Vaamana OTT: ಧನ್ವೀರ್ ಗೌಡ 'ವಾಮನ' ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ
ತಿಂಗಳ ಹಿಂದೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸದ್ದು ಮಾಡಿದ್ದ 'ವಾಮನ' ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಇನ್ನು ಸಿನಿಮಾ ಈಗಾಗಲೇ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಅಭಿಮಾನಿಗಳು ಥಿಯೇಟರ್ ಅಂಗಳದಲ್ಲಿ 25 ದಿನಗಳ ಸಂಭ್ರಮಾಚರಣೆ ಮಾಡಿದ್ದಾರೆ.
ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಶಂಕರ್ ರಾಮನ್ ನಿರ್ದೇಶನದ ಚಿತ್ರಕ್ಕೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಿದ್ದರು. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಸಂಪತ್ ರಾಜ್, ಆದಿತ್ಯ ಮೆನನ್, ತಾರಾ, ಅವಿನಾಶ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಬಹಳ ಹಿಂದೆ ಶುರುವಾಗಿದ್ದ 'ವಾಮನ' ಸಿನಿಮಾ ತೆರೆಗೆ ಬರುವುದು ತಡವಾಗಿತ್ತು. ನಟ ದರ್ಶನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ದರ್ಶನ್ ಅಭಿಮಾನಿಗಳಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಏಪ್ರಿಲ್ 2ನೇ ವಾರದ 'ವಿದ್ಯಾಪತಿ', 'ಅಜ್ಞಾತವಾಸಿ' ಹಾಗೂ 'ವಾಮನ' ಸಿನಿಮಾಗಳು ತೆರೆಗೆ ಬಂದಿದ್ದವು. ಈಗಾಗಲೇ 'ವಿದ್ಯಾಪತಿ' ಸಿನಿಮಾ ಪ್ರೈ ವೀಡಿಯೋ ಓಟಿಟಿಗೆ ಬಂದಿದೆ. 'ಅಜ್ಞಾತವಾಸಿ' ಮೇ 16ಕ್ಕೆ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
'ವಾಮನ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 4 ದಿನಗಳ ಹಿಂದೆಯೇ ಸಿನಿಮಾ ಓಟಿಟಿಗೆ ಬಂದರೂ ಯುಕೆ ಚಂದಾದಾರರು ಮಾತ್ರ ವೀಕ್ಷಿಸಲು ಅವಕಾಶ ಸಿಕ್ಕಿತ್ತು. ಇದೀಗ ಭಾರತದ ಚಂದಾದಾರರು ಕೂಡ ಸಿನಿಮಾ ನೋಡಬಹುದು.

ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ 'ವಾಮನ'. ಲವ್, ಆಕ್ಷನ್, ಮದರ್ ಸೆಂಟಿಮೆಂಟ್ ಈಗ ಕರ್ಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಮಾಡಿರುವ ಸಿನಿಮಾ. ಪಾಪಣ್ಣ(ಸಂಪತ್ ರಾಜ್) ಎಂದ ಗ್ಯಾಂಗ್‌ಸ್ಟರ್ ಹಾಗೂ ಮೆಕ್ಯಾನಿಕ್ ಗುಣ(ಧನ್ವೀರ್ ಗೌಡ) ನಡುವಿನ ಪೈಪೋಟಿಯ ಕಥೆ 'ವಾಮನ'. ಅಷ್ಟಕ್ಕೂ ಇಬ್ಬರ ನಡುವಿನ ಸಂಬಂಧವೇನು? ಯಾಕೆ ಇಬ್ಬರ ನಡುವೆ ದ್ವೇಷ ಹುಟ್ಟುತ್ತದೆ? ಎನ್ನುವುದು ಇನ್ನುಳಿದ ಕಥೆ.
ನಾನ್ ಲೀನಿಯರ್ ಶೈಲಿಯಲ್ಲಿ 'ವಾಮನ' ಸಿನಿಮಾ ಕತೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಅರುಣ್ ರಾಜ್ ಹಾಗೂ ವಿಕ್ರಂ ಮೋರ್ ಆಕ್ಷನ್ ಚಿತ್ರದ ಹೈಲೆಟ್. 'ಮುದ್ದು ರಾಕ್ಷಸಿ' ಹಾಡು ಹಿಟ್ ಆಗಿ ಬಲ ತುಂಬಿತ್ತು. ಹೊಡೀಬಡಿ ದೃಶ್ಯಗಳಲ್ಲಿ ಧನ್ವೀರ್ ಅಬ್ಬರಿಸಿದ್ದಾರೆ. 'ಬಜಾರ್' ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಬಂದಿದ್ದರು. ನಂತರ 'ಬೈ ಟು ಲವ್', 'ಕೈವಾ' ಸಿನಿಮಾಗಳಲ್ಲಿ ಮಿಂಚಿದ್ದರು. ಆ ಮೂರು ಚಿತ್ರಗಳಿಗಿಂತ 'ವಾಮನ' ಚಿತ್ರದಲ್ಲಿ ಪರ್ಫಾರ್ಮನ್ಸ್ ಚೆನ್ನಾಗಿದೆ.
'ಬಂಪರ್' ಎನ್ನುವ ಮತ್ತೊಂದು ಚಿತ್ರದಲ್ಲಿ ಧನ್ವೀರ್ ಗೌಡ ಬಣ್ಣ ಹಚ್ಚಿದ್ದಾರೆ. ಕೆಲ ಕನ್ನಡ ಸಿನಿಮಾಗಳನ್ನು ಪ್ರೈಂ ವೀಡಿಯೋ ಸಂಸ್ಥೆ ಮೊದಲಿಗೆ ಯುಎಸ್, ಯುಕೆಯಲ್ಲಿ ರಿಲೀಸ್ ಮಾಡಿ ಬಳಿಕ ಭಾರತದಲ್ಲಿ ಸ್ಟೀಮಿಂಗ್ ಮಾಡುತ್ತದೆ. 'ವಾಮನ' ವಿಚಾರದಲ್ಲಿ ಕೂಡ ಇದೇ ರೀತಿ ಮಾಡಲಾಗುತ್ತಿದೆ. ಇತ್ತೀಚೆಗೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ 25 ದಿನಗಳ ಸಂಭ್ರಮಾಚರಣೆ ಮಾಡಲಾಗಿತ್ತು. ಧನ್ವೀರ್ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
ಈಗಾಗಲೇ ಕೆಲವರು ಚಿತ್ರಮಂದಿರಗಳಲ್ಲಿ 'ವಾಮನ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ. ಕಳೆದ ವಾರದ ಕನ್ನಡದ 'ಕೆರೆಬೇಟೆ', 'ವಿದ್ಯಾಪತಿ' ಹಾಗೂ 'ಕಾಲಪತ್ಥರ್' ಚಿತ್ರಗಳು ಓಟಿಟಿಗೆ ಬಂದಿತ್ತು. ಈ ವಾರ 'ವಾಮನ'ನ ಆಗಮನವಾಗುತ್ತಿದೆ.


Click it and Unblock the Notifications











