ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಓಟಿಟಿಗೆ ಬಂದೇಬಿಡ್ತು; ಆದರೆ..
ಚಿತ್ರಮಂದಿರಗಳಲ್ಲಿ 'ಎಕ್ಕ' ಹಾಗೂ 'ಜ್ಯೂನಿಯರ್' ಸಿನಿಮಾ ಆರ್ಭಟ ಜೋರಾಗಿದೆ. ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಕಿರೀಟಿ ಹವಾ ಜೋರಾಗಿದೆ. ಕರ್ನಾಟಕದಲ್ಲಿ ಯುವ ರಾಜ್‌ಕುಮಾರ್ 'ಎಕ್ಕ' ಆಟ ಮುಂದುವರೆದಿದೆ.
ಇತ್ತ ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳು ಈ ವಾರ ಬಿಡುಗಡೆಗೆ ಸಜ್ಜಾಗಿದೆ. ಅದರಲ್ಲಿ ಕನ್ನಡದ 'X & Y' ಹಾಗೂ 'ಕೆಂಡ' ಸಿನಿಮಾಗಳು ಇವೆ. ಇದೀಗ ಇದೇ ಸಾಲಿಗೆ ಮತ್ತೊಂದು ಕನ್ನಡ ಸಿನಿಮಾ ಸೇರಿಕೊಳ್ತಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಕೋರ್ಟ್ ರೂಮ್ ಡ್ರಾಮಾ ಸಿನಿಮಾ ಓಟಿಟಿಗೆ ಬರ್ತಿದೆ.

ಗುರುರಾಜ್ ಕುಲಕರ್ಣಿ ನಿರ್ದೇಶನದ 'ದಿ ಜಡ್ಜ್‌ಮೆಂಟ್' ಸಿನಿಮಾ ಕಳೆದ ವರ್ಷ ಮೇ 24ರಂದು ತೆರೆಗೆ ಬಂದಿತ್ತು. ಮೇಘನಾ ಗಾಂವ್ಕರ್ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜಿ9 ಕಮ್ಯುನಿಕೇಷನ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ದೊಡ್ಡದಾಗಿ ಗೆಲ್ಲಲಿಲ್ಲ.
ಸಾಮಾಜಿಕ ಕಾರ್ಯಕರ್ತೆ ರೂಪ ಅತ್ಯಾಚಾರ, ಕೊಲೆ ಪ್ರಕರಣದ ಸುತ್ತಾ 'ದಿ ಜಡ್ಜ್‌ಮೆಂಟ್' ಚಿತ್ರದ ಕಥೆ ಸುತ್ತುತ್ತದೆ. ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿ ಅನಿಲ್(ದಿಗಂತ್) ಆರೋಪಿಯಾಗಿ ಬಂಧನವಾಗುತ್ತಾನೆ. ಅಷ್ಟಕ್ಕೂ ಆ ಕೊಲೆ ಹೇಗಾಯ್ತು? ಸರ್ಕಾರ ಈ ಪ್ರಕರಣದ ವಿಚಾರಣೆಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ಗೋವಿಂದು(ರವಿಚಂದ್ರನ್) ಆಯ್ಕೆ ಆಗುತ್ತಾನೆ. ಆರೋಪಿ ಪೋಷಕರು ಮಗನನ್ನು ಕಾಪಾಡುವಂತೆ ವಕೀಲೆ ಭಾರ್ಗವಿ (ಲಕ್ಷ್ಮಿ ಗೋಪಾಲಸ್ವಾಮಿ) ಮೊರೆ ಹೋಗುತ್ತಾರೆ.

ಅನಿಲ್ ಅಪರಾಧಿ ಹೌದೋ ಅಲ್ವೋ ಎನ್ನುವ ವಿಚಾರಣೆ ಕೋರ್ಟ್‌ನಲ್ಲಿ ಆರಂಭವಾಗುತ್ತದೆ. ವಕೀಲ ಗೋವಿಂದು ಹಾಗೂ ವಕೀಲೆ ಭಾರ್ಗವಿ ತಮ್ಮ ತಮ್ಮ ವಾದ ಮಂಡಿಸಲು ಪ್ರಾರಂಭಿಸುತ್ತಾರೆ. ವಿಪರ್ಯಾಸ ಅಂದರೆ ಈ ಪ್ರಕರಣದ ಆರೋಪಿ ಹಾಗೂ ಸಾಕ್ಷಿ ಎರಡೂ ಅನಿಲ್ ಆಗಿರುತ್ತಾನೆ. ಮುಂದೇನು? ಎನ್ನುವುದು 'ದಿ ಜಡ್ಜ್‌ಮೆಂಟ್' ಚಿತ್ರದ ಕಥೆ. ಚಿತ್ರದಲ್ಲಿ ರವಿಚಂದ್ರನ್ ಪತ್ನಿ ಪಾತ್ರದಲ್ಲಿ ಮೇಘಣಾ ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ದಿಗಂತ್ ಪ್ರೇಯಸಿ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಮಿಂಚಿದ್ದಾರೆ.
ಸದ್ಯ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ. ಯುಎಸ್ ಹಾಗೂ ಯುಕೆಯಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸಲು ಅವಕಾಶವಿದೆ. ಕೆಲವೇ ದಿನಗಳಲ್ಲಿ ಇಲ್ಲಿನ ಪ್ರೈಂ ಚಂದಾದಾದರರಿಗೂ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಬಾಲಾಜಿ ಮನೋಹರ್, ಪ್ರಕಾಶ್ ಬೆಳವಾಡಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಕನ್ನಡದಲ್ಲಿ ಕೋರ್ಟ್ ಡ್ರಾಮಾ ಸಿನಿಮಾಗಳ ಸಂಖ್ಯೆ ಕಮ್ಮಿ. ಇತ್ತೀಚೆಗೆ ಅಜಯ್ ರಾವ್ ನಿರ್ಮಿಸಿ ನಟಿಸಿದ 'ಯುದ್ಧಕಾಂಡ- 2' ಚಿತ್ರದಲ್ಲಿ ಕೂಡ ಇಂತದ್ದೇ ಕಥೆ ಇತ್ತು. ಅದು ಕೂಡ ಒಂದು ಕೊಲೆಯ ಸುತ್ತಾ ಸುತ್ತುವ ಸಿನಿಮಾ ಆಗಿತ್ತು. ಕೋರ್ಟ್ ಡ್ರಾಮಾ ಸಿನಿಮಾಗಳು ಕೆಲವರಿಗೆ ಬಹಳ ಇಷ್ವವಾಗುತ್ತದೆ. ವಕೀಲರ ಪಾತ್ರದಲ್ಲಿ ಕ್ರೇಜಿಸ್ಟಾರ್ ಗಂಭೀರವಾಗಿ ನಟಿಸಿ ಇಷ್ಟವಾಗುತ್ತಾರೆ. ಬಹಳ ಅಧ್ಯಯನ ಮಾಡಿ ನಿರ್ದೇಶಕ ಗುರುರಾಜ್ 'ದಿ ಜಡ್ಜ್‌ಮೆಂಟ್' ಸಿನಿಮಾ ಸಿನಿಮಾ ಮಾಡಿದ್ದಾರೆ. ವೀಕೆಂಡ್ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ.


Click it and Unblock the Notifications











