₹300 ಕೋಟಿ ಕೊಳ್ಳೆ ಹೊಡೆದ 'ಸಂಕ್ರಾಂತಿಕಿ ವಸ್ತುನ್ನಾಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ?
ಈ ವರ್ಷ ಸುಗ್ಗಿ ಸಂಭ್ರಮದಲ್ಲಿ ಬಂದ ದೊಡ್ಡ ಸಿನಿಮಾಗಳು ಮುಗ್ಗರಿಸಿದ್ದವು. ಸಣ್ಣ ಸಿನಿಮಾ ಎಂದುಕೊಂಡಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ಗೆದ್ದು ಬೀಗಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ವಿಕ್ಟರಿ ವೆಂಕಟೇಶ್ ಕಾಮಿಡಿ ಕಿಕ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸಿನಿಮಾ 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅನಿಲ್ ರಾವಿಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಜನವರಿ 14ರಂದು ತೆರೆಗೆ ಬಂದಿತ್ತು. ಮೊದಲ ದಿನದಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಹಾಗೂ ಬಾಲಕೃಷ್ಣ ನಟನೆಯ 'ಡಾಕು ಮಹಾರಾಜ್' ಸಿನಿಮಾಗಳು ಸೋತ ಬಳಿಕ ವೆಂಕಟೇಶ್ ಸಿನಿಮಾ ನೋಡಲು ಪ್ರೇಕ್ಷಕರು ಫ್ಯಾಮಿಲಿ ಸಮೇತ ಚಿತ್ರಮಂದಿರಗಳಿಗೆ ಹೋಗಿದ್ದರು. ಸಿಂಪಲ್ ಕಥೆಯ ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ರಂಜಿಸಿತ್ತು.

ನಿವೃತ್ತ ಡಿಸಿಪಿ ರಾಜು ಮದುವೆ ಆಗಿ ಪತ್ನಿಯ ಊರಿನಲ್ಲೇ ಸೆಟ್ಲ್ ಆಗಿರುತ್ತಾನೆ. ಆದರೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಎಸಿಪಿ ಮೀನಾಕ್ಷಿ ಜೊತೆ ಆತನಿಗೆ ಲವ್ ಬ್ರೇಕಪ್ ಆಗಿರುತ್ತದೆ. ಮುಂದೆ ಸರ್ಕಾರ ಹಾಗೂ ಮೀನಾಕ್ಷಿ ಸಂಕಷ್ಟಕ್ಕೆ ಸಿಲುಕಿದಾಗ ಒಂದು ಕಿಡ್ನ್ಯಾಪ್ ಪ್ರಕರಣದ ಭೇದಿಸಲು ರಾಜು ಸಹಾಯ ಕೇಳುತ್ತಾರೆ. ಆದರೆ ರಾಜುಗೆ ಮದುವೆ ಆಗಿದೆ ಎನ್ನುವ ವಿಚಾರ ತಿಳಿದ ಬಳಿಕ ಮೀನಾಕ್ಷಿ ಪ್ರತಿಕ್ರಿಯೆ ಹೇಗಿರುತ್ತದೆ? ರಾಜು ಆಕೆಗೆ ಸಹಾಯ ಮಾಡಲು ಒಪ್ಪುತ್ತಾನಾ? ಅದಕ್ಕೆ ಆತನ ಪತ್ನಿ ಭಾಗ್ಯ ಇಡುವ ಷರತ್ತು ಏನು? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ.
ಲಾಜಿಕ್ ಇಲ್ಲದೇ ಬರೀ ಪ್ರೇಕ್ಷಕರನ್ನು ರಂಜಿಸಬೇಕು ಎಂದು ಮಾಡಿರುವ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ'. ಆ ಪ್ರಯತ್ನದಲ್ಲಿ ಚಿತ್ರತಂಡ ಗೆದ್ದಿತ್ತು. ವೆಂಕಟೇಶ್ ಪತ್ನಿ ಪಾತ್ರದಲ್ಲಿ ಐಶ್ವರ್ಯ ರಾಜೇಶ್, ಮಾಜಿ ಗೆಳತಿ ಪಾತ್ರದಲ್ಲಿ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಬಾಲನಟ ಮಾಸ್ಟರ್ ರೇವಂತ್ ಅಭಿನಯದ ಚಿತ್ರದ ಹೈಲೆಟ್. ಸಂಕ್ರಾಂತಿ ಸಂಭ್ರಮದಲ್ಲಿ ಹಬ್ಬ ಮುಗಿಸಿ ಫ್ಯಾಮಿಲಿ ಸಮೇತ ಸಿನಿಮಾ ನೋಡುವ ತೆಲುಗು ಪ್ರೇಕ್ಷಕರು ಬಯಸುತ್ತಾರೆ. ಈ ಬಾರಿ ಆ ರೀತಿ ನೋಡಿ ಎಂಜಾಯ್ ಮಾಡಿದ ಸಿನಿಮಾ ಇದು.

'ಗೇಮ್ ಚೇಂಜರ್' ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ದಿಲ್ ರಾಜು ಈ ಚಿತ್ರಕ್ಕೂ ಹಣ ಹೂಡಿದ್ದರು. ನಿರ್ಮಾಪಕರು ಮಾತ್ರವಲ್ಲ ವಿತರಕರು, ಪ್ರದರ್ಶಕರು ಎಲ್ಲರಿಗೂ 'ಸಂಕ್ರಾಂತಿಕಿ ವಸ್ತುನ್ನಾಂ' ಸಕ್ಸಸ್ ಖುಷಿ ತಂದಿದೆ. ಇತ್ತೀಚೆಗೆ ನಿರ್ಮಾಪಕರ ಜೊತೆ ಪ್ರದರ್ಶನಕರು ಸುದ್ದಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡಿದ್ದರು. ಅಂದಾಜು 50 ಕೋಟಿ ರೂ. ಬಜೆಟ್ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಬೇರೆ ಭಾಷೆಗಳಿಗೆ ಡಬ್ ಆಗದೇ ಬರೀ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿದೆ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ದಾಖಲೆ ತನ್ನದಾಗಿಸಿಕೊಂಡಿದೆ. 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಮುಂದಿನ ವಾರವೇ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ವಾದವೂ ಇದೆ.
3ನೇ ವಾರವೂ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ. ಯಾವುದೇ ದೊಡ್ಡ ಸಿನಿಮಾಗಳು ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಇನ್ನು ಎರಡ್ಮೂರು ವಾರ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಓಟಿಟಿಗೆ ಬರಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ವಿಶೇಷ ಸೂಚನೆ: 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಜೀ5 ನೀಡಿಲ್ಲ. ಬರೀ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ರಿಲೀಸ್ ಡೇಟ್ ಬಗ್ಗೆ ಗುಲ್ಲಾಗಿದೆ.


Click it and Unblock the Notifications











