Ekka Ott: ಡಬಲ್ ಧಮಾಕಾ; ಓಟಿಟಿಗೆ 'ಎಕ್ಕ' ಬರೋದು ಯಾವಾಗ?
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರೂ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆ. ಶೋಗಳು ಹೌಸ್‌ಫುಲ್ ಆಗ್ತಿದೆ. ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.
ಬಾಕ್ಸಾಫೀಸ್ ಗಳಿಕೆ ಮಾತ್ರವಲ್ಲ 'ಎಕ್ಕ' ನಾನ್ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಕೂಡ ಜೋರಾಗಿದೆ. ಚಿತ್ರತಂಡವೇ ಹೇಳಿರುವಂತೆ ಸಿನಿಮಾ ಬಿಡುಗಡೆಗೂ ನಿರ್ಮಾಪಕರು ಸೇಫ್ ಆಗಿದ್ದರು. ಅಷ್ಟೇ ಅಲ್ಲ, ಲಾಭದಲ್ಲಿದ್ದರು. ಇದೀಗ ಚಿತ್ರಮಂದಿರಗಳಲ್ಲಿ ಕೂಡ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡ್ತಿದೆ. ವರ್ಷದ ಮೊದಲ ಹಿಟ್ ಸಿನಿಮಾ ಎನಿಸುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಇನ್ನು 'ಎಕ್ಕ' ಸಿನಿಮಾ ಆಡಿಯೋ ರೈಟ್ಸ್, ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕನ್ನಡ ಸಿನಿಮಾಗಳು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತವೆ. ಆದರೆ 'ಎಕ್ಕ' ಸಿನಿಮಾ ಓಟಿಟಿ ಡೀಲ್ ಬಹಳ ಬೇಗ ಮುಗಿದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ದಯವಿಟ್ಟು ಗಮನಿಸಿ' ಹಾಗೂ 'ರತ್ನನ್ ಪ್ರಪಂಚ' ಬಳಿಕ ರೋಹಿತ್ ಪದಕಿ ಕಟ್ಟಿಕೊಟ್ಟಿರುವ ಸಿನಿಮಾ 'ಎಕ್ಕ'. ಇನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಸೆಟ್ಟೇರಿದ ದಿನದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು. ಮೊದಲ ದಿನ ಚಿತ್ರ 1.60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.

'ಎಕ್ಕ' ಚಿತ್ರದ ಟೀಸರ್, ಸಾಂಗ್ಸ್ ಹಾಗೂ ಟ್ರೈಲರ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿತ್ತು. ಅಂತಿಮವಾಗಿ ಸಿನಿಮಾ ತೆರೆಗೆ ಬಂದಿದೆ. ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಯುವ ರಾಜ್‌ಕುಮಾರ್ ಎರಡನೇ ಪ್ರಯತ್ನದಲ್ಲಿ ಕೂಡ ಗೆದ್ದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬೆಂಗಳೂರು ಅಂಡರ್‌ವರ್ಲ್ಡ್ ಜೊತೆಗೆ ಮದರ್ ಸೆಂಟಿಮೆಂಟ್, ಪುಟ್ಟ ಮಗುವಿನ ಸೆಂಟಿಮೆಂಟ್ ಅಂಶಗಳನ್ನು ಸೇರಿಸಿ 'ಎಕ್ಕ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. 'ಬ್ಯಾಂಗಲ್ ಬಂಗಾರಿ' ಸಾಂಗ್ ಚಿತ್ರದ ಹೈಲೆಟ್. ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಸುಮಾರ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆಲ್ಲುವ ಸುಳಿವು ಸಿಕ್ತಿದೆ. ಇದೆಲ್ಲದರ ನಡುವೆ ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಜೀ ಕನ್ನಡ ಸಂಸ್ಥೆಗೆ 'ಎಕ್ಕ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ 7 ವಾರಗಳ ಬಳಿಕ ಓಟಿಟಿಗೆ ಬರುವ ನಿರೀಕ್ಷೆಯಿದೆ. ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಓಟಿಟಿಗೆ ಎಂಟ್ರಿಗೆ ಆಗಬಹುದು. ಅದಕ್ಕಿಂತ ಬೇಗ ಬಂದರೂ ಅಚ್ಚರಿ ಪಡಬೇಕಿಲ್ಲ.
ಇತ್ತೀಚಿನ ದಿನಗಳಲ್ಲಿ ಜೀ ಸಂಸ್ಥೆ ಓಟಿಟಿ ಹಾಗೂ ಟಿವಿಯಲ್ಲಿ ಒಮ್ಮೆಲೆ ಸಿನಿಮಾ ಪ್ರದರ್ಶನ ಮಾಡುತ್ತದೆ. ಅಂದರೆ ಜೀ5 ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸಮಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಎರಡೂ ರೈಟ್ಸ್ ಜೀ ಸಂಸ್ಥೆಗೆ ಸಿಕ್ಕಿದ್ದರೆ ಇದೇ ರೀತಿ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವನ್ನು ಕೂಡ ಇದೇ ರೀತಿ ಜೀ ಸಂಸ್ಥೆ ಓಟಿಟಿ ಹಾಗೂ ಟಿವಿಯಲ್ಲಿ ಒಮ್ಮೆಲೆ ಪ್ರಸಾರ ಮಾಡಿತ್ತು.
ವಿಶೇಷ ಸೂಚನೆ: 'ಎಕ್ಕ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್, ಯಾರಿಗೆ ರೈಟ್ಸ್ ಮಾರಾಟವಾಗಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದು ಬರೀ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಮಾತ್ರ.


Click it and Unblock the Notifications











