Year Ender 2024: ಈ ವರ್ಷ ಬಾಕ್ಸಾಫೀಸ್‌ನಲ್ಲಿ ಸೋತು ಓಟಿಟಿಯಲ್ಲಿ ಗೆದ್ದ ಕನ್ನಡ ಚಿತ್ರಗಳ ಪಟ್ಟಿ
ಈ ವರ್ಷ ಬಾಕ್ಸಾಫೀಸ್‌ನಲ್ಲಿ ಕನ್ನಡ ಚಿತ್ರಗಳು ದೊಡ್ಡದಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ 'ಭೀಮ', 'ಕೃಷ್ಣಂ ಪ್ರಣಯ ಸಖಿ', 'ಬಘೀರ' ಹಾಗೂ 'ಭೈರತಿ ರಣಗಲ್' ಚಿತ್ರಗಳು ಹಿಟ್ ಲಿಸ್ಟ್ ಸೇರಿದೆ. ಇನ್ನುಳಿದಂತೆ ಯಾವುದೇ ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ.
ಬಾಕ್ಸಾಫೀಸ್‌ನಲ್ಲಿ ಮುಗ್ಗಿರಿಸಿದ ಕೆಲ ಚಿತ್ರಗಳು ಈ ವರ್ಷ ಓಟಿಟಿಯಲ್ಲಿ ಸದ್ದು ಮಾಡಿದ್ದು ವಿಶೇಷ. ಕನ್ನಡದ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಮೀನಾಮೇಷ ಎಣಿಸುತ್ತಿವೆ. ದೊಡ್ಡ ಚಿತ್ರಗಳನ್ನು ಖರೀದಿಸುತ್ತಿವೆ. ಆಗೊಮ್ಮೆ ಈಗೊಮ್ಮೆ ಸಣ್ಣ ಚಿತ್ರಗಳನ್ನು ಕೊಂಡುಕೊಳ್ಳುತ್ತವೆ. ಅದು ಕೂಡ ಪೇ ಪಾರ್ ವೀವ್ ಲೆಕ್ಕದಲ್ಲಿ ರೈಟ್ಸ್ ಪಡೆಯುತ್ತಿವೆ. ಅದಕ್ಕೂ ಒಂದಷ್ಟು ನಿಯಮಗಳಿವೆ.

ಒಟ್ಟಾರೆ ಈ ವರ್ಷ ಒಂದಷ್ಟು ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗಲಿಲ್ಲ. ಆರಂಭದಲ್ಲಿ ಸಿನಿಮಾ ನೋಡಿದವರು ಚೆನ್ನಾಗಿದೆ ಎಂದು ಜನ ಚಿತ್ರಮಂದಿರಗಳಿಗೆ ಬರಲಿಲ್ಲ. ಆದರೆ ಓಟಿಟಿಗೆ ಬಂದಮೇಲೆ ಸಿನಿಮಾ ಸೂಪರ್, ಛೇ ಬಿಗ್‌ಸ್ಕ್ರೀನ್‌ನಲ್ಲಿ ಮಿಸ್ ಮಾಡ್ಕೊಂಡೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ವರ್ಷ ಆ ರೀತಿ ಓಟಿಟಿಯಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡ ಚಿತ್ರಗಳ ಲಿಸ್ಟ್ ಮುಂದೆ ಇದೆ ಓದಿ.
1. ಕೇಸ್ ಆಫ್ ಕೊಂಡಾಣ
ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ 'ಕೇಸ್ ಆಫ್ ಕೊಂಡಾಣ' ಸಿನಿಮಾ ಓಟಿಟಿಯಲ್ಲಿ ಹೆಚ್ಚು ಸದ್ದು ಮಾಡಿತ್ತು. ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹಾಗೂ ಭಾವನಾ ಮೆನನ್ ನಟಿಸಿದ್ದರು. ಜನವರಿ 26ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಮಾರ್ಚ್ 31ಕ್ಕೆ ಪ್ರೈಂ ವೀಡಿಯೋಗೆ ಬಂದಿತ್ತು.

2. ಶಾಖಾಹಾರಿ
ಈ ವರ್ಷದ ದೊಡ್ಡ ಓಟಿಟಿ ಹಿಟ್ ಸಿನಿಮಾ ಅಂದ್ರೆ ಅದು 'ಶಾಖಾಹಾರಿ'. ರಂಗಾಯಣ ರಘು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಈ ಮರ್ಡನ್ ಮಿಸ್ಟರಿ ಚಿತ್ರಕ್ಕೆ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದರು. ಫೆಬ್ರವರಿ 16ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರ ಬರ ಎದುರಿಸಿತ್ತು. ಇತ್ತೀಚೆಗೆ ತೆಲುಗು, ತಮಿಳಿಗೂ ಡಬ್ ಆಗಿ ಪ್ರೈಂ ವೀಡಿಯೋದಲ್ಲಿ ಸಿನಿಮಾ ರಿಲೀಸ್ ಆಗಿತ್ತು.
3. ಬ್ಲಿಂಕ್
ಕನ್ನಡ ಚಿತ್ರರಂಗದ ಮತ್ತೊಂದು ವಿಭಿನ್ನ ಪ್ರಯತ್ನ 'ಬ್ಲಿಂಕ್'. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಟೈಂ ಟ್ರಾವೆಲರ್ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದರು. ಓಟಿಟಿಯಲ್ಲಿ ಸಿನಿಮಾ ನೋಡಿದ ಮಂದಿ ಮೆಚ್ಚಿಕೊಂಡಾಡಿದರು. ಕೆಲವರು ನಿರ್ದೇಶಕರಿಗೆ ಸಿನಿಮಾ ಟಿಕೆಟ್ ಹಣವನ್ನು ಕಳುಹಿಸಿದ್ದರು.
4. O2
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿ ಬಂದಿದ್ದ 'O2' ಚಿತ್ರ ಕೂಡ ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿ ಹೆಚ್ಚು ಪ್ರೇಕ್ಷಕರನ್ನು ರಂಜಿಸಿತ್ತು. ಈ ಮೆಡಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದರು. ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ.
5. ಇಬ್ಬನಿ ತಬ್ಬಿದ ಇಳೆಯಲಿ
ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಸೆಪ್ಟೆಂಬರ್ 5ಕ್ಕೆ ತೆರೆಗೆ ಬಂದಿತ್ತು. ಆದರೆ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಬಳಿಕ ಸಿನಿಮಾ ಓಟಿಟಿಗೆ ಬಂದು ವೀಕ್ಷಕರನ್ನು ರಂಜಿಸಿತ್ತು. ಅಯ್ಯೋ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕಿತ್ತು ಎಂದು ಕೆಲವರು ಕೈ ಕೈ ಹಿಸುಕಿಕೊಂಡಿದ್ದರು.
ಇನ್ನುಳಿದಂತೆ 'ಮೂರನೇ ಕೃಷ್ಣಪ್ಪ', 'ಮಾರ್ಟಿನ್' ಹಾಗೂ 'ಬಘೀರ' ಚಿತ್ರಗಳು ಕೂಡ ಓಟಿಟಿಯಲ್ಲಿ ಸದ್ದು ಮಾಡಿದ್ದವು. ತೆರೆಗೆ ಬಂದಾಗ 'ಮಾರ್ಟಿನ್' ಸಿನಿಮಾ ಬಹಳ ಟ್ರೋಲ್ ಆಗಿತ್ತು. ಯಾಕೆ ಜನ ಇಷ್ಟು ಟೀಕೆಸುತ್ತಾರೆ ಎಂದು ಕುತೂಹಲದಿಂದ ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಿದ್ದರು. ಇನ್ನು 'ಬಘೀರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 20 ದಿನಗಳ ಬಳಿಕ ಓಟಿಟಿಗೆ ಬಂದು ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡ್ ಆಗಿತ್ತು.


Click it and Unblock the Notifications











