ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ ಎಂಟ್ರಿ; ಈಗ್ಲೇ ನೋಡಿ ಮಜಾ ಮಾಡಿ
ಮಕ್ಕಳ ಸಿನಿಮಾಗಳ ಸಂಖ್ಯೆ ಕಮ್ಮಿ ಆಗ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಆ ನಿಟ್ಟಿನಲ್ಲಿ ಅದ್ಭುತ ಪ್ರಯತ್ನ ಎನಿಸಿಕೊಂಡಿತ್ತು. ಬಳಿಕ ಅಲ್ಲೊಂದು ಇಲ್ಲೊಂದು ಚಿಣ್ಣರ ಸಿನಿಮಾಗಳ ಪ್ರೇಕ್ಷಕರ ಮುಂದೆ ಬಂದಿದ್ದವು.
ಈ ವರ್ಷ ಕನ್ನಡದ ಎರಡ್ಮೂರು ಮಕ್ಕಳ ಸಿನಿಮಾಗಳು ಗಮನ ಸೆಳೆದಿದ್ದವು. ಕೆಲ ಚಿತ್ರೋತ್ಸವಗಳಲ್ಲಿ ಕೂಡ ಪ್ರದರ್ಶನ ಕಂಡಿದ್ದವು. ಅದರಲ್ಲಿ 'ನಾಳೆ ರಜಾ ಕೋಳಿ ಮಜಾ' ಎಂಬ ಸಿನಿಮಾ ಕೂಡ ಒಂದು. ಸಾಕಷ್ಟು ಕಡೆಗಳಲ್ಲಿ ಶಾಲೆಗಳಿಗೆ ರಜೆ ಸಿಕ್ಕರೆ ಮಕ್ಕಳು 'ನಾಳೆ ರಜಾ ಕೋಳಿ ಮಜಾ' ಎಂದು ಹೇಳುವುದನ್ನು ಕೇಳಿದ್ದೆವು. ಇದೇ ಸಾಲನ್ನು ಟೈಟಲ್ ಆಗಿ ಮಾಡಿ ಅದೇ ಕಾನ್ಸೆಪ್ಟ್‌ನಲ್ಲಿ ಅಭಿಲಾಷ್ ಶೆಟ್ಟಿ ಸಿನಿಮಾ ಮಾಡಿದ್ದರು.

ಮೇ 9ರಂದು ತೆರೆಗೆ ಬಂದಿದ್ದ 'ನಾಳೆ ರಜಾ ಕೋಳಿ ಮಜಾ' ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಜೊತೆಗೆ 'ಮರ್ಯಾದೆ ಪ್ರಶ್ನೆ' ಸಿನಿಮಾ ಪ್ರೈಂ ವೀಡಿಯೋ ಜೊತೆಗೆ ಸನ್ ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಹಾಗಾಗಿ ಎರಡು ಕನ್ನಡ ಸಿನಿಮಾಗಳು ಈ ವಾರ ಓಟಿಟಿ ವೀಕ್ಷಕರಿಗೆ ಲಭ್ಯವಾಗುವಂತಾಗಿದೆ.
19ನೇ ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಚಲನಚಿತ್ರೋತ್ಸವದಲ್ಲಿ 'ನಾಳೆ ರಜಾ ಕೋಳಿ ಮಜಾ' ಸಿನಿಮಾ ಪ್ರದರ್ಶನ ಕಂಡಿತ್ತು. ಇದೇ ಜೂನ್ 22ರಂದು 25ನೇ ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಅಭಿಲಾಷ್ ಶೆಟ್ಟಿ ತಾವೇ ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ.
ಪಶ್ಚಿಮಘಟ್ಟದ ಹಳ್ಳಿಯೊಂದರಲ್ಲಿ 'ನಾಳೆ ರಜಾ ಕೋಳಿ ಮಜಾ' ಸಿನಿಮಾ ಕಥೆ ನಡೆಯುತ್ತದೆ. ಮಲೆನಾಡ ಭಾಗದಲ್ಲಿ ಮಕ್ಕಳು ಶಾಲೆಗೆ ರಜೆ ಸಿಕ್ಕರೆ 'ನಾಳೆ ರಜಾ ಕೋಳಿ ಮಜಾ' ಎಂದು ಹೇಳುವುದು ಸರ್ವೇಸಾಮಾನ್ಯ. ಮಕ್ಕಳಿಗೆ ನೀತಿ ನಿಯಮದ ಬಗ್ಗೆ ಅರಿವು ಇರುವುದಿಲ್ಲ. ಅವರು ಬೇಕು ಎಂದು ಬಯಸಿದ್ದು ಬೇಕು ಅಷ್ಟೆ. ಈ ಚಿತ್ರದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಸ್ನೇಹಾ(ಸಮೃದ್ಧಿ ಕುಂದಾಪುರ)ಗೆ ಒಮ್ಮೆ ನಾನ್ ವೆಜ್ ತಿನ್ನುವ ಬಯಕೆ ಆಗುತ್ತದೆ.
ಪ್ರತಿ ಭಾನುವಾರ ಮನೆಯಲ್ಲಿ ನಾನ್‌ವೆಜ್ ಮಾಡುತ್ತಿದ್ದರು. ಆದರೆ ಅದೊಂದು ಭಾನುವಾರ ಗಾಂಧಿಜಯಂತಿ ಬಂದು ಬಿಡುತ್ತದೆ. ಆ ದಿನ ಮದ್ಯ, ಮಾಂಸ ಮಾರಾಟ ನಿಷಿದ್ಧ. ಆದರೆ ಸ್ನೇಹಾಳಿಗೆ ಅದೆಲ್ಲಾ ಗೊತ್ತಿಲ್ಲ, ನಾನ್‌ವೆಜ್ ಬೇಕು ಅಷ್ಟೇ. ಕೋಳಿ ಸಾರು ತಿನ್ನಲೇಬೇಕು ಎನ್ನುವ ಬಯಕೆ ಹೆಚ್ಚುತ್ತದೆ. ಯಾರು ಹೇಳಿದರೂ ಕೇಳುವುದಿಲ್ಲ. ತಾನೇ ಬ್ಯಾಗ್ ಹಿಡಿದು ಕೋಳಿ ಮಾಂಸಕ್ಕಾಗಿ ಊರೆಲ್ಲಾ ಸುತ್ತಾಡುತ್ತಾಳೆ. ಎಲ್ಲೂ ಸಿಗಲ್ಲ. ಕೊನೆಗೆ ಕೋಳಿ ಸಾಕಿಕೊಂಡವರ ಮನೆಗೆ ಹೋಗಿ ಕೇಳಿದರೂ ಪ್ರಯೋಜನವಾಗಲ್ಲ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.
ಕುಂದಾಪುರ ಕನ್ನಡ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಾನಿಧ್ಯಾ ಆಚಾರ್ಯ, ರಾಧ ರಾಮಚಂದ್ರ, ಪ್ರಭಾಕರ್ ಕುಂದರ್, ಗಣೇಶ್ ಮೊಗವೀರ ಚಿತ್ರದ ತಾರಾಗಣದಲ್ಲಿ ನಟಿಸಿದ್ದಾರೆ. ಪ್ಲ್ಯಾನ್ ಎ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಎಂ. ಆರ್ ಪರಾಸ್ಟ್ ಸಂಗೀತ, ಸ್ವರೂಪ್ ಯಶ್ವಂತ್ ಛಾಯಾಗ್ರಹಣ ಚಿತ್ರಕ್ಕಿದೆ. ಒಂದೂವರೆ ಗಂಟೆಯ ಪುಟ್ಟ ಸಿನಿಮಾ 'ನಾಳೆ ರಜಾ ಕೋಳಿ ಮಜಾ'.
ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ ಸಿನಿಮಾ ನೋಡುಗರನ್ನು ರಂಜಿಸುತ್ತದೆ. ಮಕ್ಕಳಿಗೆ 'ನಾಳೆ ರಜಾ ಕೋಳಿ ಮಜಾ' ಸಿನಿಮಾ ಇಷ್ಟವಾಗುತ್ತದೆ. ನೀವು ನೋಡಿ ಸಾಧ್ಯವಾದರೆ ಮಕ್ಕಳಿಗೆ ತೋರಿಸಿ.


Click it and Unblock the Notifications











