ಕಬ್ಜ ಓಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಯಾವ ಅಪ್ಲಿಕೇಶನ್‌ನಲ್ಲಿ ರಿಲೀಸ್?
ಕಬ್ಜ.. ಕಳೆದ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಗೊಂಡಿದ್ದ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಮೂರನೇ ಚಿತ್ರ ಇದಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಉಪೇಂದ್ರ ಸಿನಿ ಕೆರಿಯರ್‌ನ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿತ್ತು ಹಾಗೂ ವಿಶ್ವದಾದ್ಯಂತ 4000 ಪರದೆಗಳಲ್ಲಿ ಚಿತ್ರ ತೆರೆಗೆ ಬಂದಿತ್ತು.
ಚಿತ್ರ ತನ್ನ ಮೇಕಿಂಗ್, ಛಾಯಾಗ್ರಹಣ ಹಾಗೂ ಸಂಗೀತದ ಕಾರಣದಿಂದಾಗಿ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೌದು, ಟೀಸರ್ ಹಾಗೂ ಟ್ರೈಲರ್‌ಗಳ ಮೂಲಕವೇ ಸಿನಿ ರಸಿಕರನ್ನು ತನ್ನತ್ತ ಸೆಳೆದಿದ್ದ ಕಬ್ಜ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಮೂಡಿಸಿತ್ತು. ಇನ್ನು ಬಿಡುಗಡೆಯಾದ ಬಳಿಕ ಚಿತ್ರ ಕಲೆಕ್ಷನ್ ವಿಚಾರವಾಗಿ ಸದ್ದು ಮಾಡಿತು. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಚಿತ್ರ ನೂರು ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಅಧಿಕೃತ ಘೋಷಣೆಯನ್ನೂ ಸಹ ಮಾಡಿತ್ತು.

ಹೀಗೆ ಭಾರೀ ಚರ್ಚೆಗೀಡಾಗಿದ್ದ ಕಬ್ಜ ಚಿತ್ರ ಓಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆ ಸಿನಿ ರಸಿಕರಲ್ಲಿ ಇತ್ತು ಹಾಗೂ ಈ ದಿನದಂದು ಚಿತ್ರ ಓಟಿಟಿಗೆ ಬರಲಿದೆ ಎಂದು ಹಲವು ದಿನಾಂಕಗಳು ಹರಿದಾಡಿದ್ದವು. ಈ ಪ್ರಶ್ನೆಗೆ ಇದೀಗ ಅಧಿಕೃತವಾಗಿ ಉತ್ತರ ಸಿಕ್ಕಿದೆ. ಅಮೆಜಾನ್ ಪ್ರೈಮ್ ವಿಡಿಯೊ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನೀವೆಂದೂ ನೋಡಿರದ ಘಟನೆಗಳು ಓರ್ವ ಮುಗ್ದ ಯುವಕನನ್ನು ಭಯಂಕರ ಭೂಗರ ಪಾತಕಿಯನ್ನಾಗಿ ಬದಲಾಯಿಸುವ ಕಥೆ 'ಕಬ್ಜ' ಇದೇ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದೆ.
ಈ ಮೂಲಕ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಏಪ್ರಿಲ್ 14ರಂದು ಕಬ್ಜ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹರಿದಾಡುತ್ತಿದ್ದ ಸುದ್ದಿ ಪಕ್ಕಾ ಆಗಿದ್ದು, ಚಿತ್ರಮಂದಿರಗಳಲ್ಲಿ ಕಬ್ಜ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದವರು ಓಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಕಬ್ಜ ಚಿತ್ರ ಮೊನ್ನೆಯೇ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಹೌದು, ಕಬ್ಜ ಚಿತ್ರದ ಫುಲ್ ಎಚ್‌ಡಿ ಪ್ರಿಂಟ್ ಟಾರೆಂಟ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿದ್ದು, ಓಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಮೊಬೈಲ್ ಪರದೆಗಳಲ್ಲಿ ಹರಿದಾಡಿದೆ. ಕೇವಲ ತಮಿಳು ವರ್ಷನ್ ಚಿತ್ರ ಮಾತ್ರ ಲೀಕ್ ಆಗಿದ್ದು, ಉಳಿದ ಭಾಷೆಗಳ ಪ್ರಿಂಟ್ ಲೀಕ್ ಆಗಿಲ್ಲ.

ಇನ್ನು ಚಿತ್ರ ನಿನ್ನೆ ( ಏಪ್ರಿಲ್ 10 ) 25 ದಿನಗಳನ್ನು ಪೂರೈಸಿದೆ. ಚಿತ್ರ ಬೆಂಗಳೂರಿನ 3 ಚಿತ್ರಮಂದಿಗಳಲ್ಲಿ 25 ದಿನಗಳನ್ನು ಪೂರೈಸಿದೆ. ಮುಖ್ಯ ಚಿತ್ರಮಂದಿರ ನರ್ತಕಿ, ಮೈಸೂರು ರಸ್ತೆಯ ಆರ್ಕೆಡ್ ಮಾಲ್‌ನ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಶೋ ಹಾಗೂ ಡಾ ರಾಜ್‌ಕುಮಾರ್ ರಸ್ತೆಯ ಒರಾಯನ್ ಮಾಲ್‌ನ ಪಿವಿಆರ್‌ನ ಒಂದು ಸ್ಕ್ರೀನ್‌ನಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದೆ.
ಅಲ್ಲದೇ ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ, ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ, ಹುಬ್ಬಳ್ಳಿಯ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ನಲ್ಲಿ, ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಹಾಗೂ ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದೆ. ಈ ಮೂಲಕ ರಾಜ್ಯದ ಸುಮಾರು ಹತ್ತು ಕೇಂದ್ರಗಳಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದ್ದು, ಹೊರ ರಾಜ್ಯದ ಯಾವ ನಗರದಲ್ಲಿಯೂ ಚಿತ್ರ ಪ್ರದರ್ಶನಗೊಳ್ಳುತ್ತಿಲ್ಲ.


Click it and Unblock the Notifications











