕೂಡ ಖಾಯಂ ಆಗಿ ಗುಡ್ ಬೈ ಹೇಳುತ್ತಿದ್ದಾರಾ ಎಂಬ ಆತಂಕವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಈ ಕಾರ್ಯಕ್ರಮದ ಹೆಚ್ಚಿನ ವಿವರ ಮತ್ತು ಹೆಸರು ಇನ್ನೂ ಬಹಿರಂಗವಾಬೇಕಿವೆ. ಸದ್ಯ ಬಿಡುಗಡೆಯಾದ ಪ್ರೋಮೊ ಮಾತ್ರ ಸಖತ್ ವೈರಲ್ ಆಗಿದೆ. ನೀವು ರೋಹಿತ್ ಶರ್ಮಾ ಫ್ಯಾನ್ ಆಗಿದ್ದರೆ ಮಿಸ್ ಮಾಡದೇ ಈ ಕೆಳಗಿನ ವಿಡಿಯೋ ನೋಡಿ. ಮಜವಾಗಿದೆ...!


Click it and Unblock the Notifications