ಓಟಿಟಿಯಲ್ಲಿ ಉಚಿತವಾಗಿ ಸಿಗಲಿದೆ ಟಾಮ್ ಕ್ರೂಸ್ 'ಮಿಷನ್ ಇಂಪಾಸಿಬಲ್: ಡೆಡ್ ರೆಕನಿಂಗ್- 1'
ಹಾಲಿವುಡ್ ಸಿನಿಮಾ ಪ್ರೇಕ್ಷಕರಿಗೆ 'ಮಿಷನ್ ಇಂಪಾಸಿಬಲ್' ಸರಣಿಯ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಈ ಆಕ್ಷನ್ ಅಡ್ವೆಂಚರಸ್ ಚಿತ್ರದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಈಗಾಗಲೇ ಹಲವು ಭಾಗಗಳಾಗಿ ಈ ಸಿನಿಮಾ ಬಂದು ಪ್ರೇಕ್ಷಕರನ್ನು ರಂಜಿಸಿದೆ. ಸರಣಿಯ 7ನೇ ಸಿನಿಮಾ ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಟಾಮ್ ಕ್ರೂಸ್, ಹೇಲಿ ಅಟ್ವೆಲ್ ಲೀಡ್ ರೋಲ್‌ಗಳಲ್ಲಿ ನಟಿಸಿದ ಈ ಚಿತ್ರಕ್ಕೆ ಭಾರತದಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ವಿಶ್ವದಾದ್ಯಂತ 4600 ರೂ. ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ 'ಮಿಷನ್ ಇಂಪಾಸಿಬಲ್- 7' ಈಗ ಓಟಿಟಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಈಗಾಗಲೇ ಸಿನಿಮಾ ನೋಡದವರಿಗೆ ನೋಡಿದವರಿಗೆ ಈ ವಿಚಾರ ಖುಷಿ ತಂದಿದೆ. ಅಕ್ಟೋಬರ್‌ನಲ್ಲೇ ಸಿನಿಮಾ ಓಟಿಟಿಯಲ್ಲಿ ಬಾಡಿಗೆಗೆ ಲಭ್ಯವಾಗಿತ್ತು. ಇದೀಗ ಹೆಚ್ಚಿನ ಹಣ ವ್ಯಯಿಸದೇ ಚಂದಾದಾರರೆಲ್ಲಾ ವೀಕ್ಷಿಸುವ ಅವಕಾಶ ಸಿಗುತ್ತಿದೆ.

ಜನವರಿ 11ರಿಂದ ಅಮೇಜಾನ್ ಪ್ರೈಂನಲ್ಲಿ 'ಮಿಷನ್ ಇಂಪಾಸಿಬಲ್: ಡೆಡ್ ರೆಕನಿಂಗ್: ಭಾಗ 1' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇಂಗ್ಲೀಷ್ ಜೊತೆಗೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ಡಬ್ ಆಗಿದ್ದು ಎಲ್ಲಾ ವರ್ಷನ್ ಓಟಿಟಿಯಲ್ಲಿ ಸಿಗಲಿದೆ. ಕನ್ನಡಕ್ಕೆ ಮಾತ್ರ ಸಿನಿಮಾ ಡಬ್ ಆಗಲಿಲ್ಲ. ಸರಣಿಯ 7ನೇ ಚಿತ್ರವನ್ನು ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಅದರಲ್ಲಿ ಮೊದಲ ಭಾಗ ಈಗ ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆಗಿ ಓಟಿಟಿಗೆ ಬರಲು ಸಜ್ಜಾಗಿದೆ.
'ಮಿಷನ್ ಇಂಪಾಸಿಬಲ್ : ಡೆಡ್ ರೆಕನಿಂಗ್: ಭಾಗ 1' ಚಿತ್ರದ ಕಥೆ ಏನು ಎಂದು ನೋಡುವುದಾಗದರೆ, ಸಮುದ್ರದಲ್ಲಿ ಜಲಾಂತರ್ಗಾಮಿ ಅನಿರೀಕ್ಷಿತ ರೀತಿಯಲ್ಲಿ ಮುಳುಗುತ್ತದೆ. ಆದರೆ ಇದರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) 'ದಿ ಎಂಟಿಟಿ'ನ ಮೂಲ ಕೋಡ್ ಇರುತ್ತದೆ . ಆದರೆ ಅದನ್ನು ನಿಯಂತ್ರಿಸಲು ಒಂದು 'ಕೀ' ಬೇಕು. ಶತ್ರುಗಳು ಆ 'ಕೀ' ಸಿಕ್ಕರೆ ಜಗತ್ತನ್ನು ತಮ್ಮ ಹಿಡಿತಕ್ಕೆ ಪಡೆಯಬಹುದು ಎಂದು ಪ್ರಯತ್ನಿಸುತ್ತಾರೆ. ಈ ಹಾದಿಯಲ್ಲಿ ಎಥಾನ್ ಹಂಟ್ (ಟಾಮ್ ಕ್ರೂಸ್) ಶತ್ರುಗಳ ಕೈಗೆ ಬೀಳುವ ಆ 'ಕೀ' ಸಿಗದಂತೆ ಜಗತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸುಕೊಳ್ಳುತ್ತಾನೆ. ಆ 'ಕೀ'ಗಾಗಿ ತನ್ನ ತಂಡದೊಂದಿಗೆ ಎಥಾನ್ ಹಂಟ್ ಮಾಡಿದ ಸಾಹಸಗಳು ಏನು? ಈ ಪ್ರಕ್ರಿಯೆಯಲ್ಲಿ ಆತ ಏನೆಲ್ಲಾ ಸವಾಲುಗಳನ್ನು ಎದುರಿಸಿದ? ಕಣ್ಣಿಗೆ ಕಾಣಿಸದ ಶತ್ರುಗಳನ್ನು ಹೇಗೆ ಸದೆಬಡೆಯುತ್ತಾರೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು.
ಕ್ರಿಸ್ಟೋಫರ್ ಮೆಕ್‌ಕ್ವಾರಿ ನಿರ್ದೇಶಿಸಿದ ಈ ಹಾಲಿವುಡ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ವನೆಸ್ಸಾ ಕಾರ್ಬಿ, ಸೈಮನ್ ಪೆಗ್, ರೆಬೆಕ್ಕಾ, ಹೆನ್ರಿ ಚೆರ್ನಿ, ಪೋಮ್, ಇಸೈ ಮೊರೇಲ್ಸ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನಟ ಟಾಮ್ ಕ್ರೂಸ್ ಮತ್ತು ನಿರ್ದೇಶಕ ಕ್ರಿಸ್ಟೋಫರ್ ಮೆಕ್ವಾರಿ ಜಂಟಿಯಾಗಿ 'ಮಿಷನ್ ಇಂಪಾಸಿಬಲ್- 7' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಟಾಮ್ ಕ್ರೂಸ್ ನಟನೆಗೆ ಈಗಾಗಲೇ ಸಿನಿರಸಿಕರು ಫಿದಾ ಆಗಿದ್ದಾರೆ. ವಯಸ್ಸು 60 ದಾಟಿದರೂ ಟಾಮ್ ಸ್ಟಂಟ್ಸ್ ನೋಡಿದರೆ ಎಂತಹವರು ಬೆರಗಾಗುತ್ತಾರೆ. 'ಮಿಷನ್ ಇಂಪಾಸಿಬಲ್' ಸರಣಿಯಲ್ಲಿ ಟಾಮ್ ಕ್ರೂಸ್ ಹೊರತುಪಡಿಸಿ ಅಭಿಮಾನಿಗಳು ಬೇರೆ ನಟನನ್ನು ಊಹಿಸಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ. ಇನ್ನು ಈ ಸರಣಿಯ 8ನೇ ಸಿನಿಮಾ ಮುಂದಿನ ವರ್ಷ ಮೇ 25ಕ್ಕೆ ತೆರೆಗೆ ಬರಲಿದೆ. ಆ ಚಿತ್ರವನ್ನು ಟಾಮ್ ನಿಮಿಸಿ, ನಟಿಸುತ್ತಿದ್ದಾರೆ.


Click it and Unblock the Notifications











