ಓಟಿಟಿಯಲ್ಲಿ 'ಮಾದೇವ' ಸಿನಿಮಾ ಥಿಯೇಟರ್ ಪ್ರಿಂಟ್ ಸ್ಟ್ರೀಮಿಂಗ್; ಯಾಕೀ ಗೊಂದಲ?
ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಸಿನಿಮಾ ಗೆಲುವಿನ ದಡ ಸೇರಿತ್ತು. ಆದರೆ ಸಿನಿಮಾ ಓಟಿಟಿಗೆ ಬರುವುದು ಪದೇ ಪದೆ ತಡವಾಗುತ್ತಲೇ ಇದೆ. ಈಗಾಗಲೇ ಓಟಿಟಿಗೆ ಸಿನಿಮಾ ಬಂದಿದ್ದರೂ ಕೂಡ ಅದು ಥಿಯೇಟರ್ ಪ್ರಿಂಟ್ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿರ್ಮಾಪಕರ ಕಾರಣದಿಂದ ಹೀಗೆ ಆಗುತ್ತಿದೆ ಎಂದು ಹೇಳಲಾಗ್ತಿದೆ.
ನವೀನ್ ರೆಡ್ಡಿ ನಿರ್ದೇಶನದ 'ಮಾದೇವ' ಸಿನಿಮಾ ಜೂನ್ 6ರಂದು ತೆರೆಗೆ ಬಂದಿತ್ತು. ಸೋನಲ್ ಮಂಥೆರೋ ನಾಯಕಿಯಾಗಿ ನಟಿಸಿದ್ದ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಶ್ರುತಿ, ಮಾಲಾಶ್ರೀ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಂದಾಜು 6 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸಕ್ಸಸ್ ಕಂಡಿತ್ತು. ಆದರೆ ಚಿತ್ರದ ಓಟಿಟಿ ರೈಟ್ಸ್ ಬಗ್ಗೆ ಮಾತ್ರ ಇನ್ನು ಗೊಂದಲ ಮುಂದುವರೆದಿದೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಕಂಡು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಶೂಟ್ ಮಾಡಿ ಆನ್‌ಲೈನ್‌ನಲ್ಲಿ ಲೀಕ್ ಮಾಡುತ್ತಾರೆ. ಈ ಪೈರಸಿ ಕಾಪಿಯನ್ನೇ ಕೆಲವರು ನೋಡುತ್ತಾರೆ. ಓಟಿಟಿಯಲ್ಲಿ HD ಪ್ರಿಂಟ್ ಸ್ಟ್ರೀಮಿಂಗ್ ಆಗುತ್ತದೆ. ವಿಪರ್ಯಾಸ ಅಂದರೆ ಸಿನಿ ಬಜಾರ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 'ಮಾದೇವ' ಚಿತ್ರದ ಥಿಯೇಟರ್ ಪ್ರಿಂಟ್ ಅಂದರೆ ಪೈರಸಿ ಕಾಪಿ ರಿಲೀಸ್ ಆಗಿದೆ. ಇದು ಸಹಜವಾಗಿಯೇ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಓಟಿಟಿಯಲ್ಲೇ ಸಿನಿಮಾ ನೋಡಲು ಬಯಸುತ್ತಾರೆ. ಅದರಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದಿದ್ದರೆ ಓಟಿಟಿಯಲ್ಲಿ ಕಣ್ತುಂಬಿಕೊಳ್ಳಲು ಕಾಯುತ್ತಾರೆ. ಸಾಕಷ್ಟು ಜನ 'ಮಾದೇವ' ಚಿತ್ರದಲ್ಲಿ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದರು. ಎರಡೂವರೆ ತಿಂಗಳ ಬಳಿಕ ಓಟಿಟಿಗೆ ಬಂದರೂ ಥಿಯೇಟರ್ ಕಾಪಿ ನೋಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಿರ್ಮಾಪಕರು ಈಗಾಗಲೇ ಸಿನಿ ಬಜಾರ್ ಪ್ಲಾಟ್‌ಫಾರ್ಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದರೂ ಸಿನಿಮಾ ಬಿಡುಗಡೆಗೆ ಒಪ್ಪುತ್ತಿಲ್ಲ, ಹಾಗಾಗಿ ಪೈರಸಿ ಕಾಪಿ ಹಾಕಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ. ಸೆಪ್ಟೆಂಬರ್ 12ರಂದು ಸಿನಿಮಾ ಓಟಿಟಿಗೆ ಬರಬೇಕಿತ್ತು. ನಿರ್ಮಾಪಕರ ಅಸಹಕಾರದಿಂದ ಈ ರೀತಿ ಥಿಯೇಟರ್ ಪ್ರಿಂಟ್ ರಿಲೀಸ್ ಮಾಡಿದ್ದಾರೆ ಎನ್ನಲಾಗ್ತಿದೆ.
ನಾಯಕನಾಗಿ ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿದ್ದ ವಿನೋದ್ ಈ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಚಿತ್ರಕಥೆಯಲ್ಲಿ ತಂಡ ಎಡವಿದ್ರು ತಮ್ಮ ನಟನೆ ಮೂಲಕ ಚಿತ್ರವನ್ನು ವಿನೋದ್ ಗೆಲ್ಲಿಸಿದ್ದಾರೆ. ಯಶಸ್ವಿಯಾಗಿ ಸಿನಿಮಾ 50 ದಿನ ಪೂರೈಸಿತ್ತು.
ಚಿತ್ರದಲ್ಲಿ ಕೇಂದ್ರ ಕಾರಗೃಹದ ಹ್ಯಾಂಗ್‌ಮ್ಯಾನ್ ಪಾತ್ರದಲ್ಲಿ ವಿನೋದ್ ನಟಿಸಿದ್ದಾರೆ. ಮೃಗದಂತಹ ಮಾದೇವ ಬದುಕಿನ ಏರಿಳಿತಗಳ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕೇಶಬ ದೇವಸಂದ್ರ ನಿರ್ಮಾಣದ ಚಿತ್ರವನ್ನು ಜಯದೇವ್ ಫಿಲ್ಮ್ಸ್ ಸಂಸ್ಥೆ ವಿತರಣೆ ಮಾಡಿತ್ತು. ಪ್ರದ್ಯೋತ್ತನ್ ಸಂಗೀತ ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಚಿತ್ರಕ್ಕಿದೆ.
ಸದ್ಯ ಓಟಿಟಿಯಲ್ಲಿ 'ಮಾದೇವ' ಚಿತ್ರದ ಪೈರಸಿ ಕಾಪಿ ನೋಡಿ ಸಿನಿರಸಿಕರು ಬೇಸರಗೊಂಡಿದ್ದಾರೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿದು ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಬಲರಾಮನ ಆ ದಿನಗಳು ಹಾಗೂ ಲಂಕಾಸುರ ಎಂಬ ಮತ್ತೆರಡು ಸಿನಿಮಾಗಳಲ್ಲಿ ವಿನೋದ್ ಪ್ರಭಾಕರ್ ನಟಿಸುತ್ತಿದ್ದಾರೆ. ಒಟ್ಟಾರೆ ಕನ್ನಡ ಸಿನಿಮಾಗಳ ವಿಚಾರದಲ್ಲಿ ಓಟಿಟಿ ಸಂಸ್ಥೆಗಳ ತಾತ್ಸಾರ ಮುಂದುವರೆದಿದೆ. ಗೆಲ್ಲುವ ಸಿನಿಮಾಗಳನ್ನು ಓಟಿಟಿ ವೇದಿಕೆಗಳು ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗಾಗಿ ಸಣ್ಣ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವಂತಾಗಿದೆ.


Click it and Unblock the Notifications











