twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಪ್ರತ್ಯೇಕ ಒಟಿಟಿ ನಿರ್ಮಾಣ ಸಾಧ್ಯವಿಲ್ಲವೇ? ಸವಾಲುಗಳೇನು?

    |

    ಒಟಿಟಿಗಳು ಚಿತ್ರಮಂದಿರಗಳಿಗೆ ಪರ್ಯಾಯ ಆಗಬಲ್ಲವೆ? ಎಂಬ ಚರ್ಚೆ ಈಗಾಗಲೇ ಆರಂಭವಾಗಿವೆ. ಈ ಹಂತದಲ್ಲಿ ಈ ಪ್ರಶ್ನೆ ಉತ್ಪ್ರೇಕ್ಷೆ ಎನಿಸಬಹುದಾದರೂ ಒಟಿಟಿಗಳು ಬೆಳೆಯುತ್ತಿರುವ ವೇಗ ಗಮನಿಸಿದರೆ ಇನ್ನೊಂದು ದಶಕದಲ್ಲಿ ಇದು ದೊಡ್ಡ ಪ್ರಶ್ನೆಯಾಗಿ ಎದುರು ನಿಲ್ಲುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    ಕೊರೊನಾ ಆರಂಭಕ್ಕೆ ಮುನ್ನ ಆಮೆ ವೇಗದಲ್ಲಿದ್ದ ಒಟಿಟಿಗಳು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಚಿರತೆಗಳಾದವು. ಒಂದು ವರ್ಷದ ಅವಧಿಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್, ಹಾಟ್‌ಸ್ಟಾರ್‌ ನಂಥಹಾ ದೈತ್ಯ ಒಟಿಟಿಗಳು ನೂರಾರು ಪಟ್ಟು ಬಳಕೆದಾರರನ್ನು ಹೆಚ್ಚಿಸಿಕೊಂಡು ಮುಂದೆ ಸಾಗುತ್ತಿವೆ. ಭಾರತದಲ್ಲೂ ಸಹ.

    ಭಾರತದಂಥಹಾ ಬಹು ಭಾಷೆಯ, ಬಹು ಸಂಸ್ಕೃತಿಯ ಜನರ ಅಭಿರುಚಿಗಳು ಸಹ ಭಿನ್ನ. ಹಾಗಾಗಿಯೇ ಭಾರತೀಯ ಸಿನಿಮಾರಂಗವೆಂಬ ಮರಕ್ಕೆ ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್, ಗುಜರಾತಿ, ಮರಾಠಿ, ಭೋಜಪುರಿ, ಬಾಲಿವುಡ್ ಹೀಗೆ ಹಲವು ಕೊಂಬೆಗಳು. ಪ್ರತಿಯೊಂದು ಸಹ ಒಂದಕ್ಕಿಂತಲೂ ಒಂದು ಭಿನ್ನ. ಒಟಿಟಿ ವಿಷಯದಲ್ಲಿಯೂ ಸಹ ಯಾವುದೋ ಒಂದೆರಡು ಒಟಿಟಿಗಳು ನೀಡುವ ಕಂಟೆಂಟ್ ದೇಶದ ಎಲ್ಲ ಜನರ ಅಭಿರುಚಿಗೆ ಹೊಂದುತ್ತದೆ ಎನ್ನಲಾಗದು. ಹಗಾಗಿಯೇ ಹಲವು ರಾಜ್ಯಗಳು ತಮ್ಮ ಪ್ರಾದೇಶಿಕತೆಗೆ ಅನುಗುಣವಾಗಿ ತಮ್ಮದೇ ಆದ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೊಂದಿವೆ.

    ಬಂಗಾಳಕ್ಕೆ 'ಹೊಯ್‌ಚೋಯ್', ತೆಲುಗಿಗೆ 'ಆಹಾ', ಮಲಯಾಳಂಗೆ 'ನೀ ಸ್ಟ್ರೀಮ್', 'ಕೂಡೆ', 'ಊರ್ವಶಿ', ತಮಿಳಿಗೆ ರೆಗಾಲ್ ಟಾಕೀಸ್, ಸನ್ ನೆಕ್ಸ್ಟ್, ಮರಾಠಿಗೆ ಪ್ಲ್ಯಾನೆಟ್ ಮರಾಠಿ, ಗುಜರಾತಿಗೆ ಸಿಟಿ ಶೋರ್ ಟಿವಿ ಹೀಗೆ. ಆದರೆ ಕನ್ನಡಕ್ಕೆ ತನ್ನದೇ ಆದ ಪ್ರಬಲ, ಜನಪ್ರಿಯ ಒಟಿಟಿ ಒಂದು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ಹಲವು ಉತ್ತರಗಳು ಸಿಗುತ್ತವೆ.

    ಒಟಿಟಿ ನಿರ್ಮಾಣಕ್ಕೆ ಅಡ್ಡಿ ಏನು?

    ಒಟಿಟಿ ನಿರ್ಮಾಣಕ್ಕೆ ಅಡ್ಡಿ ಏನು?

    ಕನ್ನಡದ ಒಟಿಟಿ ನಿರ್ಮಾಣದ ಮಟ್ಟಿಗೆ ಮೊದಲಿಗೆ ಎದುರಾಗುವುದು ಬಂಡವಾಳದ ಸಮಸ್ಯೆ. ಒಟಿಟಿ ಫ್ಲ್ಯಾಟ್‌ಫಾರ್ಮ್ ಒಂದನ್ನು ಪ್ರಾರಂಭ ಮಾಡುವುದು ಸುಲಭವಾದರೂ ಅದಕ್ಕೆ ಸಿನಿಮಾ, ವೆಬ್ ಸರಣಿ ಇತರೆ ಕಂಟೆಂಟ್‌ಗಳನ್ನು ಒದಗಿಸಲು ದೊಡ್ಡ ಬಾಬತ್ತಿನ ಕೆಲಸ. ಅದಲ್ಲದೆ ಪ್ರಬಲ, ಜನಪ್ರಿಯ ಒಟಿಟಿ ಕಟ್ಟಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆ ಇರುತ್ತದೆ. ಪ್ರಚಾರಕ್ಕಾಗಿಯೂ ದೊಡ್ಡ ಮಟ್ಟದ ಹಣ ಖರ್ಚಾಗುತ್ತದೆ. ಜೊತೆಗೆ ಹೂಡಿದ ಹಣ ಈಗಲೇ ಲಾಭವಾಗಿ ಬಂದು ಬಿಡುತ್ತದೆ ಎಂಬಂತೆಯೂ ಇಲ್ಲ. ಅದಕ್ಕಾಗಿ ಕಾಯಬೇಕು. ಈ ನಿರೀಕ್ಷಣೆ ಹಾಗೂ ಅದರ ಸುತ್ತ ಇರುವ ಜಂಜಾಟಗಳೇ ಕನ್ನಡದಲ್ಲಿ ಒಂದು ಪ್ರಬಲ ಒಟಿಟಿ ನಿರ್ಮಾಣಕ್ಕೆ ಪ್ರಥಮ ಅಡ್ಡಿಯಾಗಿರುವುದು. ಇದಕ್ಕೆ ಪೈರಸಿ ಸಮಸ್ಯೆಯನ್ನೂ ಸೇರಿಸಬಹುದು.

    ಅಮೆಜಾನ್, ನೆಟ್‌ಫ್ಲಿಕ್ಸ್‌ಗೆ ಸಿದ್ಧ ಗ್ರಾಹಕರಿದ್ದರು: ಹರೀಶ್ ಮಲ್ಯ

    ಅಮೆಜಾನ್, ನೆಟ್‌ಫ್ಲಿಕ್ಸ್‌ಗೆ ಸಿದ್ಧ ಗ್ರಾಹಕರಿದ್ದರು: ಹರೀಶ್ ಮಲ್ಯ

    ಅಮೆಜಾನ್, ನೆಟ್‌ಫ್ಲಿಕ್ಸ್‌ಗಳು ಒಟಿಟಿಗಳಾಗಿ ಸ್ಟ್ರೀಮಿಂಗ್ ಪ್ರಾರಂಭಿಸುವುದಕ್ಕೆ ಮುನ್ನವೇ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದು ಗ್ರಾಹಕರನ್ನು ಹಿಡಿದಿಟ್ಟುಕೊಂಡಿದ್ದವು. ನೆಟ್‌ಫ್ಲಿಕ್ಸ್‌ ತನ್ನ ಡಿವಿಡಿ ಗ್ರಾಹಕರನ್ನೇ ತನ್ನ ಚಂದಾದಾರನ್ನಾಗಿಸಿಕೊಂಡರೆ, ಅಮೆಜಾನ್ ಇ-ಕಾಮರ್ಸ್ ಸೈಟ್ ತನ್ನ ಗ್ರಾಹಕರನ್ನು ಚಂದಾದಾರನ್ನಾಗಿಸಿಕೊಂಡಿತು. ಆದರೆ ಈಗ ಸೊನ್ನೆಯಿಂದ ಒಟಿಟಿ ಪ್ರಾರಂಭ ಮಾಡಿ ಹೊಸದಾಗಿ ವೀಕ್ಷಕ ವರ್ಗ ಸೃಷ್ಟಿಸಿಕೊಳ್ಳುವುದು ಸುಲಭದ ಮಾತಲ್ಲ ಎಂದು ಗುರುತಿಸಿದವರು ಸಿನಿಮಾ ಕುತೂಹಲಿ ಹರೀಶ್ ಮಲ್ಯ.

    ನಿರ್ಮಾಣ ಸಂಸ್ಥೆ, ಸ್ಟಾರ್ ನಟರು ಮನಸ್ಸು ಮಾಡಬೇಕು: ಹರೀಶ್ ಮಲ್ಯ

    ನಿರ್ಮಾಣ ಸಂಸ್ಥೆ, ಸ್ಟಾರ್ ನಟರು ಮನಸ್ಸು ಮಾಡಬೇಕು: ಹರೀಶ್ ಮಲ್ಯ

    ಕನ್ನಡದಲ್ಲಿ ಜನಪ್ರಿಯ ಒಟಿಟಿಯೊಂದನ್ನು ಹುಟ್ಟುಹಾಕುವ ಛಾತಿ ಇರುವ ಕೆಲವರಿದ್ದಾರೆ. ಹೊಂಬಾಳೆ ಫಿಲಮ್ಸ್, ರಾಕ್‌ಲೈನ್ ವೆಂಕಟೇಶ್, ಪುನೀತ್ ರಾಜ್‌ಕುಮಾರ್ ಇನ್ನಿತರೆ ಹಳೆಯ, ಈಗಲೂ ಚಾಲ್ತಿಯಲ್ಲಿರುವ ಸಿನಿಮಾ ನಿರ್ಮಾಣ ಸಂಸ್ಥೆಗಳು ಮನಸ್ಸು ಮಾಡಿದರೆ ಒಟಿಟಿ ನಿರ್ಮಾಣವೇನೋ ಆಗಿಬಿಡುತ್ತದೆ. ಹೊಸಬರಿಗೆ ಹೋಲಿಸಿದರೆ ಇಂಥಹವರಿಗೆ ಒಟಿಟಿ ಕಟ್ಟುವುದು ಸುಲಭ. ಕಂಟೆಂಟ್‌ಗಾಗಿ ಇವರು ಬೇರೊಬ್ಬರನ್ನು ಕೇಳುವ ಅಗತ್ಯವೂ ಇರುವುದಿಲ್ಲ. ಆದರೆ ಚಿತ್ರಮಂದಿರ ವ್ಯವಸ್ಥೆಯಲ್ಲಿ ಸಿನಿಮಾ ಬಿಡುಗಡೆ ಆದ ವಾರದೊಳಗೆ, ಒಮ್ಮೆಮ್ಮೆ ಬಿಡುಗಡೆ ಆಗುವ ಮುನ್ನವೇ ಲಾಭ ಬಂದು ಬಿಡುವಾಗ ಒಟಿಟಿಯೊಂದನ್ನು ಕಟ್ಟಿ, ಅದಕ್ಕೆ ಚಂದಾದಾರನ್ನು ಮಾಡಿಸಿಕೊಂಡು, ಕಂಟೆಂಟ್‌ಗಾಗಿ ಅವರಿವರನ್ನು ಕೇಳಿ, ಕಿತ್ತಾಡಿ ರಾಯಧನ ನೀಡಿ, ಆ ನಂತರ ಕಾದು ಲಾಭ ಪಡೆಯುವುದು ಗೋಜಿನ ವಿಷಯವಾಗಿರುವುದರಿಂದ ದೊಡ್ಡ ಜೇಬಿನ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ಒಟಿಟಿ ಸ್ಥಾಪನೆಗೆ ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಹರೀಶ್ ಮಲ್ಯ.

    ನೆಟ್‌ಫ್ಲಿಕ್ಸ್‌ನಂಥಹಾ ಒಟಿಟಿಗಳು ಕನ್ನಡದ ಸಿನಿಮಾಗಳ ಬಗ್ಗೆ ಅಸಡ್ಡೆ

    ನೆಟ್‌ಫ್ಲಿಕ್ಸ್‌ನಂಥಹಾ ಒಟಿಟಿಗಳು ಕನ್ನಡದ ಸಿನಿಮಾಗಳ ಬಗ್ಗೆ ಅಸಡ್ಡೆ

    ತಮ್ಮ ನೆರೆಯ ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಕಂಟೆಂಟ್‌ಗಳ ವೀವರ್‌ಶಿಪ್ ಕಡಿಮೆ ಇದೆ. ತಮಿಳುನಾಡಿನ ಕಂಟೆಂಟ್ ಅನ್ನು ಮಲೇಷ್ಯಾ ಇನ್ನಿತರೆ ಕಡೆಗಳಲ್ಲಿ ಜನ ನೋಡುತ್ತಾರೆ. ಮಲಯಾಳಂಗೆ ಸೌದಿ ರಾಷ್ಟ್ರಗಳಲ್ಲಿ ದೊಡ್ಡ ಸಂಖ್ಯೆಯ ನೋಡುಗ ವರ್ಗವಿದೆ. ಹಿಂದಿಗೆ ವಿಶ್ವದಾದ್ಯಂತ ನೋಡುಗರಿದ್ದಾರೆ. ಆದರೆ ಕನ್ನಡಕ್ಕೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಸಣ್ಣ ಪ್ರಮಾಣದ ವೀಕ್ಷಕರು ಬಿಟ್ಟರೆ ವಿಶ್ವಮಟ್ಟದಲ್ಲಿ ನೋಡುಗರ ಸಂಖ್ಯೆ ಅಲಕ್ಷಿಸಬಹುದಾದಷ್ಟು ಕಡಿಮೆ. ಇದರಿಂದಾಗಿಯೇ ಅಮೆಜಾನ್, ನೆಟ್‌ಫ್ಲಿಕ್ಸ್‌ನಂಥಹಾ ಒಟಿಟಿಗಳು ಕನ್ನಡದ ಸಿನಿಮಾಗಳ ಬಗ್ಗೆ ದೊಡ್ಡ ಅಸಡ್ಡೆ ಹೊಂದಿವೆ ಎಂದು ಒಳಮರ್ಮ ತೆರೆದಿಟ್ಟರು ಹರೀಶ್.

    ಕನ್ನಡದಲ್ಲಿ ಕೆಲವು ಒಟಿಟಿಗಳು ಈಗಾಗಲೇ ಇವೆ

    ಕನ್ನಡದಲ್ಲಿ ಕೆಲವು ಒಟಿಟಿಗಳು ಈಗಾಗಲೇ ಇವೆ

    ಕನ್ನಡದಲ್ಲಿ ಈಗಾಲಗೇ ಕೆಲವು ಸಣ್ಣ ಮಟ್ಟದ ಒಟಿಟಿಗಳು ಕಾರ್ಯನಿರ್ವಹಿಸುತ್ತಿವೆ, 'ಕಟ್ಟೆ', 'ನಮ್ಮ ಫ್ಲಿಕ್ಸ್' ಇತರೆ ಕೆಲವು ಇವೆ. ಆದರೆ ಅಲ್ಲಿ ಹೆಚ್ಚಿನ ಕಂಟೆಂಟ್ ಇಲ್ಲ. ಆ ಒಟಿಟಿಗಳವರೂ ಸಹ ಪ್ರತಿದಿನ ಸಿನಿಮಾ ನಿರ್ಮಾಪಕರಿಗೆ ಕರೆ ಮಾಡಿ ನಿಮ್ಮ ಸಿನಿಮಾ ನಮಗೆ ಕೊಡಿ ಎಂದು ಅಂಗಲಾಚುವಂತಾಗಿದೆ ಪರಿಸ್ಥಿತಿ. ಸಿನಿಮಾಕ್ಕೆ ಬಂಡವಾಳ ಹಾಕಿದ ನಿರ್ಮಾಪಕ, ''ನನ್ನ ಸಿನಿಮಾ ನಿಮಗೆ ಕೊಟ್ಟರೆ ಎಷ್ಟು ಲಕ್ಷ ಕೊಡುತ್ತೀರ?'' ಎಂಬ ಪ್ರಶ್ನೆ ಮುಂದಿಡುತ್ತಾನೆ. ಈ ಪ್ರಶ್ನೆಯಿಂದಾಗಿ ಹಲವು ಚರ್ಚೆಗಳು ಮಗಿದು ಹೋಗುತ್ತವೆ. ಒಟಿಟಿ ಮಾಲೀಕರು ಮತ್ತೊಬ್ಬ ನಿರ್ಮಾಪಕನಿಗೆ ಕರೆ ಮಾಡಿ ಕಂಟೆಂಟ್‌ಗಾಗಿ ಬೇಡಿಕೆ ಇಡುತ್ತಾರೆ. ಇದು ಮುಗಿಯದ ಕತೆ.

    ''ಬ್ಯಾಕಪ್‌' ಇಲ್ಲದೆ ಒಟಿಟಿ ನಡೆಸುವುದು ಸಾಧ್ಯವಿಲ್ಲ''

    ''ಬ್ಯಾಕಪ್‌' ಇಲ್ಲದೆ ಒಟಿಟಿ ನಡೆಸುವುದು ಸಾಧ್ಯವಿಲ್ಲ''

    ಇಂದಿನ ಕೆಲವು ಜನಪ್ರಿಯ ಒಟಿಟಿಗಳು ಸ್ವತಂತ್ರ್ಯ ಸಂಸ್ಥೆಗಳಲ್ಲ. ಅಮೆಜಾನ್‌ ಪ್ರೈಂಗೆ, ಅಮೆಜಾನ್ ಇ-ಕಾಮರ್ಸ್‌ನ ಬೆಂಬಲ ಇದೆ. ಸೋನಿ ಲಿವ್‌ಗೆ ಸೋನಿ ನೆಟ್‌ವರ್ಕ್, ಹಾಟ್‌ಸ್ಟಾರ್‌ಗೆ ಡಿಸ್ನಿ, ಸನ್‌ ನೆಕ್ಸ್ಟ್‌ಗೆ ಸನ್ ನೆಟ್‌ವರ್ಕ್ ಸಂಸ್ಥೆ ಹೀಗೆ ದೊಡ್ಡ ಸಂಸ್ಥೆಯೊಂದರ 'ಬ್ಯಾಕಪ್‌'ನಲ್ಲಿಯೇ ಒಟಿಟಿಗಳು ಕಾರ್ಯನಿರ್ವಹಿಸುತ್ತಿವೆ. ಒಟಿಟಿಗಳು ಹಣಗಳಿಸಲು ವಿಫಲವಾದರೂ ಮಾತೃಸಂಸ್ಥೆಯ ಲಾಭದಿಂದ ಹೇಗೋ ನಡೆದುಕೊಂಡು ಹೋಗುತ್ತವೆ. ಒಟಿಟಿಯೊಂದು ಯಾವ ದೊಡ್ಡ ಸಂಸ್ಥೆಯ ಬೆಂಬಲ ಅಥವಾ ನಿರ್ಮಾಣ ಸಂಸ್ಥೆಯ ಬೆಂಬಲವಿಂದೆ ಬೆಳೆದು ಲಾಭ ತಂದುಕೊಡುವುದು ಬಹು ಕಷ್ಟದ ಕೆಲಸ ಎಂದು ಒಟಿಟಿಗೆ ಬೇಕಾದ ಬೆಂಬಲದ ಬಗ್ಗೆ ವಿವರಸಿದರು ಹರೀಶ್ ಮಲ್ಯ.

    ತೆಲುಗಿನ 'ಆಹಾ' ಒಟಿಟಿ ಗಮನಿಸುವುದಾದರೆ?

    ತೆಲುಗಿನ 'ಆಹಾ' ಒಟಿಟಿ ಗಮನಿಸುವುದಾದರೆ?

    ತೆಲುಗಿನ 'ಆಹಾ' ಒಟಿಟಿ ಸೊನ್ನೆಯಿಂದಲೇ ಶುರುವಾದದ್ದು ಆದರೆ ಅವರಿಗೆ ಅವರದ್ದೇ ಆದ ದೊಡ್ಡ ನಿರ್ಮಾಣ ಸಂಸ್ಥೆ ಇದೆ. ಒಟಿಟಿ ಪ್ರಾರಂಭಕ್ಕೂ ಮುನ್ನ ಅವರು ದೊಡ್ಡ ಮಟ್ಟದ ಗ್ರೌಂಡ್ ವರ್ಕ್ ಮಾಡಿದ್ದರು. ಆದರೂ ಅದಿನ್ನೂ ಪ್ರಯೋಗದ ಹಂತದಲ್ಲಿದೆ. ಟಾಕ್ ಶೋ, ವೆಬ್ ಸರಣಿಗಳನ್ನು ಪ್ರಯತ್ನಿಸಿ ನೋಡುತ್ತಿದ್ದಾರೆ. ಅಲ್ಲದೆ, ತೆಲುಗಿನ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ ಹೊರಗಿನ ನಿರ್ದೇಶಕರು, ಸಿನಿಮಾ ಕರ್ಮಿಗಳ ನೆರವು ಸಹ ತೆಗೆದುಕೊಂಡು ಹೊಸ ಕಂಟೆಂಟ್ ಅನ್ನು ನೀಡುತ್ತಿದ್ದಾರೆ ಎಂದರು ಹರೀಶ್ ಮಲ್ಯ.

    ಒಟಿಟಿ ನಿರ್ಮಾಣ ಸಾಧ್ಯವಾ?

    ಒಟಿಟಿ ನಿರ್ಮಾಣ ಸಾಧ್ಯವಾ?

    ಕನ್ನಡದಲ್ಲಿ ಒಂದು ಜನಪ್ರಿಯ ಒಟಿಟಿ ನಿರ್ಮಾಣವಾಗಬೇಕಾದರೆ ದೊಡ್ಡ ನಿರ್ಮಾಣ ಸಂಸ್ಥೆಗಳು, ಸ್ಟಾರ್ ನಟರು ಮನಸ್ಸು ಮಾಡಬೇಕು. 'ಕೆಜಿಎಫ್ 2' ಅಥವಾ ಇನ್ನಾವುದೇ ದೊಡ್ಡ ಸ್ಟಾರ್ ನಟರ ಸಿನಿಮಾವೊಂದನ್ನು ಎಕ್ಸ್‌ಕ್ಲ್ಯೂಸಿವ್ ಆಗಿ ಹೊಸ ಕನ್ನಡ ಒಟಿಟಿಯಲ್ಲಿಯೇ ಬಿಡುಗಡೆ ಮಾಡುತ್ತೇವೆ ಸಬ್‌ಸ್ಕ್ರೈಬ್ ಆಗಿ ಸಿನಿಮಾ ನೋಡಿರಿ ಎಂದು ಹೇಳಿ ಹೊಸ ಒಟಿಟಿಗೆ ಚಂದಾದಾರನ್ನು ತಂದು, ಅವರಿಗೆ ಒಳ್ಳೆಯ ಕಂಟೆಂಟ್ ವೀಕ್ಷಿಸಲು ನೀಡಿ ವೀಕ್ಷಕರನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಸ್ಟಾರ್ ನಟರು ಇದಕ್ಕೆ ಒಪ್ಪುತ್ತಾರಾ? ಚಿತ್ರಮಂದಿರ ವ್ಯವಸ್ಥೆಯಲ್ಲಿ ಹೆಚ್ಚು ರಿಸ್ಕ್ ಇಲ್ಲದೆ, ಕಾಯುವಿಕೆ ಇಲ್ಲದೆ ಹಣ ಗಳಿಸುತ್ತಿರುವ ನಿರ್ಮಾಪಕರು ಒಟಿಟಿ ಮಾಡಲು ಸಿದ್ಧರಾಗುತ್ತಾರಾ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು.

    English summary
    Why Kannada language did not have its own popular OTT. What is the problems for having its own OTT.
    Thursday, July 8, 2021, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X