ಅಪ್ಪುವಿನ ಆರು ರತ್ನಗಳು: ವೂಟ್‌ನಲ್ಲಿ 'ಪುನೀತೋತ್ಸವ'
ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕುಟುಂಬ ವರ್ಗದವರು ಅಪ್ಪುವನ್ನು ಪರಿ-ಪರಿಯಾಗಿ ನೆನಪಿಸಿಕೊಂಡಿದ್ದಾರೆ. ಅಪ್ಪುವಿನ ಮೊದಲ ವರ್ಷದ ಪುಣ್ಯ ಸ್ಮರಣೆಗೆ ರಾಜ್ಯದಾದ್ಯಂತ ಹಲವು ರೀತಿಯ ಕಾರ್ಯಕ್ರಮಗಳು ನಡೆದಿವೆ.
ಎಲ್ಲರೂ ತಮ್ಮದೇ ರೀತಿಯಲ್ಲಿ ಅಪ್ಪುವನ್ನು ನೆನಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಅಪ್ಪು ನೆನಪಿನಾರ್ಥ 'ಗಂಧದ ಗುಡಿ' ಡಾಕ್ಯು-ಡ್ರಾಮಾ ಸಹ ಬಿಡುಗಡೆ ಆಗಿದೆ. ಇದರ ಜೊತೆಗೆ ಟಿವಿಗಳಲ್ಲಿ ಸಹ ಅಪ್ಪುವಿನ ಬಗ್ಗೆ ವಿಶೇಷ ಕಾರ್ಯಕ್ರಮ ಹಾಗೂ ಸಿನಿಮಾಗಳನ್ನು ಪ್ರದರ್ಶಿಸಲಾಗಿದೆ.
ಒಟಿಟಿ ವೂಟ್ ಸಹ ಅಪ್ಪುವಿನ ಪುಣ್ಯ ಸ್ಮರಣೆ ಅಂಗವಾಗಿ ಅಪ್ಪು ಅಭಿನಯದ ಆರು ಸಿನಿಮಾಗಳನ್ನು ವೀಕ್ಷಕರಿಗೆ ಲಭ್ಯವಾಗಿಸಿದೆ. ಪುನೀತ್ ನಮನದ ಭಾಗವಾಗಿ ಈ ಆರು ಸಿನಿಮಾಗಳನ್ನು ವೂಟ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದ್ದು, ಪುನೀತ್ ಚಿತ್ರನಮನದ ಆಕರ್ಷಕ ಪ್ರೋಮೊವನ್ನೂ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೊ ಪುನೀತ್ ಅಭಿನಯದ ಆರೂ ಸಿನಿಮಾಗಳ ದೃಶ್ಯಿಕೆಗಳ ಸುಂದರ ಹೊಂದಾಣಿಕೆಯ ಮೂಲಕ ಪ್ರೇಕ್ಷಕರನ್ನು ಅಪ್ಪು ಚಿತ್ರಲೋಕಕ್ಕೆ ಕರೆದುಕೊಂಡುಹೋಗುವಷ್ಟು ಭಾವಪೂರ್ಣವಾಗಿದೆ.

ವೂಟ್ ಸೆಲೆಕ್ಟ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಆರು ಸಿನಿಮಾಗಳೂ "ರಾಜರತ್ನ'ನ ಅಭಿನಯಪ್ರತಿಭೆಯ ಭಿನ್ನ ಆಯಾಮಗಳನ್ನು ತೋರಿಸುವಂತಿವೆ. 'ಅಪ್ಪು'ವಿನಲ್ಲಿ ಕಾಲೇಜ್‌ಬಾಯ್ ಆಗಿ, "ಅಭಿ'ಯಲ್ಲಿ ಅಮ್ಮನಿಗೆ ತಕ್ಕ ಮಗನಾಗಿ, "ನಮ್ಮ ಬಸವ'ದ ಮಾಸ್ ಲುಕ್‌ನಲ್ಲಿ, "ಆಕಾಶ್'ದಲ್ಲಿ ಹಾಸಿಗೆಯಿದ್ದಷ್ಟೇ ಕಾಲುಚಾಚುವ ಜವಾಬ್ದಾರಿಯುತ ಹುಡುಗನಾಗಿ, 'ಮೌರ್ಯ'ದಲ್ಲಿ ಕಿಕ್‌ಬಾಕ್ಸರ್ ಆಗಿ, 'ಅಜಯ್'ದಲ್ಲಿ ಕಬಡ್ಡಿ ಆಟಗಾರನಾಗಿ ಪುನೀತ್ ಅಭಿನಯವನ್ನು ನೋಡುವುದೇ ಒಂದು ಹಬ್ಬ. ಅಕ್ಟೋಬರ್ 28 ರಿಂದಲೇ ಈ ಆರು ಸಿನಿಮಾಗಳು ವೂಟ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
'777 ಚಾರ್ಲಿ' ಸೇರಿದಂತೆ ಕೆಲವು ಉತ್ತಮ ಕನ್ನಡ ಸಿನಿಮಾಗಳನ್ನು ವೂಟ್ ಒಳಗೊಂಡಿದ್ದು, ಇದೀಗ ಅಪ್ಪು ನಮನವನ್ನು ಹಮ್ಮಿಕೊಂಡಿರುವುದು ಅಭಿಮಾನಿಗಳಿಗೆ ಖುಷಿಯ ಸಂಗತಿ.


Click it and Unblock the Notifications











