ಮತ್ತೊಮ್ಮೆ ಅಜಿತ್ ಹಿಂದಿಕ್ಕಿ ದಳಪತಿ ವಿಜಯ್ ಹೊಸ ದಾಖಲೆ
ತಮಿಳು ಚಿತ್ರರಂಗದಲ್ಲಿ ನಟರಾದ ಅಜಿತ್ ಹಾಗೂ ವಿಜಯ್ ನಡುವೆ ಭಾರೀ ಪೈಪೋಟಿ ಇದೆ. ಇಬ್ಬರ ಅಭಿಮಾನಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಹಾಗಾಗಿ ಸಹಜವಾಗಿಯೇ ಇಬ್ಬರ ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಡುತ್ತಲೇ ಇರುತ್ತದೆ. ವಿಜಯ್ ಹಾಗೂ ಅಜಿತ್ ಸಿನಿಮಾಗಳ ಕಲೆಕ್ಷನ್, ಕ್ರೇಜ್ ಎಲ್ಲವನ್ನೂ ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಇದೀಗ ಓಟಿಟಿ ರೈಟ್ಸ್ ವಿಚಾರವೂ ಸೇರಿಕೊಂಡಿದೆ.
ಸ್ಟಾರ್ ನಟರ ದೊಡ್ಡ ಸಿನಿಮಾಗಳಿಗೆ ಓಟಿಟಿ ಸಂಸ್ಥೆಗಳು ಭಾರೀ ಮೊತ್ತದ ಹಣ ತೆತ್ತು ರೈಟ್ಸ್ ಕೊಂಡುಕೊಳ್ಳುತ್ತಿವೆ. ಕೆಲವೊಮ್ಮೆ ಚಿತ್ರಮಂದಿರಗಳಲ್ಲಿ ಗಳಿಸೋ ಹಣಕ್ಕಿಂತಲೂ ಓಟಿಟಿ ರೈಟ್ಸ್ ಮಾರಾಟದಿಂದ ಸಿಗುವ ಹಣ ಹೆಚ್ಚು ಎನ್ನುವಂತಾಗಿದೆ. ಜನ ಚಿತ್ರಮಂದಿರಗಳಿಗೆ ಹೋಗುವುದು ಬಿಟ್ಟು ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿ ಎಂದು ಕಾಯುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ರೈಟ್ಸ್ ದರ ಹೆಚ್ಚಾಗುತ್ತದೆ.

ಸದ್ಯ ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಇನ್ನು ವಿಜಯ್ ನಟನೆಯ 'ಜನ ನಾಯಕನ್' ಸಿನಿಮಾ ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಎರಡೂ ಸಿನಿಮಾಗಳ ಓಟಿಟಿ ರೈಟ್ಸ್ ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಅಜಿತ್ ನಟನೆಯ 'ವಿಡಾಮುಯರ್ಚಿ' ಸಿನಿಮಾ ಬಂದು 2 ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಇತ್ತೀಚೆಗೆ ಬಹಳ ಬೇಗ ಸಿನಿಮಾಗಳು ಓಟಿಟಿಗೆ ಬರ್ತಿವೆ. 50 ದಿನ ಪೂರೈಸುವ ಮುನ್ನವೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿವೆ. ಇದೆಲ್ಲದರ ಪರಿಣಾಮವಾಗಿ ಓಟಿಟಿ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಅಂದಾಜು 95 ಕೋಟಿ ರೂ. ಕೊಟ್ಟು 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ರೈಟ್ಸ್ ಕೊಂಡುಕೊಂಡಿದೆ ಎಂದು ಹೇಳಲಾಗುತ್ತಿದೆ.

ಅಮೇಜಾನ್ ಪ್ರೈಂ ಬರೋಬ್ಬರಿ 120 ಕೋಟಿ ರೂ. ಕೊಟ್ಟು 'ಜನ ನಾಯಕನ್' ಚಿತ್ರದ ರೈಟ್ಸ್ ಧಕ್ಕಿಸಿಕೊಂಡಿದೆ ಎಂದು ಗುಲ್ಲಾಗಿದೆ. ಆ ಲೆಕ್ಕದಲ್ಲಿ ಅಜಿತ್ ಸಿನಿಮಾಗಿಂತ 25 ಕೋಟಿ ರೂ. ಹೆಚ್ಚು ಮೊತ್ತಕ್ಕೆ ವಿಜಯ್ ಸಿನಿಮಾ ಓಟಿಟಿ ಡೀಲ್ ನಡೆದಿದೆ ಎಂದು ಚರ್ಚೆ ನಡೀತಿದೆ. ಕ್ರೇಜ್, ಕಲೆಕ್ಷನ್ ವಿಚಾರದಲ್ಲಿ ಅಜಿತ್ ಸಿನಿಮಾಗಳಿಗಿಂತ ವಿಜಯ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ. ಆದರೆ ಅಜಿತ್ ಅಭಿಮಾನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ನಮ್ಮ ನೆಚ್ಚಿನ ನಟ, ಆತನ ಸಿನಿಮಾಗಳೇ ಗ್ರೇಟ್ ಎನ್ನುತ್ತಿರುತ್ತಾರೆ.
'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಅದಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಜಿತ್ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡಿತ್ತು. ತ್ರಿಶಾ ನಾಯಕಿಯಾಗಿ ನಟಿಸ್ತಿದ್ದು ಜಿ. ಪಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ದಳಪತಿ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ಹಾಗಾಗಿ 'ಜನ ನಾಯಕನ್' ಆತನ ಕೊನೆ ಸಿನಿಮಾ ಎನ್ನಲಾಗ್ತಿದೆ. ಈ ಚಿತ್ರವನ್ನು ತಮ್ಮ ಪೊಲಿಟಿಕಲ್ ಜರ್ನಿಗೆ ವೇದಿಕೆ ಮಾಡಿಕೊಳ್ಳಲು ವಿಜಯ್ ಮುಂದಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸ್ತಿದ್ದು ಪ್ರಿಯಾಮಣಿ, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಶ್ರುತಿ ಹಾಸನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಬಜೆಟ್ 300 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ.
ಸ್ಟಾರ್ ನಟರ ದೊಡ್ಡ ಸಿನಿಮಾಗಳು ಕೆಲವೇ ತಿಂಗಳ ಅವಧಿಯಲ್ಲಿ ಬಿಡುಗಡೆ ಆಗುತ್ತಿರುವುದು ಓಟಿಟಿ ಸಂಸ್ಥೆಗಳಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ನೂರಾರು ಕೋಟಿ ಕೊಟ್ಟು ಹೆಚ್ಚು ಸಿನಿಮಾಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಷ್ಟು ಫಂಡ್ ಇಲ್ಲ ಎನ್ನುತ್ತಿದ್ದಾರೆ. 2 ತಿಂಗಳ ಅಂತರದಲ್ಲಿ ಅಜಿತ್ ನಟನೆಯ 2 ಸಿನಿಮಾ ರೈಟ್ಸ್ ಕೊಂಡು ಕೊಳ್ಳಲು ನೆಟ್‌ಫ್ಲಿಕ್ಸ್ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಬೇರೆ ಸಿನಿಮಾಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುವಂತಾಗಿದೆ.
Disclaimer: 'ಜನ ನಾಯಕನ್' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗಳ ಓಟಿಟಿ ರೈಟ್ಸ್ ದರದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಂತಾದೊಂದು ಚರ್ಚೆ ನಡೀತಿದೆ.


Click it and Unblock the Notifications











