ದೀಪಾವಳಿ ಧಮಾಕಾ ; ಸದ್ದಿಲ್ಲದೇ ಓಟಿಟಿಗೆ ಬಂತು ಎದೆ ನಡುಗಿಸುವಂತಹ ಹಾರರ್ ಸಿನಿಮಾ
ಆ ಭಾಷೆ ಈ ಭಾಷೆ ಅಂತ ಅಲ್ಲ. ಎಲ್ಲ ಭಾಷೆಯಲ್ಲಿಯೂ ಹಾರರ್ ಚಿತ್ರಕ್ಕೆ ಅದ್ರದ್ದೇ ಆದ ಬೇಡಿಕೆ ಇದೆ. ವಿಶೇಷ ಸ್ಥಾನ ಇದೆ. ಹಾಗಂಥ ಈ ಜಾನರ್‌ನಲ್ಲಿ ಬರುವ ಎಲ್ಲ ಚಿತ್ರಗಳು ಬ್ಲಾಕ್‌ಬಸ್ಟರ್ ಆಗುವುದಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಈ ಪ್ರೇತಾತ್ಮಗಳ ಹಾವಳಿಯನ್ನು ಕಂಡು ಬೆಚ್ಚಿ ಕೂಡ ಬೀಳುವುದಿಲ್ಲ. ಎಲ್ಲೋ ಬೆರಳಣಿಯ ಚಿತ್ರಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ..
ಉಳಿಯುತ್ತವೆ. ನೋಡುಗರ ಎದೆಬಡಿತವನ್ನು ಹೆಚ್ಚಿಸುತ್ತವೆ. ಇದೇ ಸಾಲಿನಲ್ಲಿ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದ ಚಿತ್ರ ವಶ್. ಕೃಷ್ಣದೇವ್ ಯಾಜ್ಞಿಕ್ ನಿರ್ದೇಶನದಲ್ಲಿ 2023ರಲ್ಲಿ ಬಂದಿದ್ದ ಈ ಚಿತ್ರ ಹಲವರಿಗೆ ಹುಚ್ಚಿಡಿಸಿತ್ತು. ಮೂಲ ಭಾಷೆ ಗುಜರಾತಿಯಾಗಿದ್ದರು ಹಲವರು ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ಮುಗಿ ಬಿದ್ದು ನೋಡಿದ್ದರು.

ಪ್ರೇಕ್ಷಕರ ಹೃದಯ ಮಾತ್ರವಲ್ಲದೇ ವಿಮರ್ಷಕರ ಚಿತ್ತವನ್ನು ''ವಶ್'' ಕದ್ದಿತ್ತು. 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಗುಜರಾತಿ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಪಡೆದಿತ್ತು. ಚಿತ್ರದಲ್ಲಿನ ಅಭಿನಯಕ್ಕಾಗಿ ಜಾನಕಿ ಬೋಡಿವಾಲಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಕೂಡ ನೀಡಲಾಗಿತ್ತು.
ಇದಾದ ನಂತರ ಇದೇ ಚಿತ್ರವನ್ನು ಹಿಂದಿಗೆ ವಿಕಾಸ್ ಬಹ್ಲ್ ''ಶೈತಾನ್'' ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಅಜಯ್ ದೇವಗನ್.. ಆರ್ ಮಾಧವನ್.. ಜ್ಯೋತಿಕಾ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಮೂಲ ಗುಜರಾತಿಯ ''ವಶ್'' ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರನ್ನು ಮಂತ್ರಮುಗ್ದಗೊಳಿಸಿದ್ದ ಜಾನಕಿ ಬೋಡಿವಾಲಾ ಕೂಡ ''ಶೈತಾನ್'' ಚಿತ್ರದಲ್ಲಿಯೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿಯೇ ''ಶೈತಾನ್'' ₹ 147.97 ಕೋಟಿಯನ್ನು ಗಳಿಸಿತ್ತು. ''ಶೈತಾನ್'' ಚಿತ್ರಕ್ಕೆ ಸಿಕ್ಕ ಈ ಗೆಲುವು ಆ ನಂತರ ''ವಶ್-2'' ಚಿತ್ರಕ್ಕೆ ಮುನ್ನುಡಿ ಬರೆಯಿತು.
ಮೊದಲ ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣದೇವ್ ಯಾಜ್ಞಿಕ್ ನಿರ್ದೇಶನದಲ್ಲಿಯೇ ಮೂಡಿ ಬಂದ ''ವಶ್-ಲೆವಲ್ 2'' ಚಿತ್ರದಲ್ಲಿ ಜಾನಕಿ ಬೋಡಿವಾಲಾ ಅವರೇ ಮತ್ತೊಮ್ಮೆ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಮೊದಲ ಭಾಗಕ್ಕೂ ಮತ್ತು ಎರಡನೇ ಭಾಗಕ್ಕೂ ಕಥೆ ಇಲ್ಲಿ ಲಿಂಕ್ ಮಾಡಲಾದ ಹಿನ್ನೆಲೆ ಕುತೂಹಲ ಹಲವರಲ್ಲಿತ್ತು. ಕಳೆದ ಆಗಸ್ಟ್ 27ರಂದು ತೆರೆಗೆ ಬಂದ ಈ ಚಿತ್ರಕ್ಕೆ ಅಷ್ಟೇ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು.

ಇಂತಹ ''ವಶ್-2'' ಚಿತ್ರ ಇದೀಗ ಸದ್ದು ಗದ್ದಲ ಇಲ್ಲದೇ ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದು ರಾತ್ರಿ ಹನ್ನೆರಡು ಗಂಟೆಯ ನಂತರ (ಅಕ್ಟೋಬರ್ 22) ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಘೋಷಣೆಯನ್ನು ಮಾಡಿರುವ ನೆಟ್‌ಫ್ಲಿಕ್ಸ್ ಈ ಬಾರಿ ಬದುಕುಳಿಯುವುದು ತುಂಬಾ ಕಷ್ಟ. ''ವಶ್-ಲೆವಲ್ 2'' ನೋಡುವುದನ್ನು ಮರೆಯಬೇಡಿ ಎಂದು ಹೇಳಿದೆ.
ಇನ್ನು ಇದು ಪ್ಯಾನ್ ಇಂಡಿಯಾ ಕಾಲ. ಪ್ರತಿಯೊಬ್ಬರ ಚಿತ್ರಗಳು ಕೂಡ ಈಗ ಎಲ್ಲ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿವೆ. ಆದರೆ.. ''ವಶ್-2'' ಚಿತ್ರವನ್ನು ಮಾತ್ರ ಎಲ್ಲ ಭಾಷೆಯಲ್ಲಿ ಬಿಡುಗಡೆ ಮಾಡಿರಲಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಕೂಡ ಬಿಡುಗಡೆ ಮಾಡಿಲ್ಲ. ಮೂಲ ಗುಜರಾತಿ ಭಾಷೆಯ ಈ ಚಿತ್ರವನ್ನು ಕೇವಲ ಹಿಂದಿಗೆ ಡಬ್ ಮಾಡಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಗುಜರಾತಿ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಈ ಚಿತ್ರವನ್ನು ನೋಡುವ ಅವಕಾಶ ಇದೆ.
ಒಟ್ನಲ್ಲಿ ಸದ್ಯ ಹಲವರ ಹೃದಯ ಗೆದ್ದು, ಹಾರರ್ ಜಾನರ್ ಚಿತ್ರಗಳಲ್ಲಿ ಹೊಸದೊಂದು ದಾಖಲೆಯನ್ನು ಎರಡು ವರ್ಷದ ಹಿಂದೆ ಬರೆದಿದ್ದ ''ವಶ್'' ಚಿತ್ರದ ಮುಂದುವರೆದ ಭಾಗ ಈಗ ಓಟಿಟಿಗೆ ಬಂದಿದೆ. ಆಸಕ್ತ ಹಾರರ್ ಸಿನಿಮಾ ಆಸಕ್ತರು ನೆಟ್‌ಫ್ಲಿಕ್ಸ್‌ನಲ್ಲಿ ನಾಳೆಯಿಂದ ( ಅಕ್ಟೋಬರ್ 22) ನೋಡಬಹುದು.


Click it and Unblock the Notifications











