100 ಕೋಟಿ ದೋಚಿದ ಮೋಸ್ಟ್ ವೈಲೆಂಟ್ 'ಮಾರ್ಕೊ' ಓಟಿಟಿ ರಿಲೀಸ್ ಡೇಟ್ ಘೋಷಣೆ
ಮಲಯಾಳಂನಲ್ಲಿ ಇತ್ತೀಚೆಗೆ ಬಂದ ಭಾರೀ ಸದ್ದು ಮಾಡಿದ ಸಿನಿಮಾ 'ಮಾರ್ಕೊ'. ಉನ್ನಿ ಮುಕುಂದನ್ ನಟನೆಯ ಆಕ್ಷನ್ ಥ್ರಿಲ್ಲರ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ.
ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮಾರ್ಕೊ' ಸಿನಿಮಾ ತೆರೆಗೆ ಬಂದಿತ್ತು. ಅನೀಫ್ ಅದೆನಿ ನಿರ್ದೇಶನದ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಿತ್ತು. ಮೋಹನ್ ಲಾಲ್ ನಟನೆಯ 'ಬರೋಜ್' ಸಿನಿಮಾ ಪೈಪೋಟಿ ನಡುವೆಯೂ 'ಮಾರ್ಕೊ' ಸದ್ದು ಮಾಡಿತ್ತು. ಉನ್ನಿ ಮುಕುಂದನ್ ಖಡಕ್ ಲುಕ್‌ನಲ್ಲಿ ಅಬ್ಬರಿಸಿ ಗಮನ ಸೆಳೆದಿದ್ದರು. ಸಿದ್ದಿಕಿ, ಜಗದೀಶ್, ಕಬೀರ್ ದುಹಾನ್ ಸಿಂಗ್, ಅನ್ಸೋನ್ ಪಾಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಮಾಸ್ ಪ್ರೇಕ್ಷಕರಿಗಂತೂ 'ಮಾರ್ಕೊ' ಸಿನಿಮಾ ಭರ್ಜರಿ ಮನರಂಜನೆ ಉಣಬಡಿಸಿದೆ. ಇನ್ನು ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಪ್ರೇಕ್ಷಕರು, ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೂಡ ಒಳ್ಳೆ ಗಳಿಕೆ ಕಂಡಿದೆ. ರಿವೇಂಜ್ ಡ್ರಾಮಾ ಸಿನಿಮಾದಲ್ಲಿ ಸಿಕ್ಕಾಪಟ್ಟೆ ವೈಲೆನ್ಸ್ ಇದೆ. ಅದ್ಯಾವ ಮಟ್ಟಿಗೆ ಅಂದರೆ ಕೆಲವರು ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದರು.
'ಮಾರ್ಕೊ' ಸಿನಿಮಾ ಕತೆ ಏನು? ಎಂದು ನೋವುದಾದರೆ ಟೋನಿ (ಜಗದೀಶ್) ಹಾಗೂ ಜಾರ್ಜ್ ಚಿನ್ನದ ಕಳ್ಳಸಾಗಣೆ ಮಾಫಿಯಾ ನಡೆಸುತ್ತಿರುತ್ತಾರೆ. ಇನ್ನು ಜಾರ್ಜ್‌ನ ಮಗ ವಿಕ್ಟರ್ (ಇಶಾನ್ ಶೌಕತ್) ಅಂಧ ಆಗಿರುತ್ತಾನೆ. ವಿಕ್ಟರ್ ಹಾಗೂ ಆತನ ಸ್ನೇಹಿತ ವಾಸಿಮ್‌ನನ್ನು ಕೆಲವರು ಕೊಲ್ಲುತ್ತಾರೆ. ಈ ವಿಚಾರ ಲಂಡನ್‌ನಲ್ಲಿರುವ ಮಾರ್ಕೊಗೆ ಗೊತ್ತಾಗುತ್ತದೆ.
ವಿಕ್ಟರ್ ಸಾವಿಗೆ ಸೇಡು ತೀರಿಸಿಕೊಳ್ಳಲು ಮಾರ್ಕೊ ಭಾರತಕ್ಕೆ ಬರ್ತಾನೆ. ಇನ್ನು ಮರಿಯಾ(ಯುಕ್ತಿ ತರೇಜಾ) ಜೊತೆ ಮಾರ್ಕೊಗೆ ಮದುವೆ ನಿಶ್ಚಯವಾಗಿರುತ್ತದೆ. ಅಷ್ಟಕ್ಕೂ ವಿಕ್ಟರ್‌ಗೂ ಮಾರ್ಕೊಗೂ ಏನು ಸಂಬಂಧ? ವಿಕ್ಟರ್ ಹತ್ಯೆಗೆ ಮಾರ್ಕೊ ಹೇಗೆ ಪ್ರತಿಕಾರ ತೀರಿಸಿಕೊಳ್ತಾನೆ? ಆತನ ಮದುವೆ ಕಥೆ ಏನಾಗುತ್ತದೆ? ಇದೆಲ್ಲದ್ದಕ್ಕೂ ಉತ್ತರ ಬೇಕು ಅಂದರೆ 'ಮಾರ್ಕೊ' ಸಿನಿಮಾ ನೋಡಬೇಕು.
ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಹೀರೊ ಮುಂದಾಗುವ ಕಥೆ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ಅದನ್ನೇ ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಸ್ಟೈಲಿಶ್ ಆಗಿ ಆಕ್ಷನ್ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಕೆಲವೆಡೆ ಕ್ರೌರ್ಯ ಅತಿಯಾಯಿತು ಎನಿಸುತ್ತದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ.
ಟೆಕ್ನಿಕಲಿ 'ಮಾರ್ಕೊ' ಸಿನಿಮಾ ಸ್ಟ್ರಾಂಗ್ ಆಗಿದೆ. ಪ್ರತಿಫ್ರೇಮ್ ಹುಬ್ಬೇರಿಸುವಂತಿದೆ. ಎಡಿಟಿಂಗ್, ಮ್ಯೂಸಿಕ್ ಎಲ್ಲವೂ ಚಿತ್ರದ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಷ್ಯುವಲ್ಸ್ ಎಫೆಕ್ಟ್ ಚೆನ್ನಾಗಿದೆ. ರವಿ ಬಸ್ರೂರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮೋಸ್ಟ್ ವೈಲೆಂಟ್ ಸಿನಿಮಾ ಎಂದು ಕರೆದಿರುವ ಚಿತ್ರಕ್ಕೆ ಬೇಕಾದ ಸೌಂಡಿಂಗ್ ಬಿಜಿಎಂ ಚಿತ್ರದಲ್ಲಿದೆ.
ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಮಾರ್ಕೊ' ಸಿನಿಮಾ ಇದೀಗ ಓಟಿಟಿಗೆ ಬರ್ತಿದೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಫೆಬ್ರವರಿ 14ಕ್ಕೆ ಸೋನಿಲಿವ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿತ್ತು. ಹಾಗಾಗಿ ಓಟಿಟಿಯಲ್ಲಿ ಕನ್ನಡ ವರ್ಷನ್ ಕೂಡ ನೋಡಲು ಸಿಗುತ್ತದೆ. 5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರಲಿದೆ.


Click it and Unblock the Notifications











