ಸದ್ದಿಲ್ಲದೇ ಓಟಿಟಿಗೆ ಬಂದಿದೆ ಮತ್ತೊಂದು ಕನ್ನಡ ಸಿನಿಮಾ; ಈಗ್ಲೇ ನೋಡಿ
ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡು ಕೊಳ್ಳಲು ಮೀನಾಮೇಷ ಎಣಿಸುತ್ತಿವೆ. ಕೆಲವೊಮ್ಮೆ ದೊಡ್ಡ ಸಿನಿಮಾಗಳನ್ನು ಕೂಡ ಕ್ಯಾರೆ ಎನ್ನುವುದಿಲ್ಲ. ತೆಲುಗು, ಹಿಂದಿ, ಮಲಯಾಳಂನಲ್ಲಿ ಕೆಲ ಓಟಿಟಿ ಪ್ಲಾಟ್‌ಫಾರ್ಮ್‌ಗಳಿವೆ. ಚಿಕ್ಕ ಸಿನಿಮಾಗಳನ್ನು ಕೊಂಡುಕೊಳ್ಳುತ್ತಾರೆ. ಕನ್ನಡದಲ್ಲಿ ಓಟಿಟಿ ಆಪ್‌ಗಳಿಗೆ ಆದರೆ ದೊಡ್ಡದಾಗಿ ಜನರಿಗೆ ಗೊತ್ತಿಲ್ಲ.
ಕನ್ನಡದ ಸಾಕಷ್ಟು ಸಿನಿಮಾಗಳ ಓಟಿಟಿ ರೈಟ್ಸ್ ಇವತ್ತಿಗೂ ಮಾರಾಟವಾಗಿಲ್ಲ. ಇದೀಗ 2 ವರ್ಷಗಳ ಹಿಂದೆ ತೆರೆಕಂಡಿದ್ದ ಕನ್ನಡ ಸಿನಿಮಾವೊಂದು ಓಟಿಟಿಗೆ ಬಂದಿದೆ. ಅದು ಕೂಡ ಬಯೋಪಿಕ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ. ಸ್ಯಾಂಡಲ್‌ವುಡ್‌ನಲ್ಲಿ ಸಾಧಕರ ಜೀವನಾಧರಿತ ಸಿನಿಮಾಗಳು ತೆರೆಗೆ ಬಂದಿರುವುದು ಕಮ್ಮಿ. ಆದರೆ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ್ ಜೀವನವನ್ನಾಧರಿಸಿ 2 ವರ್ಷಗಳ ಹಿಂದೆ 'ವಿಜಯಾನಂದ' ಸಿನಿಮಾ ಬಂದಿತ್ತು.

ಸಾರಿಗೆ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರ್ ದೊಡ್ಡ ಹೆಸರು. ವಿಆರ್‌ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹಾಗೂ ಪುತ್ರ ಆನಂದ್ ಜೀವನಾಧರಿತ ಕಥೆಯನ್ನು ಸಿನಿಮಾ ಮಾಡಲಾಗಿತ್ತು. 50 ವರ್ಷಗಳ ಹಿಂದೆ ಒಂದು ಟ್ರಕ್‌ನಿಂದ ಆರಂಭಿಸಿ ಇದೀಗ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ ವಿಜಯ್ ಸಂಕೇಶ್ವರ್ ಸಾಧನೆ ಮಾಡಿದ್ದಾರೆ. ಅವರ ಬದುಕಿನ ರೋಷಕ ಕಥೆಯನ್ನು ಚಿತ್ರದಲ್ಲಿ ತೆರೆದಿಡಲಾಗಿತ್ತು.
ರಿಷಿಕಾ ಶರ್ಮಾ ನಿರ್ದೇಶನದ 'ವಿಜಯಾನಂದ' ಚಿತ್ರದಲ್ಲಿ ವಿಜಯ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ನಟಿಸಿದ್ದರು. ಪುತ್ರ ಆನಂದ್ ಸಂಕೇಶ್ವರ್ ಆಗಿ ಭರತ್ ಬೋಪಣ್ಣ ಬಣ್ಣ ಹಚ್ಚಿದ್ದರು. ಅನಂತ್ ನಾಗ್, ರವಿಚಂದ್ರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 2022, ಡಿಸೆಂಬರ್ 9ರಂದು ಸಿನಿಮಾ ಬಿಡುಗಡೆ ಆಗಿತ್ತು. ವಿಜಯ ಸಂಕೇಶ್ವರ್ ಸ್ಫೂರ್ತಿದಾಯಕ ಕಥೆ ಆಧರಿತ ಚಿತ್ರ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತ್ತು.

ಸದ್ದಿಲ್ಲದೇ 'ವಿಜಯಾನಂದ' ಸಿನಿಮಾ ಓಟಿಟಿಗೆ ಬಂದಿದೆ. ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕೇವಲ 14 ರೂಪಾಯಿ ಪಾವತಿಸಿ ವೀಕ್ಷಕರು ಆಪ್‌ನಲ್ಲಿ ಸಿನಿಮಾ ನೋಡಬಹುದು. ಅಮೇಜಾನ್, ಜೀ-5, ನೆಟ್‌ಫ್ಲಿಕ್ಸ್ ರೀತಿಯ ದೊಡ್ಡ ಓಟಿಟಿ ಸಂಸ್ಥೆಗಳು ಈ ಸಿನಿಮಾ ಕೊಂಡುಕೊಳ್ಳಲು ಮುಂದೆ ಬರಲಿಲ್ಲ ಎನ್ನಲಾಗ್ತಿದೆ. ಹೇಗಾದರೂ ಮಾಡಿ ಪ್ರೇಕ್ಷಕರಿಗೆ ಈ ಚಿತ್ರವನ್ನು ತಲುಪಿಸಬೇಕು ಎಂದು ನಮ್ಮ ಫ್ಲಿಕ್ಸ್‌ನಲ್ಲಿ ರಿಲೀಸ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ವಿಜಯ ಸಂಕೇಶ್ವರ್ ಅವರ ಸಾಧನೆಯ ಕಥೆಯನ್ನು ಕೇಳಿ ಸಾಕಷ್ಟು ಜನ ಅಚ್ಚರಿ ವ್ಯಕ್ತಪಡಿಸುದ್ದಾರೆ. ಇದು ಸಾಧ್ಯಾನಾ? ಎಂದು ಕೇಳುತ್ತಾರೆ. ಅಂತಹವರಿಗೆ ಇದು ಒಳ್ಳೆ ಅವಕಾಶ. ಅವರ ಕತೆಯನ್ನು ಈ ಚಿತ್ರದಲ್ಲಿ ದೃಶ್ಯ ರೂಪದಲ್ಲಿ ತೆರೆದಿಡಲಾಗಿದೆ. ಸಂಕೇಶ್ವರರ ಸಾಧನೆ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಓಟಿಟಿಯಲ್ಲಿ ಸಿನಿಮಾ ನೋಡಿ.


Click it and Unblock the Notifications











