ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಗೆ ಬಂತು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಸಿನಿಮಾ ; ಎಲ್ಲಿ ನೋಡಬಹುದು ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.
ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ವಿತ್ ಲವ್'' ಸಿನಿಮಾ ಬರುತ್ತಿದೆ.
ಹೌದು, ''ವಿತ್ ಲವ್''.. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮುದ್ದಿನ ಮಗಳು ಸೌಂದರ್ಯ ರಜಿನಿಕಾಂತ್ ನಿರ್ಮಾಣದ ಚಿತ್ರ. ಈ ವರ್ಷದ ಆರಂಭದಲ್ಲಿಯೇ ತಮಿಳು ಚಿತ್ರರಂಗದಲ್ಲಿ ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದ ಸಿನಿಮಾ ಇದು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ₹28.65 ಕೋಟಿಯನ್ನು ಈ ಚಿತ್ರ ದೋಚಿದೆ. ವಿಶೇಷ ಅಂದರೆ koimoi ವರದಿಯ ಪ್ರಕಾರ ಈ ಚಿತ್ರದ ನಿರ್ಮಾಣಕ್ಕೆ ಖರ್ಚಾಗಿದ್ದು ಕೇವಲ 4 ಕೋಟಿ ಮಾತ್ರ.
ನಾಲ್ಕು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಭಾರತದಲ್ಲಿಯೇ 28 ಕೋಟಿಯನ್ನು ಗಳಿಸಿದ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ಅಭಿಷನ್ ಜೀವಂತ್ ನಿರ್ವಹಿಸಿದ್ದಾರೆ. ಇವರು ಬೇರೆ ಯಾರು ಅಲ್ಲ ಬದಲಿಗೆ ಕಳೆದ ವರ್ಷ ತೆರೆಗೆ ಬಂದು ದಾಖಲೆ ಮೇಲೆ ದಾಖಲೆ ಬರೆದ ''ಟೂರಿಸ್ಟ್ ಫ್ಯಾಮಿಲಿ'' ಚಿತ್ರದ ನಿರ್ದೇಶಕ. ಪೂರ್ಣ ಪ್ರಮಾಣದ ನಾಯಕನಾಗಿ ಇದು ಇವರ ಮೊದಲ ಪ್ರಯತ್ನ. ಅನಸ್ವರಾ ರಾಜನ್ ಈ ಚಿತ್ರದ ನಾಯಕಿ.
ಇನ್ನು ಈ ಹಿಂದೆ ''ಲವರ್'' ಸೇರಿ ಹಲವು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮದನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೊದಲ ಪ್ರೀತಿ ಮತ್ತು ಶಾಲಾ ದಿನಗಳಿಗೆ ಎಲ್ಲರನ್ನೂ ಕರೆದೊಯ್ಯುವ ಪ್ರಯತ್ನವನ್ನು ಇವರು ಇಲ್ಲಿ ಮಾಡಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಸ್ವತಃ ಈ ಚಿತ್ರವನ್ನು ಣೋಡಿ ಮೆಚ್ಚಿಕೊಂಡಿದ್ದರು. ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.

ಚಿತ್ರದ ತಾರಾಬಳಗ
ಅಭಿಷನ್ ಜೀವಂತ್, ಅನಸ್ವರಾ ರಾಜನ್, ಹರೀಶ್ ಕುಮಾರ್, ಸಂಚನಾ ನೇಮಿದಾಸ್, ಥೇನಿ ಮುರುಗನ್, ಆರ್.ಜೆ.ಡಿಂಪಲ್ ಖನ್ನಾ, ಕಾವ್ಯಾ ಅನಿಲ್, ಮುಂತಾದವರು.
ತಾಂತ್ರಿಕ ವರ್ಗ
ನಿರ್ದೇಶನ - ಮದನ್. ನಿರ್ಮಾಪಕರು- ಸೌಂದರ್ಯ ರಜನಿಕಾಂತ್, ಮಗೇಶ್ ರಾಜ್ ಪಸಿಲಿಯನ್ ಮತ್ತು ಪಸಿಲಿಯನ್ ನಜರೆತ್. ಸಂಗೀತ ನಿರ್ದೇಶನ - ಶಾನ್ ರೋಲ್ಡನ್. ಛಾಯಾಗ್ರಹಣ - ಶ್ರೇಯಸ್ ಕೃಷ್ಣ
ಎಲ್ಲಿ ನೋಡಬಹುದು, ಎಂದಿನಿಂದ ?
ಸುಮಾರು 2 ಗಂಟೆ 21 ನಿಮಿಷ ಅವಧಿಯನ್ನು ಹೊಂದಿರುವ ''ವಿತ್ ಲವ್'' ಚಿತ್ರ ಇದೇ ಮಾರ್ಚ್ ಆರರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಕೇವಲ ತಮಿಳಿನಲ್ಲಿ ಮಾತ್ರವಲ್ಲದೆ ಈ ಚಿತ್ರವನ್ನು ತೆಲುಗು, ಮಲಯಾಳಂ ಮತ್ತು ಹಿಂದಿಗೆ ಕೂಡ ಡಬ್ ಮಾಡಲಾಗಿದೆ. ಕನ್ನಡ ಕಲಾ ಪ್ರೇಮಿಗಳು ಈ ಚಿತ್ರವನ್ನು ಕನ್ನಡದಲ್ಲಿ ಕೂಡ ನೋಡಬಹುದು.


Click it and Unblock the Notifications











