Kingdom Ott: ಓಟಿಟಿಗೆ ವಿಜಯ್ ದೇವರಕೊಂಡ 'ಕಿಂಗ್ಡಮ್'; ಕನ್ನಡದಲ್ಲೇ ನೋಡಿ
ಭಾರೀ ನಿರೀಕ್ಷೆ ಹುಟ್ಟಾಕುವ ದೊಡ್ಡ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಆದರೆ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾಗಳು ಗೆಲ್ಲುತ್ತಿವೆ. ವಿಜಯ್ ದೇವರಕೊಂಡ ನಟನೆಯ 'ಕಿಂಗ್ಡಮ್' ಕೂಡ ವರ್ಷದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿತ್ತು. ಜುಲೈ 31ಕ್ಕೆ ತೆರೆಗೆ ಬಂದಿದ್ದ ಸ್ಪೈ ಆಕ್ಷನ್ ಥ್ರಿಲ್ಲರ್ ಸೋಲುಂಡಿತ್ತು.
ಮೊದಲ ದಿನವೇ ರಶ್ಮಿಕಾ ಮಂದಣ್ಣ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 'ನಾವು ಗೆದ್ದುಬಿಟ್ವಿ' ಅಂತ ಪೋಸ್ಟ್ ಕೂಡ ಮಾಡಿದ್ದರು. ಆದರೆ ಸಿನಿಮಾ ಮಾತ್ರ ಗೆಲುವಿನ ದಡ ಸೇರುವಲ್ಲಿ ವಿಫಲವಾಗಿತ್ತು. ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಲ್ಲರಿಗೂ ನಷ್ಟ ತಂದೊಡ್ಡಿತ್ತು. ಇದೀಗ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ. ಅಧಿಕೃತವಾಗಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಗೌತಮ್ ತಿನ್ನನೂರಿ ನಿರ್ದೇಶನ 'ಕಿಂಗ್ಡಮ್' ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಅಂದಾಜು 130 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾತ್ರ ಮಾಡಿದ್ದಾಗಿ ವರದಿಯಾಗಿತ್ತು. ವಿಜಯ್ ದೇವರಕೊಂಡ ಜೋಡಿಯಾಗಿ ಭಾಗ್ಯಶ್ರೀ ಬ್ರೋಸ್ ಮಿಂಚಿದ್ದರು. ಸತ್ಯದೇವ್, ಮನೀಶ್ ಚೌಧರಿ, ರೋಹಿಣಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಇದು 'ಕೆಜಿಎಫ್' ಸ್ಟೈಲ್ ಆಕ್ಷನ್ ಸಿನಿಮಾ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದ 'ಲೈಗರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಬಳಿಕ ಒಂದೊಳ್ಳೆ ಬ್ರೇಕ್‌ಗಾಗಿ ವಿಜಯ್ ಕಾಯುತ್ತಿದ್ದಾರೆ. ಬಳಿಕ ಬಂದ 'ಖುಷಿ' ಕೂಡ ಸಂತಸ ತರಲಿಲ್ಲ. ಈಗ 'ಕಿಂಗ್ಡಮ್' ಕಥೆ ಕೂಡ ಹೀಗೆ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದವರು ಈಗ ಓಟಿಟಿಯಲ್ಲಿ ನೋಡಬಹುದು. ಆಗಸ್ಟ್ 17ಕ್ಕೆ(ಬುಧವಾರ) ಗಣೇಶ ಹಬ್ಬದ ಸಂಭ್ರಮದಲ್ಲಿ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
'ಕಿಂಗ್ಡಮ್' ಗ್ಯಾಂಗ್‌ಸ್ಟರ್ ಸಿನಿಮಾ. ಚಿಕ್ಕಂದಿನಲ್ಲೇ ದೂರಾ ಅಣ್ಣ ಶಿವ(ಸತ್ಯದೇವ್)ಗಾಗಿ ಸೂರಿ(ವಿಜಯ್ ದೇವರಕೊಂಡ) ಹುಡುಕಾಟ ನಡೆಸುತ್ತಿರುತ್ತಾನೆ. ಒಮ್ಮೆ ಪೊಲೀಸ್ ಅಧಿಕಾರಿ ಜೊತೆ ಕಿರಿಕ್ ಆಗಿ ಸೂರಿ ವಿಚಾರಣೆ ಎದುರಿಸುವಂತಾಗುತ್ತಾರೆ. ಇದೇ ವೇಳೆ ಆತನಿಗೆ ಪೊಲೀಸ್ ಅಧಿಕಾರಿ ಒಂದು ಮಿಷನ್ ಒಪ್ಪಿಸುತ್ತಾರೆ. ಈ ಹಾದಿಯಲ್ಲೇ ತನ್ನ ಅಣ್ಣ ಸಿಗುತ್ತಾನೆ ಎಂದು ಒಪ್ಪಿಕೊಳ್ಳುತ್ತಾನೆ. ಮುಂದೆ ಶ್ರೀಲಂಕಾಗೆ ಹೋಗುವಂತಾಗುತ್ತದೆ. ಅಲ್ಲಿನ ಬುಡಕಟ್ಟು ಸಮುದಾಯ ಈತನಿಗಾಗಿ ಕಾಯುತ್ತಿರುತ್ತದೆ. ಅಷ್ಟಕ್ಕೂ ಸೂರಿ ಹಿನ್ನೆಲೆ ಏನು? ಆತನ ಅಣ್ಣ ಶಿವ ಆ ಜಾಗದಲ್ಲಿ ಯಾಕೆ ಸಿಲುಕಿಕೊಂಡಿರುತ್ತಾನೆ. ಆ ಬುಡಕಟ್ಟು ಜನಾಂಗದ ಹಿಂದಿನ ಕಥೆ ಏನು? ಸಿನಿಮಾ ನೋಡಿದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
'ಜೆರ್ಸಿ' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಗೌತಮ್ ತಿನ್ನನೂರಿ ಮೇಲೆ ಭಾರೀ ನಿರೀಕ್ಷೆ ಇತ್ತು. ಟ್ರೈಲರ್‌ನಲ್ಲೇ 'ಕಿಂಗ್ಡಮ್' ಚಿತ್ರದ ಕಥೆ ಏನು ಎನ್ನುವುದನ್ನು ಹೇಳಿಬಿಟ್ಟಿದ್ದರು. ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ಹೇಗೆ ರಂಜಿಸುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿ ಸೊರಗಿತ್ತು. ವಿಜಯ್ ದೇವರಕೊಂಡ ಮತ್ತೊಮ್ಮೆ ಸೋಲಿನ ರುಚಿ ನೋಡುವಂತಾಯಿತು.
ಅನಿರುದ್ಧ್ ರವಿಚಂದ್ರನ್ ಮ್ಯೂಸಿಕ್ ಕೂಡ 'ಕಿಂಗ್ಡಮ್' ಚಿತ್ರವನ್ನು ಗೆಲ್ಲಿಸಲಿಲ್ಲ. ಪಾತ್ರಕ್ಕಾಗಿ ವಿಜಯ್ ಬಹಳ ಶ್ರಮಪಟ್ಟಿದ್ದರು. ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿತ್ತು. ಒಟ್ಟಾರೆ ವೀಕೆಂಡ್ ಓಟಿಟಿಯಲ್ಲಿ 'ಕಿಂಗ್ಡಮ್' ಸಿನಿಮಾ ನೋಡಿದವರು ಏನಂತಾರೆ ಕಾದು ನೋಡಬೇಕಿದೆ.


Click it and Unblock the Notifications











