ಕನ್ನಡದಲ್ಲೊಂದು ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್: 'ವೈಟ್ ಅಂಡ್ ಬ್ಲ್ಯಾಕ್' ಮರುಳಾದ ವೀಕ್ಷಕರು!
ಸ್ಯಾಂಡಲ್‌ವುಡ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಆದರೂ, ಓಟಿಟಿ ಅನ್ನೋ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕಳೆದ ವರ್ಷ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಲ್ಲಾಡಿಸಿಬಿಟ್ಟಿದ್ದವು. ಹೀಗಿದ್ದರೂ, ಸಾಕಷ್ಟು ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ.
ಓಟಿಟಿಯಲ್ಲಿ ಅತೀ ಹೆಚ್ಚು ಮೆಚ್ಚುಗೆ ಗಳಿಸುತ್ತಿರುವುದು ವೆಬ್ ಸೀರಿಸ್. ಈಗಿನ ಜನರೇಷನ್‌ಗೆ ವೆಬ್ ಸೀರಿಸ್ ಮೇಲೆ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ವೆಬ್ ಸೀರಿಸ್‌ಗೆ ಹೆಚ್ಚು ಗಮನ ಹರಿಸುತ್ತಿದೆ. ಈ ಟ್ರೆಂಡ್‌ಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳು ಬಹುಬೇಗನೇ ಒಗ್ಗಿಕೊಳ್ಳುತ್ತಿವೆ. ಆದರೆ, ಕನ್ನಡ ಮಾತ್ರ ಇನ್ನೂ ವೆಬ್ ಸೀರಿಸ್ ಕಾನ್ಸೆಪ್ಟ್ ಅನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಂತೆ ಇಲ್ಲ.
ಈಗಾಗಲೇ ಒಂದೆರಡು ಪ್ರಯತ್ನಗಳು ನಡೆದಿವೆ. ಆದರೆ, ಆ ವೆಬ್ ಸೀರಿಸ್‌ಗಳು ಅಷ್ಟೊಂದು ಇಂಪ್ಯಾಕ್ಟ್ ಮಾಡಿಲ್ಲ. ಈಗ ಹೊಸಬರ ತಂಡದೊಂದು ಓಟಿಟಿಯ ಫೇವರಿಟ್ ಜಾನರ್ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್ ಅನ್ನು ಕನ್ನಡದಲ್ಲಿ ನಿರ್ಮಾಣ ಮಾಡಿದೆ. ಕ್ರೈಂ ಥ್ರಿಲ್ಲರ್ ಜೊತೆ ಸೈನ್ಸ್ ಫಿಕ್ಷನ್ ವೆಬ್ ಸೀರಿಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಅದುವೇ 'ವೈಟ್ ಅಂಡ್ ಬ್ಲ್ಯಾಕ್'.

'ವೈಟ್ ಅಂಡ್ ಬ್ಲ್ಯಾಕ್' ವೆಬ್ ಸೀರಿಸ್ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿಲ್ಲ. ಬದಲಾಗಿ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಈ ಸೀರಿಸ್ ಇನ್ನಷ್ಟು ಜನಪ್ರಿಯತೆ ಗಳಿಸಿದರೆ, ಮತ್ತಷ್ಟು ವೆಬ್ ಸೀರಿಸ್‌ಗಳು ಬೆಳೆಯುವ ಸಾಧ್ಯತೆಯಿದೆ.
ಅಂದ್ಹಾಗೆ 'ವೈಟ್ ಅಂಡ್ ಬ್ಲ್ಯಾಕ್' ವೆಬ್ ಸೀರಿಸ್ ನಿರ್ದೇಶನ ಮಾಡಿದ್ದು ಅಭಿನಂದನ್. ಅವರೇ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಈ ವೆಬ್ ಸರಣಿ ನಿರ್ದೇಶನ ಮಾಡುವುದಕ್ಕೂ ಮುನ್ನ ರಂಗಭೂಮಿ ಕಲಾವಿದನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಹಲವು ನಾಟಕಗಳಿಗೆ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಈಗ ತಮ್ಮ ಮೊದಲ ವೆಬ್ ಸರಣಿಗೂ ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
'ವೈಟ್ ಅಂಡ್ ಬ್ಲ್ಯಾಕ್' ವೆಬ್ ಸೀರಿಸ್‌ನಲ್ಲಿ ರಂಗಭೂಮಿ ಕಲಾವಿದರು ಹಾಗೂ ಪ್ರತಿಭಾವಂತ ಯುವ ತಾಂತ್ರಿಕ ವರ್ಗವನ್ನು ಬಳಸಿಕೊಂಡಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ನಿರ್ದೇಶಕ ಸತ್ಯ ವೆಬ್ ಸೀರೀಸ್ ಕಂಟೆಂಟ್ ಮೆಚ್ಚಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದಾರೆ. ವೀಕ್ಷಕರು ಕೂಡ ಕಂಟೆಂಟ್ ಕಂಡು ಬೆರಗಾಗಿದ್ದಾರೆ.

ಬಹುತೇಕ ರಂಗಭೂಮಿ ಕಲಾವಿದರೇ ಈ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಸತ್ಯ ಸೀರಿಯಲ್‌ನ ಬಾಲಾ ಪಾತ್ರಧಾರಿ ಶಶಿ ರಾಜ್, ಪ್ರಿಯಾಂಕಾ ಪ್ರಕಾಶ್, ಚನ್ನಕೇಶವ.ಜಿ, ಸವಿತಾ ನಟಿಸಿದ್ದಾರೆ. ಕಮಲ್.ವಿ ಕ್ಯಾಮರಾ, ಸತ್ಯ ರಾಧಾಕೃಷ್ಣ ಮ್ಯೂಸಿಕ್ 'ವೈಟ್ ಅಂಡ್ ಬ್ಲ್ಯಾಕ್'ನಲ್ಲಿದೆ.


Click it and Unblock the Notifications











